ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಂತೋಜಿ ಕುಟುಂಬಸ್ಥರಿಂದಲೇ ಗಾಂಧಿ ಪ್ರತಿಮೆ ಅನಾವರಣ

Mainashree
Updated On : 15 Oct 2013, 11:49 am

ರೋಣ: ಪಟ್ಟಣದ ಮಿನಿ ವಿಧಾನಸೌಧದ ಎದುರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬವಾದ ಸಂತೋಜಿಯವರು ನಿರ್ಮಿಸಿದ್ದ ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಪ್ರತಿಮೆಯನ್ನು ಹಲವಾರು ತಿಂಗಳಿಂದ ಅನಾವರಣ ಮಾಡದೇ ಇಲ್ಲ ಸಲ್ಲದ ಕಾರಣ ನೀಡುತ್ತಾ, ವಿಳಂಬ ಮಾಡುತ್ತಿದ್ದ ತಾಲೂಕು ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯ ಸಹಿಸದೇ, ನಿರ್ಮಿಸಿದ ಕುಟುಂಬದವರೇ ಅದನ್ನು ಉದ್ಘಾಟಿಸಿ ದೇಶ ಪ್ರೇಮ ಮೆರೆದಿದ್ದಾರೆ.  
ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯ ಸ್ಮರಣೆಗಾಗಿ ಪಟ್ಟಣದ ಸ್ವಾತಂತ್ರ್ಯ ಹೋರಾಟಗಾರ ಗುರುಪಾದಪ್ಪ ಸಂತೋಜಿ ಅವರು ಈ ಹಿಂದಿನ ಜಿಲ್ಲಾಧಿಕಾರಿ ಮತ್ತು ತಾಲೂಕು ದಂಡಾಧಿಕಾರಿಗಳ ಒಪ್ಪಿಗೆ ಪಡೆದು, ಪಟ್ಟಣದ ಮಿನಿ ವಿಧಾನಸೌಧದ ಎದುರು, ತಮ್ಮ ಸ್ವ-ಖರ್ಚಿನಿಂದ ರು. 4 ಲಕ್ಷ ವೆಚ್ಚದಲ್ಲಿ ಸುಂದರವಾದ ಗಾಂಧಿ ಪ್ರತಿಮೆಯನ್ನು ನಿರ್ಮಿಸಿದ್ದರು. ಆದರೆ, ಹಲವು ದಿನಗಳಿಂದ ತಾಲೂಕು ಆಡಳಿತ ತನ್ನ ಸುಪರ್ದಿಗೆ ಪಡೆದು ಅನಾವರಣ ಗೊಳಿಸದೇ ಮುಂದೂಡುತ್ತಲೇ ಬಂದಿತ್ತು.  
ಮನವಿ ಮಾಡಿದರೂ ಸ್ಪಂದಿಸಲಿಲ್ಲ: ಗಾಂಧೀಜಿ ಪ್ರತಿಮೆ ನಿರ್ಮಿಸಿದ ಸಂತೋಜಿ ಕುಟುಂಬ ಸದಸ್ಯರು ಪ್ರತಿಮೆ ಅನಾವರಣದ ಭಾಗ್ಯ ಕಲ್ಪಿಸಿ ಎಂದು ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಕ್ಕೆ ಒಂದು ವರ್ಷದಿಂದ ದುಂಬಾಲು ಬಿದ್ದಿದ್ದರೂ ಸ್ಥಳೀಯ ಚುನಾವಣೆ, ಸಾರ್ವತ್ರಿಕ ಚುನಾವಣೆಯ ನೀತಿ ಸಂಹಿತೆ ನೆಪ ಹೇಳುತ್ತಾ ಅಧಿಕಾರಿಗಳು ಅನಾವರಣದ ದಿನಾಂಕವನ್ನು ಮುಂದೂಡುತ್ತಲೇ ಬಂದರು. ಬಳಿಕ ಅಕ್ಟೋಬರ್ 2ರಂದು ಗಾಂಧೀಜಿ ಜಯಂತಿ ದಿನದಂದು ಉದ್ಘಾಟನೆ ಮಾಡುವುದಾಗಿ ತಿಳಿಸಿತ್ತು. ಆದರೆ, ಆ ಭರವಸೆಯೂ ಹುಸಿಯಾಯಿತು.
ನೊಂದ ಹೋರಾಟಗಾರ: ಜಿಲ್ಲಾ ಮತ್ತು ತಾಲೂಕು ಆಡಳಿತ ಉದ್ಘಾಟನೆಯ ದಿನಾಂಕವನ್ನು ನಿಗದಿಪಡಿಸದೇ ಮುಂದೂಡುತ್ತಿರುವುದು ಯಾಕೆ ಎಂದು ಯೋಚಿಸಿ ಸ್ವಾತಂತ್ರ್ಯ ಹೋರಾಟಗಾರ ಗುರುಪಾದಪ್ಪ ಸಂತೋಜಿ ಈ ನೋವಿನಿಂದ ಹಾಸಿಗೆ ಹಿಡಿದಿದ್ದಾರೆ. ಸದ್ಯ ಗದಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 15 ದಿನಗಳಿಂದ ಗಂಜಿ ಮತ್ತು ಎಳೆ ನೀರನ್ನು ಮಾತ್ರ ಸೇವಿಸುತ್ತಿದ್ದಾರೆ. ಗಾಂಧಿ ಪ್ರತಿಮೆ ಅನಾವರಣ ಗೊಳ್ಳದ್ದರಿಂದ ನಮ್ಮ ತಂದೆ ಹಾಸಿಗೆ ಹಿಡಿಯುವಂತಾಯಿತು. ಅಲ್ಲಿ ಮೂರ್ತಿ ಸ್ಥಾಪಿಸಿದ್ದೇ ನಮ್ಮ ತಪ್ಪಾಯಿತೇ ಎಂಬ ಕೊರಗು ನಮ್ಮನ್ನು ಕಾಡುತ್ತಿದೆ ಎಂದು ಮಗ ಕಳಕಪ್ಪ ಸಂತೋಜಿ 'ಕನ್ನಡಪ್ರಭ' ಎದುರು ಅಳಲು ತೋಡಿಕೊಂಡರು.

