ಅರಿಷಡ್ವರ್ಗ ಗೆಲ್ಲುವುದೇ ವಿಜಯದಶಮಿ
ಕನ್ನಡಪ್ರಭ ವಾರ್ತೆ, ಗದಗ, ಅ. 15
ವಿಜಯದಶಮಿ ಎಂದರೆ ಹೊರಗಿನ ವಿಜಯವಲ್ಲ, ಮಾನವ ತನ್ನಂತರಂಗದಲ್ಲಿರುವ ಅಹಂಕಾರ, ದುಷ್ಟತನ, ಅಸೂಯೆ ಮುಂತಾದ ಅರಿಷಡ್ವರ್ಗಗಳನ್ನು ಗೆಲ್ಲುವುದೇ ನಿಜವಾದ ವಿಜಯದಶಮಿ ಎಂದು ಜ. ತೋಂಟದ ಡಾ. ಸಿದ್ಧಲಿಂಗ ಶ್ರೀ ಹೇಳಿದರು.
ಅವರು ಸ್ಥಳೀಯ ಜ. ತೋಂಟದಾರ್ಯ ಮಠದಲ್ಲಿ ವಿಜಯದಶಮಿ ಅಂಗವಾಗಿ ಸೋಮವಾರ ರಾತ್ರಿ ಲಿಂಗಾಯತ ಪ್ರಗತಿಶೀಲ ಸಂಘದಾಶ್ರಯದಲ್ಲಿ ನಡೆದ 2141ನೇ ಶಿವಾನುಭವದಲ್ಲಿ ವಿಜಯದಶಮಿ ಹಾಗೂ ಶಿವಶರಣ ಹರಳಯ್ಯ ಹಾಗೂ ಮಧುವಯ್ಯಗಳ ದಿನಾಚರಣೆಯ ಸಾನ್ನಿಧ್ಯವಹಿಸಿ ಬನ್ನಿ ವಿನಿಮಯ ಮಾಡಿಕೊಂಡು ಜನತೆಗೆ ವಿಜಯದಶಮಿ ಸಂದೇಶ ನೀಡಿದರು.
ವಿಜಯದಶಮಿ ಐತಿಹಾಸಿಕವಾಗಿದ್ದರೂ ಸಾಂಸ್ಕೃತಿಕ ಹಿನ್ನೆಲೆಯನ್ನು ಮೈಗೂಡಿಸಿಕೊಂಡಿದೆ. ಹಂಪಿಯಲ್ಲಿ 9 ದಿನಗಳವರೆಗೆ ಸಾಂಸ್ಕೃತಿಕ ಹಬ್ಬವಾಗಿ ವಿಜಯದಶಮಿ ಆಚರಣೆಗೆ ತಂದ ವಿಜಯನಗರ ಅರಸರು ವಿಜಯ ದಶಮಿಯ ಮೂಲ ವಾರಸುದಾರರು. ವಿಜಯನಗರ ಅರಸರ ನಂತರ ಮೈಸೂರು ಒಡೆಯರು ಮೈಸೂರಲ್ಲಿ ಇದಕ್ಕೆ ಕಾಯಕಲ್ಪ ನೀಡಿದರು. ದಸರಾ ಹೆಸರಲ್ಲಿ ವಿಜಯದಶಮಿ ಇಂದು ಕರ್ನಾಟಕದ ಸಾಂಸ್ಕೃತಿಕ ಐತಿಹಾಸಿಕ ಉತ್ಸವವಾಗಿ ನಡೆದುಕೊಂಡು ಬರುತ್ತಿದೆ. ದೇಶ ವಿದೇಶಗಳ ಮೆಚ್ಚುಗೆ ಪಡೆದಿದೆ.
ಜ. ತೋಂಟದಾರ್ಯ ಮಠದಲ್ಲಿ ಸದ್ಭಕ್ತರಿಂದ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ 40 ವರ್ಷಗಳಿಂದಲೂ ವಿಜಯದಶಮಿ ಆಚರಣೆ ನಡೆದುಕೊಂಡು ಬಂದಿದೆ. ಶಿವಶರಣೆ ಅಕ್ಕಮ್ಮ ಬರೆದ ಸೀಮೋಲ್ಲಂಘನವೆಂಬುದು ನಾನರಿಯೇ, ನೀವೆ ಬಲ್ಲಿರಿ ಇದ್ದ ಮನೆಯ ಬಿಡಲಾರದೆ ತೊಟ್ಟಿದ್ದ ತೊಡಿಗೆಯ ಅಳಿಯಲಾರದೆ, ಇದ್ದ ಠಾವ ಬಿಟ್ಟು ಹೋಗೆನೆಂಬುದು ಛಲವೇ ಎಂಬ ವಚನ ಸ್ಮರಿಸಿದ ಪೂಜ್ಯರು, ರಾಜಸತ್ತೆ ಹೋಗಿ ಈಗ ಪ್ರಜಾಸತ್ತೆ ಬಂದಿದೆ. ಅಂದು ಅರಸರು ಭೌಗೋಳಿಕ ಸೀಮೆ ದಾಟಿ ಹೋಗಿ ಅದರ ಉಲ್ಲಂಘನೆ ಮಾಡುವುದೇ ಸೀಮೋಲ್ಲಂಘನೆಯ ಕುರುಹಾಗಿತ್ತು. ಈಗ ತನ್ನಂತರಂಗದ ಮಾಯೆ ಗೆಲುವುದೇ ನಿಜವಾದ ವಿಜಯ ಎಂದರು. ಶ್ರೀಮಠದ ಆವರಣದಲ್ಲಿರುವ ಶಮಿ ವೃಕ್ಷಕ್ಕೆ ಹಿರಿಯ ಶರಣ ಎಸ್.ಎಸ್. ಕಳಸಾಪುರಶೆಟ್ರ ಪೂಜೆ ಸಲ್ಲಿಸಿದ ನಂತರ ಜ. ತೋಂಟದ ಶ್ರೀಗಳಿಗೆ ಶಮಿ (ಬನ್ನಿ) ಸಮರ್ಪಣೆಯ ನಂತರ ಬನ್ನಿ ವಿನಿಮಯ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಲಿಂಗಾಯತ ಪ್ರಗತಿಶೀಲ ಸಂಘದ ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಸಂಘದ ಕಾರ್ಯದರ್ಶಿ ವೀರಣ್ಣ ಹೊನಗಣ್ಣವರ, ಸಹಕಾರ್ಯದರ್ಶಿ ಗುರುಬಸವಲಿಂಗ ತಡಸದ, ಶಿವಲೀಲಕ್ಕ ಕುರಡಗಿ, ಖಜಾಂಚಿ ಪ್ರಭುದೇವ ಹಿರೇಮಠ, ಶಿವಾನುಭವ ಸಮಿತಿ ಚೇರ್ಮನ್ ಪ್ರೊ. ಎಸ್.ಎನ್. ಆದಿ ಸೇರಿದಂತೆ ಬಸವದಳ, ಬಸವಕೇಂದ್ರ, ಶರಣಸಾಹಿತ್ಯ ಪರಿಷತ್ ಪದಾಧಿಕಾರಿಗಳು ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ ಸ್ವಾಗತಿಸಿದರು. ಎಸ್.ಎಸ್. ಹರ್ಲಾಪುರ ನಿರೂಪಿಸಿದರು.