ಸುದ್ದಿ ಸಂಕ್ಷೇಪ
ಜನ್ಮದಾತರನ್ನು ನಿರ್ಲಕ್ಷಿಸುತ್ತಿರುವ ಯುವಕರು
ಗದಗ: ಇತ್ತೀಚಿಗೆ ನಮ್ಮ ಯುವಜನಾಂಗ ವಿದೇಶಿ ಸಂಸ್ಕೃತಿಗಳಿಗೆ ಮಾರುಹೋಗಿ ನಮ್ಮ ಸಂಸ್ಕೃತಿಯನ್ನು ಮರೆಯುವ ಮೂಲಕ ಜನ್ಮದಾತರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಹಿರಿಯ ಮುಖಂಡ ಬಸಣ್ಣ ಬೆಳದಡಿ ಹೇಳಿದರು. ಅವರು ನಗರದ ಗಂಗಾಪುರ ಪೇಟೆಯ ಬನಶಂಕರಿ ದೇವಿ ದೇವಸ್ಥಾನದಲ್ಲಿ ಈಚೆಗೆ ಗದಗ ಜಿಲ್ಲಾ ಜನಪರ ಹಿತರಕ್ಷಣಾ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಜನ್ಮ ನೀಡಿ ಅವರಿಗೆ ವಿಶೇಷ ಪ್ರೀತಿ ಆಸಕ್ತಿ ವಹಿಸಿ ಶಿಕ್ಷಣ ನೀಡುತ್ತಾರೆ. ಆದರೆ ಅನೇಕರು ಮುಪ್ಪಾವಸ್ಥೆಯಲ್ಲಿರುವ ವೃದ್ಧರನ್ನು ನಿರ್ಲಕ್ಷಿಸಿಸುವ ಮೂಲಕ ಹಿರಿಯ ಜೀವಿಗಳನ್ನು ಕಡೆಗಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ಹಿರಿಯರನ್ನು ಮುಪ್ಪಾವಸ್ಥೆಯಲ್ಲಿ ನಿರ್ಲಕ್ಷಿಸಿದರೆ ಅವರೆಲ್ಲಿ ಹೋಗಬೇಕು. ಆದ್ದರಿಂದ ನಮ್ಮ ಯುವ ಜನಾಂಗ ಎಚ್ಚೆತ್ತು ನಮ್ಮ ಸಂಸ್ಕೃತಿ ಸೊಗಡನ್ನು ಹಿರಿಯ ಜೀವಿಗಳಿಗೆ ಅಗೌರವ ಮಾನ, ಸಮ್ಮಾನ ನೀಡಬೇಕೆಂದು ಯುವಕರಿಗೆ ಕರೆ ನೀಡಿದರು. ಶಿಕ್ಷಕ ಐ.ಕೆ. ಕಮ್ಮಾರ ಅಧ್ಯಕ್ಷತೆ ವಹಿಸಿದ್ದರು. ಗದಗ ಜಿಲ್ಲಾ ಕ್ಷೌರಿಕ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಹಾಗೂ ವೇದಿಕೆಯ ರಾಜ್ಯ ಜಂಟಿ ಕಾರ್ಯದರ್ಶಿ ಕೃಷ್ಣ ಹಡಪದ, ಸ್ನೇಹ ಲೋಕ ವಿವಿಧೋದ್ದೇಶಗಳ ಸೇವಾ ಸಂಘದ ಅಧ್ಯಕ್ಷ ಬಸವರಾಜ ಆರಟ್ಟಿ, ರಾಜ್ಯ ಸ್ಪಂದನಾ ವಿವಿಧೋದ್ದೇಶಗಳ ಚಾರಿಟೇಬಲ್ ಸೇವಾ ಟ್ರಸ್ಟ್ ಕಮಿಟಿಯ ರಾಜ್ಯಾಧ್ಯಕ್ಷ ಬಸವರಾಜ ಮುರ್ಖಂಡಿ ಮಾತನಾಡಿದರು. ನನ್ನಯಸ್ವಾಮಿ ಹಿರೇಮಠ ಆಶೀರ್ವಚನ ನೀಡಿದರು. ಬಸವರಾಜ ಹಿಕ್ಕಲಗುತ್ತಿ, ಮುತ್ತಣ್ಣ, ಪರಶುರಾಮ ಕೋಟೆಕಲ್ಲ ಮುಂತಾದವರು ಇದ್ದರು. ಬಸವರಾಜ ಬಳ್ಳಾರಿ ಸ್ವಾಗತಿಸಿದರು. ವಸಂತ ಬಳ್ಳಾರಿ ನಿರೂಪಿಸಿದರು. ಯಮನೂರ ಮುಳ್ಳೂರ ವಂದಿಸಿದರು.