ಸ್ವಾತಂತ್ರ್ಯ ಪೂರ್ವದಲ್ಲಿ 1934 ಮಾರ್ಚ್ 3ರಂದು ಗಾಂಧೀಜಿಯವರು ರೋಣ ತಾಲೂಕಿನ ಜಕ್ಕಲಿ ಗ್ರಾಮಕ್ಕೆ ಬಂದಾಗ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಲು ಉತ್ಸಾಹ, ಸ್ಫೂರ್ತಿ ತುಂಬಿದ್ದರು. ಅದರಂತೆ ನಾನು ಅನೇಕ ಚಳವಳಿಯಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದ್ದೆ. ಅದ್ಯಾವುದು ನನಗೆ ನೋವು ಅನ್ನಿಸಿರಲಿಲ್ಲ. ಈಗ ಗಾಂಧಿ ಸ್ಮರಣೆಗಾಗಿ ಸ್ವಂತ ಖರ್ಚಿನಿಂದ ಮೂರ್ತಿ ಸ್ಥಾಪಿಸಿದ್ದು, ಅದರ ಅನಾವರಣಕ್ಕೆ ವರ್ಷ ಕಳೆದರೂ ದಿನಾಂಕ ನಿಗದಿಪಡಿಸದೇ ಇರುವುದು ನೋವುಂಟು ಮಾಡಿದೆ. ಅದ್ಯಾಕೆ ಅಧಿಕಾರಿಗಳು ಹೀಗೆ ಮಾಡಿದರು. ಸ್ವಾತಂತ್ರ್ಯ ಹೋರಾಟಗಾರರ ಭಾವನೆಗೆ ಬೆಲೆಯೇ ಇಲ್ಲವೇ?
ಟ ಗುರುಪಾದಪ್ಪ ಸಂತೋಜಿ
97 ಇಳಿ ವಯಸ್ಸಿನ ಸ್ವಾತಂತ್ರ್ಯ ಹೋರಾಟಗಾರ
ಮಿನಿ ವಿಧಾನಸೌಧ ಎದುರು ಇರುವ ಗಾಂಧೀಜಿ ಪ್ರತಿಮೆಗೆ ಭಾನುವಾರ ಪೂಜೆ ಸಲ್ಲಿಸಿದ ಬಗ್ಗೆ ನನಗೆ ಯಾವದೇ ಮಾಹಿತಿ ಇಲ್ಲ. ಅಲ್ಲಿ ಕಾವಲು ಕಾಯುತ್ತಿರುವ ನಮ್ಮ ಸಿಬ್ಬಂದಿಯೂ ನನಗೆ ಏನೂ ತಿಳಿಸಿಲ್ಲ. ಪ್ರತಿಮೆ ಅನಾವರಣ ಕುರಿತು ಮೊನ್ನೆ ಸಂತೋಜಿಯವರು ನನ್ನ ಹತ್ತಿರ ಬಂದಿದ್ದರು. ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಎಂದಷ್ಟೇ ಹೇಳಿದ್ದೆ.
 ಎ.ಜಿ. ಪಂಡಿತ ತಹಸೀಲ್ದಾರ್, ರೋಣ ತಾಲೂಕು
ಅಕ್ಟೋಬರ್ 2ರಂದು ಗಾಂಧೀಜಿ ಜಯಂತಿಯಂದು ಮೂರ್ತಿ ಅನಾವರಣಗೊಳಿಸಿದ್ದರೆ ಅದಕ್ಕೊಂದು ಮಹತ್ವ ಬರುತ್ತಿತ್ತು. ಈ ರೀತಿ ರಜಾ ದಿನದಂದು ರಾಷ್ಟ್ರಕ್ಕೆ ಬೆಳಕು ನೀಡಿದ ಮಹಾತ್ಮನ ಮೂರ್ತಿಯನ್ನು ಸದ್ದಿಲ್ಲದೇ ಅನಾವರಣಗೊಳಿಸಿದ್ದು ಬೇಸರದ ಸಂಗತಿ.
 ಪ್ರಕಾಶ ಹೊಸಳ್ಳಿ
ಸಂಚಾಲಕರು, ದ.ಸಂ. ಸಮಿತಿ ರೋಣ ತಾಲೂಕು

ಪಿ.ಎಸ್. ಪಾಟೀಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement