ವರದಕ್ಷಿಣೆ ಪಿಡುಗು ತೊಲಗಲಿ: ಜಯಶ್ರೀ
ಕನ್ನಡಪ್ರಭ ವಾರ್ತೆ, ಗದಗ, ಅ. 14
ವರದಕ್ಷಿಣೆ ಒಂದು ಸಾಮಾಜಿಕ ಪಿಡುಗಾಗಿದ್ದು, ಈ ಸಮಸ್ಯೆ ನಿವಾರಣೆಗಾಗಿ ಯುವ ಪೀಳಿಗೆ ಸಿಡಿದೇಳಬೇಕಾಗಿದೆ ಎಂದು ಗದಗನ ಕೆಎಲ್ಇ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಜಯಶ್ರೀ ಪಾಟೀಲ ಅಭಿಪ್ರಾಯ ಪಟ್ಟರು.
ಅವರು ನಗರದ ಕೆಎಲ್ಇ ಮಹಾವಿದ್ಯಾಲಯದಲ್ಲಿ ಈಚೆಗೆ ಗದಗ-ಬೆಟಗೇರಿ ಇನ್ನರ್ವೀಲ್ ಕ್ಲಬ್ ವತಿಯಿಂದ ವಿದ್ಯಾರ್ಥಿನಿಯರಿಗಾಗಿ ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು ವಿಷಯವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ವರದಕ್ಷಿಣೆಯ ಪಿಡುಗು ಬೃಹದಾಕಾರದಲ್ಲಿ ಬೆಳೆದು ನಿಂತಿದೆ. ಇದರಿಂದಾಗಿ ಸಾವಿರಾರು ಅಮಾಯಕರು ಬಲಿಯಾಗುತ್ತಿದ್ದಾರೆ. ಇದನ್ನು ಬೇರು ಸಮೇತ ಕಿತ್ತೊಗೆಯಲು ನಾವೆಲ್ಲರೂ ಕಂಕಣಬದ್ಧರಾಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ಲಬ್ ಅಧ್ಯಕ್ಷ ಅನ್ನಪೂರ್ಣಾ ವರವಿ ಮಾತನಾಡಿ, ಸಾಮಾಜಿಕ ಸಂಘಟನೆಗಳು, ಸಂಘ ಸಂಸ್ಥೆಗಳು ವರದಕ್ಷಿಣೆಯ ವಿರುದ್ಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಕವಿತಾ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಬಂಧ ಸ್ಪರ್ಧೆಯಲ್ಲಿ ಜಿ.ಜಿ. ಪಾಟೀಲ ಪ್ರಥಮ, ಮೈಲಾರಪ್ಪ ಚಲವಾದಿ ಹಾಗೂ ರೇಷ್ಮಾ ಹಿರೇಮನಿ ದ್ವಿತೀಯ, ಎಚ್.ಬಿ. ಚಲವಾದಿ ಹಾಗೂ ಎಂ.ಎಸ್. ರುಬಿನಾ ತೃತೀಯ ಸ್ಥಾನ ಪಡೆದುಕೊಂಡರು. ನಿರ್ಣಾಯಕರಾಗಿ ಡಾ. ಜೆ.ಎ. ಪಾಟೀಲ, ಪ್ರೊ. ಎಂ.ಬಿ. ಕೊಳವಿ, ಬಿ.ಎನ್. ತಾರಾ ಕಾರ್ಯನಿರ್ವಹಿಸಿದರು. ಪ್ರಭಾ ಮುನವಳ್ಳಿ, ಅನುಸೂಯಾ ದೇವಾಂಗಮಠ, ಎಸ್.ಎಸ್. ಸಂಗೊಳ್ಳಿ, ವಿಶಾಲ ತಳಗಡೆ, ಕಮಲಾ ಜಂಬಗಿ, ಎ.ಕೆ. ಮಠ, ಐ.ಬಿ. ಪಾಟೀಲ, ಎಂ.ಎಂ. ತೆಗ್ಗಿಹಳ್ಳಿ, ಎಸ್.ವಿ. ಬೆಣಕಲ್ಮಠ, ಸರೋಜಿನಿ ಹಕ್ಕಾಪಕ್ಕಿ, ವಿದ್ಯಾ ಶಿವನಗುತ್ತಿ, ಶಾಂತಾ ಮುಂದಿನಮನಿ ಮುಂತಾದವರು ಉಪಸ್ಥಿತರಿದ್ದರು.
ಆಶಾ ಹುಕ್ಕೇರಿ ಪ್ರಾರ್ಥಿಸಿದರು. ಅನ್ನಪೂರ್ಣಾ ವರವಿ ಸ್ವಾಗತಿಸಿದರು. ಶೋಭಾ ಪಾಟೀಲ ನಿರೂಪಿಸಿದರು. ಕ್ಲಬ್ನ ಕಾರ್ಯದರ್ಶಿ ಸುಲೋಚನಾ ಐಹೊಳಿ ವಂದಿಸಿದರು.