ಜಿಟಿಟಿಸಿಯಲ್ಲಿ ಉಚಿತ ಕ್ಯಾಡ್ಕ್ಯಾಮ್ ತರಬೇತಿ
ಗದಗ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಹುಬ್ಬಳ್ಳಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ಯಲ್ಲಿ ಟೂಲ್ರೂಮ್ ಮಶಿನಿಸ್ಟ್, ಸಿ.ಎನ್.ಸಿ, ಕ್ಯಾಡ್ಕ್ಯಾಮ್, ಟರ್ನರ್, ಮಿಲ್ಲರ್ ಮತ್ತು ಗ್ರೈಂಡರ್ ಮುಂತಾದ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಎಸ್ಸೆಸ್ಸೆಲ್ಸಿ, ಐಟಿಐ, ಡಿಪ್ಲೊಮಾ ಪಾಸಾಗಿರುವ ನಿರುದ್ಯೋಗಿ ಯುವಕರು ಈ ತರಬೇತಿಗಳಿಗೆ ಅರ್ಹರಿರುತ್ತಾರೆ. ತರಬೇತಿಗಳು ಸಂಪೂರ್ಣ ಉಚಿತವಾಗಿರುತ್ತವೆ. ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸುವ ಅಭ್ಯರ್ಥಿಗಳಿಗೆ ಸೂಕ್ತ ಸ್ಟೈಫಂಡ್ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಅ. 23ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಂಚಾಲಕರು, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ), ಇಂಡಸ್ಟ್ರಿಯಲ್ ಎಸ್ಟೇಟ್, ಗೋಕುಲ ರಸ್ತೆ, ಹುಬ್ಬಳ್ಳಿ ((8183860552) ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಇಂದು ಪೂರ್ವಭಾವಿ ಸಭೆ
ಗದಗ: ಬಿ. ಶ್ರೀರಾಮುಲು ಅಭಿಮಾನಿ ಬಳಗದ ಪೂರ್ವಭಾವಿ ಸಭೆಯನ್ನು ಅ. 15ರ ಬೆಳಗ್ಗೆ 11 ಗಂಟೆಗೆ ನಗರದ ಹೊಸ ಬಸ್ ನಿಲ್ದಾಣದ ಬಳಿ ಇರುವ ಶ್ರೀರಾಮುಲು ನಿವಾಸದಲ್ಲಿ ಏರ್ಪಡಿಸಲಾಗಿದೆ.
