ಉದ್ಯೋಗ ಖಾತ್ರಿ ರು. 29 ಲಕ್ಷ ಗುಳುಂ
ಗದಗ: ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಸಮಾಜ ಸುಧಾರಣೆಯ ಮುಖ್ಯ ಭಾಗವಾಗಿದ್ದಾರೆ. ಆದರೆ, ಅಂತಹ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳೇ ಸೇರಿ ಉದ್ಯೋಗ ಖಾತ್ರಿ ಹಣವನ್ನು ಕಾಮಗಾರಿ ನಡೆಸದೇ ಬಿಲ್ ತೆಗೆದಿದ್ದು, ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ. ದುರ್ಬಳಕೆಯಾಗಿರುವ ರು. 29.44 ಲಕ್ಷ ಮರಳಿ ಸರ್ಕಾರಕ್ಕೆ ಭರಣ ಮಾಡುವಂತೆ ಜಿಪಂ ಸಿಇಒ ನೋಟಿಸ್ ನೀಡಿದ ಘಟನೆ ತಾಲೂಕಿನ ಬೆಳದಡಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳದಡಿ ಗ್ರಾಪಂ ವ್ಯಾಪ್ತಿಯಲ್ಲಿ 2011-12ನೇ ಸಾಲಿನಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಒಟ್ಟು 59 ವಿವಿಧ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದೆ ಎಂದು ನಮೂದಿಸಿ, ಸರ್ಕಾರದ ಹಣವನ್ನು ಪಡೆದಿದ್ದಾರೆ. ಈ ಕುರಿತು ಸ್ಥಳೀಯ ಹೋರಾಟಗಾರರು ಹಾಗೂ ಕೆಲ ಸಾರ್ವಜನಿಕರು ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿಯ ವೇಳೆ ಈ ಅಕ್ರಮ ಬಯಲಿಗೆ ಬಂದಿದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎನ್ನುವ ಸಾರ್ವಜನಿಕರ ಒತ್ತಾಯದ ಮೇಲೆ ಜಿಪಂ ಥರ್ಡ್ ಪಾರ್ಟಿ ತನಿಖೆಗೆ ಸೂಚಿಸಿದ್ದರು.
ತನಿಖೆ ಏನು ಹೇಳುತ್ತದೆ?: ಜಿಪಂ ಗದಗ ಇವರ ಸೂಚನೆಯ ಮೇರೆಗೆ ಬೆಂಗಳೂರಿನ ಖಛಠ್ಝಜಟ್ಛಿಜ ಈ್ಟಟಿಡ್ಡಡಿಛಟಿಡಿಡ ಸಂಸ್ಥೆ ತನಿಖೆ ನಡೆಸಿ 30-12-2012ರಂದು ಇಲಾಖೆಗೆ ವರದಿ ನೀಡಿದ್ದು, ವರದಿಯಲ್ಲಿ ಅನುಷ್ಠಾನವಾಗಿರುವ 59 ಕಾಮಗಾರಿಗಳಲ್ಲಿ ಹಣ ದುರುಪಯೋಗವಾಗಿರುವುದು ಸ್ಪಷ್ಟವಾಗಿದೆ. ರು. 29 ಲಕ್ಷ 44 ಸಾವಿರದಷ್ಟು ಹಣದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಇದರ ಆಧಾರದಲ್ಲಿ ಜಿಪಂ ಸಿಇಒ ಸೆ. 20ರಂದು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ 7 ಜನರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದರು.
55 ಜನ ಸತ್ತವರ ಹೆಸರಲ್ಲಿ ಜಾಬ್ ಕಾರ್ಡ್: ಈ ಅಕ್ರಮದಲ್ಲಿ ಸತ್ತವರ ಹೆಸರಿನಲ್ಲಿರುವ 55 ಜಾಬ್ ಕಾರ್ಡ್ಗಳನ್ನೇ ಪ್ರಮುಖ ಆಧಾರವಾಗಿಟ್ಟುಕೊಂಡು ಭ್ರಷ್ಟಾಚಾರ ನಡೆಸಲಾಗಿದೆ ಎನ್ನುವುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಬೆಳದಡಿ ಹಾಗೂ ಬೆಳದಡಿ ತಾಂಡಾದಲ್ಲಿನ ಹಲವಾರು ಜನರು ಕೆಲಸ ಅರಸಿ (ಲಂಬಾಣಿಗಳು) ಪ್ರತಿ ವರ್ಷ ಗೋವಾಕ್ಕೆ ತೆರಳುವುದು ಸಾಮಾನ್ಯ. ಅವರ ಹೆಸರಿನಲ್ಲಿಯೂ ಜಾಬ್ ಕಾರ್ಡ್ ಮಾಡಿ ಹಣ ಲಪಟಾಯಿಸಿದ್ದಾರೆ. ಸದ್ಯ ನಮಗೆ ಮಾಹಿತಿ ಹಕ್ಕಿನಡಿ ನಿಖರವಾಗಿ ರು. 29 ಲಕ್ಷ ಭ್ರಷ್ಚಾಚಾರ ನಡೆದಿರುವುದು ಸ್ಪಷ್ಟವಾಗುತ್ತದೆ. ಇದಕ್ಕಿಂತ ಹೆಚ್ಚಿನ ಭ್ರಷ್ಟಾಚಾರವೂ ನಡೆದಿದೆ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.
ನೋಟಿಸ್ನಲ್ಲೇನಿದೆ?: ದುರ್ಬಳಕೆಯಾದ ಹಣದಲ್ಲಿ ಹಿಂದಿನ ಗ್ರಾಪಂ ಅಧ್ಯಕ್ಷ ಎಚ್.ಜಿ. ನಾಯಕ ರು. 8,96,640 ಮತ್ತೊಬ್ಬ ಹಿಂದಿನ ಅಧ್ಯಕ್ಷ ಬಿ.ಎನ್. ಕುರ್ತಕೋಟಿ ರು. 84,677, ಐ.ಬಿ. ನೇಕಾರ ಹಿಂದಿನ ಪಿಡಿಒ ರು. 2,68,543, ಹಿಂದಿನ ಪ್ರಭಾರ ಪಿಡಿಒ ಬಿ.ಎನ್. ಇಟಗಿಮಠ ರು. 7,12,772, ಎಂ.ಆರ್. ಸೋಂಪುರ ಹಿಂದಿನ ತೋಟಗಾರಿಕಾ ಅಧಿಕಾರಿ ರು. 3,51,627, ಎಂ.ಎನ್. ಸಿದ್ದೇಶ ಹಿಂದಿನ ಕಿರಿಯ ಅಭಿಯಂತರ ತಾಪಂ ಗದಗ ರು. 2,52,001, ವೈ.ಡಿ. ಸಂಗಮ್ ಹಿಂದಿನ ಕಿರಿಯ ಅಭಿಯಂತರ ತಾಪಂ ಗದಗ ರು. 3,77,690 ಸೇರಿ ಒಟ್ಟು ರು. 29.44 ಲಕ್ಷ ತಕ್ಷಣ ಮರಳಿ ಸರ್ಕಾರಕ್ಕೆ ಭರಿಸಬೇಕು. ಇಲ್ಲವಾದಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗುವುದು ಎಂದು ಸೂಚಿಸಿದೆ.
-ಶಿವಕುಮಾರ ಕುಷ್ಟಗಿ