ಸಭೆಯಲ್ಲಿ ಅ. 23ರಂದು ನಡೆಯುವ ಉಚಿತ ಸಾಮೂಹಿಕ ವಿವಾಹಗಳ ಕಾರ್ಯಕ್ರಮದ ಕುರಿತು ಚರ್ಚಿಸಲಾಗುವುದು. ಕಾರಣ ಶ್ರೀರಾಮುಲು ಅಭಿಮಾನಿ ಬಳಗದ ಸರ್ವ ಸದಸ್ಯರು, ಅಭಿಮಾನಿಗಳು ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಳ್ಳಲು ಶ್ರೀರಾಮುಲು ಅಭಿಮಾನಿ ಬಳಗದ ಕಾರ್ಯದರ್ಶಿ ಎಸ್.ಎಚ್. ಶಿವನಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವಕರಿಂದ ಸದೃಢ ಭಾರತ
ಗದಗ: ಸಂಸ್ಕಾರ, ಸಂಸ್ಕೃತಿಯಿದ್ದರೆ ಮಾನವ ಏನನ್ನಾದರೂ ಸಾಧಿಸಬಹುದು. ನಾಲಿಗೆ ಮಾನವನ ಸಂಸ್ಕೃತಿಯನ್ನು ತಿಳಿಸಿಕೊಡುತ್ತದೆ ಎಂದು ಡಾ. ಎಂ.ಎಸ್. ನರೇಗಲ್ಲ ಹೇಳಿದರು. ಅವರು ಈಚೆಗೆ ಕೆ.ಎಸ್.ಎಸ್. ಮಹಾವಿದ್ಯಾಲಯದ ವತಿಯಿಂದ ದತ್ತುಗ್ರಾಮ ನರಸಾಪುರದಲ್ಲಿ ಹಮ್ಮಿಕೊಂಡ ವಿಶೇಷ ಶಿಬಿರದಲ್ಲಿ ಮಾತನಾಡಿದರು.
ಪ್ರೊ. ಎನ್.ಬಿ. ಗೌಡರ ಮಾತನಾಡಿ, ಯುವಕರು ಈ ದೇಶದ ಆಸ್ತಿಯಾಗಿದ್ದಾರೆ. ಸದೃಢ ಭಾರತ ನಿರ್ಮಾಣವಾಗಬೇಕಾದರೆ ಯುವಕರ ಅವಶ್ಯಕತೆಯಿದೆ ಎಂದರು.
ಡಾ. ಎ.ಕೆ. ಪೂಜಾರ ಮಾತನಾಡಿ, ಇಂದಿನ ಆಧುನಿಕ ಜೀವನದಲ್ಲಿ ಹಾಸ್ಯಪ್ರಜ್ಞೆ ಕಡಿಮೆಯಾಗುತ್ತಿದೆ. ಯುವಕರು ಸದಾ ಹಸನ್ಮುಖಿಗಳಾಗಿರಬೇಕಾದರೆ ಅನೇಕ ಹಾಸ್ಯಗಾರರ ಜೀನವ ಚರಿತ್ರೆ ಓದಬೇಕೆಂದರು. ಪ್ರಾ. ಎಂ.ಎನ್. ಕಾಮನಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಎನ್ಎಸ್ಎಸ್ ಅಧಿಕಾರಿ ಡಾ. ಎನ್.ಎಂ. ಅಂಬಲಿಯವರ, ಪ್ರೊ. ಎಚ್.ಎಂ. ಮುನಿಸೊಣ್ಣೆಗೌಡ, ಎಸ್.ಬಿ. ಅಳಗುಂಡಗಿ, ಎಂ.ಬಿ. ಹಳ್ಳಿ, ಜಿ.ಸಿ. ಜಂಪಣ್ಣವರ, ಶಂಕರಗೌಡ ಬೆನಹಾಳ, ಆರ್.ಎಂ. ಕುರಿಯವರ ಪ್ರಾರ್ಥಿಸಿದರು. ಜಿ.ಎನ್. ಸಸಿ ಸ್ವಾಗತಿಸಿದರು. ಐ.ಎನ್. ಗಟ್ಟೆಪ್ಪನವರ ಪರಿಚಯಿಸಿದರು. ಸಾವಿತ್ರಿ ಕಂಬಳಿ ನಿರೂಪಿಸಿದರು. ಎಸ್.ಎಸ್. ನರೇಗಲ್ಲಮಠ ವಂದಿಸಿದರು.
ಯುವಕರು ರಾಷ್ಟ್ರದ ಭವಿಷ್ಯ: ಕಟ್ಟಿಮನಿ
ಗದಗ: ರಾಷ್ಟ್ರವೆಂದರೆ ಕಲ್ಲು, ಕಟ್ಟಿಗೆ ಇಟ್ಟಿಗೆಗಳ ಕಟ್ಟಡಗಳು ಮಾತ್ರವಲ್ಲ ರಾಷ್ಟ್ರವೆಂದರೆ ಅಲ್ಲಿರುವ ಕ್ರಿಯಾಶೀಲ, ಜೀವನ್ಮುಖಿ ಯುವ ಜನತೆ. ನಮ್ಮ ಪೂರ್ವಜರ ಜ್ಞಾನ ಆಧುನಿಕ ವಿಜ್ಞಾನದ ಜತೆಗೆ ಮೇಳವಿಸಿ ಒಂದು ಹೊಸ ರಾಷ್ಟ್ರವನ್ನು ಕಟ್ಟುವ ಮಹತ್ತರ ಜವಾಬ್ದಾರಿ ಇಂದಿನ ಯುವಜನತೆಯ ಮೇಲಿದ್ದು, ಯುವಕರು ರಾಷ್ಟ್ರ ಭವಿಷ್ಯದ ಅಕ್ಷಯ ಪಾತ್ರೆಗಳು ಎಂದು ಪ್ರಾಚಾರ್ಯ ಎಂ.ಸಿ. ಕಟ್ಟಿಮನಿ ಹೇಳಿದರು. ಅವರು ಸ್ಥಳೀಯ ಸರ್ಕಾರಿ ಪಪೂ ಕಾಲೇಜಿನ ಎನ್.ಎಸ್.ಎಸ್. ವಿಶೇಷ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇವಲ 60 ಲಕ್ಷದಷ್ಟು ಜನಸಂಖ್ಯೆಯುಳ್ಳ ಇಸ್ರೇಲ್ ತನ್ನ ಆತ್ಮಾಭಿಮಾನ, ರಾಷ್ಟ್ರಪ್ರೇಮ, ದೇಶಭಕ್ತಿಯ ಕಾರಣವಾಗಿ ಅತ್ಯಂತ ಬಲಾಢ್ಯವಾಗಿ ಬೆಳೆದು ನಿಂತಿದೆ. ನಮ್ಮಲ್ಲಿ ಶತಕೋಟಿಗೂ ಮೀರಿದ ಜನಸಂಖ್ಯೆ ಇದ್ದೂ ನಾವೆಲ್ಲ ಒಂದು, ನಮ್ಮ ದೇಶ ಒಂದು ಎಂಬ ಏಕತಾ ಭಾವವಿಲ್ಲದ ಕಾರಣಕ್ಕಾಗಿ ನಮ್ಮ ದೇಶದ ಆತ್ಮ, ಅಂತಃಶಕ್ತಿ, ಶಿಥಿಲವಾಗುತ್ತಿದೆ. ಇಡಿ ಜಗತ್ತನ್ನೇ ನಿಯಂತ್ರಿಸಬಲ್ಲ ಶಕ್ತಿ ಇರುವ ಭಾರತ ಮತ್ತೆ ಮೈಕೊಡವಿ ಮೇಲೇಳಬೇಕಿದೆ ಎಂದರು. ಪ್ರೊ. ಎನ್.ಎಂ. ಪವಾಡಿಗೌಡರ ಉಪನ್ಯಾಸ ನೀಡಿದರು. ಎಚ್.ಎಸ್. ರಾಜೂರ, ಎಸ್.ಎಸ್. ಕಪ್ಪರದ, ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ವಸ್ತ್ರದ, ಶಿಬಿರಾಧಿಕಾರಿ ಬಿ.ವಿ. ಸಜ್ಜನರ ಹಾಗೂ ಉಪನ್ಯಾಸಕರು ಇದ್ದರು. ಪದ್ಮಾ ಮಾನೆ ಸ್ವಾಗತಿಸಿದರು. ಯೋಗೇಶ ಜಿತೂರಿ ನಿರೂಪಿಸಿದರು. ಗೀತಾ ಬಾಕಳೆ ವಂದಿಸಿದರು.