ಕಾಂಗ್ರೆಸ್ನಿಂದ ಅಭಿವೃದ್ಧಿಗೆ ಹಿನ್ನಡೆ
ಕನ್ನಡಪ್ರಭ ವಾರ್ತೆ, ನರಗುಂದ, ಅ. 15
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಹಲವಾರು ತಿಂಗಳು ಕಳೆದರೂ ಯಾವುದೇ ನೂತನ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಿಲ್ಲ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಆರೋಪಿಸಿದರು.
ಅವರು ಸೋಮವಾರ ಸಂಜೆ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತಕ್ಷೇತ್ರದ ಜನತೆ ಕಾಂಗ್ರೆಸ್ ಪಕ್ಷದ ಬಿ.ಆರ್. ಯಾವಗಲ್ಲ ಅವರನ್ನು ಬೆಂಬಲಿಸಿದ್ದನ್ನು ನಾನು ಸ್ವಾಗತಿಸುತ್ತೇನೆ. ಆದರೆ ಕ್ಷೇತ್ರದಲ್ಲಿ ಜನಪ್ರತಿನಿಧಿ ಮಾಡಬೇಕಾದ ಕಾರ್ಯಗಳನ್ನು ಅವರ ಕುಟಂಬದವರು ಮತ್ತು ಸ್ವಜಾತಿಯವರು ಅಧಿಕಾರ ಮಾಡಲಿಕ್ಕೆ ಜನತೆ ಅಧಿಕಾರ ನೀಡಿಲ್ಲ ಎನ್ನುವುದನ್ನು ಅರಿತುಕೊಂಡು ಶಾಸಕರು ಕಾರ್ಯ ನಿರ್ವಹಿಸಲಿ. ಅವರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದರೆ ಅವರಿಗೆ ಸಹಕಾರ ನೀಡುತ್ತೇವೆ. ಆದರೆ ಅವರ ಹೆಸರಿನಲ್ಲಿ ಬೇರೊಬ್ಬರು ಅಧಿಕಾರ ನಡೆಸುವುದು, ಕ್ಷೇತ್ರವನ್ನು ಕಡೆಗಣಿಸುವುದು ಮಾಡುತ್ತಿದ್ದಾರೆ. ಇದಕ್ಕೆ 2 ತಿಂಗಳ ಕಾಲಾವಕಾಶ ನೀಡಲಾಗುವುದು. ಅವರ ವರ್ತನೆಯಲ್ಲಿ ಬದಲಾವಣೆ ಕಂಡು ಬರದೇ ಇದ್ದಲ್ಲಿ ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಲಾಗುವುದು ಎಂದರು.
ಅಡ್ಡಪಲ್ಲಕ್ಕಿಗೆ ಅಡ್ಡಿ ಸರಿಯಲ್ಲ: ಅಡ್ಡಪಲ್ಲಕ್ಕಿ ವಿಷಯವಾಗಿ ಸಾಕಷ್ಟು ಪ್ರಮಾಣದಲ್ಲಿ ಅಡ್ಡಿ ಮಾಡುತ್ತಿರುವುದು ಸರಿಯಲ್ಲ. ಹಲವಾರು ವರ್ಷಗಳಿಂದ ತಮ್ಮ ತಮ್ಮ ಧಾರ್ಮಿಕ ಆಚರಣೆಗಳನ್ನು ಜನತೆ ನಂಬಿಕೊಂಡು ಬಂದಿರುತ್ತಾರೆ. ಆಧುನಿಕ ಯುಗದಲ್ಲಿಯೂ ರಂಭಾಪುರಿ ಶ್ರೀಗಳು ಹಲವಾರು ಉತ್ತಮ, ಸಮಾಜಮುಖಿ ಕಾರ್ಯ ಮಾಡಿ ಬೆಳೆಯುತ್ತಿರುವುದನ್ನು ಸಹಿಸದವರು ವಿರೋಧ ಮಾಡುತ್ತಿದ್ದಾರೆ ಎಂದರು.
ಜಿಲ್ಲಾಧಿಕಾರಿ ಗಮನಿಸಲಿ: ಪಟ್ಟಣದ ಪುರಸಭೆಯ ಮುಖ್ಯಾಧಿಕಾರಿಗಳು ಆಡಳಿತ ಮಂಡಳಿ ಇಲ್ಲದ್ದರಿಂದ ತಮಗೆ ಮನಸ್ಸಿಗೆ ಬಂದ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದು, ಕಚೇರಿಗೆ ಅವಶ್ಯಕತೆ ಇರದ ಕೆಲವು ಸಾಮಗ್ರಿಗಳನ್ನು ಖರೀದಿಸುವುದು ಆಡಳಿತ ಮಂಡಳಿ ಇಲ್ಲದಾಗ ತಪ್ಪು, ಇಂತಹ ಹಲವಾರು ನಿರ್ಧಾರಗಳನ್ನು ಅವರು ತೆಗೆದುಕೊಳ್ಳುತ್ತಿದ್ದು, ಕೂಡಲೇ ಜಿಲ್ಲಾಧಿಕಾರಿ ಈ ಕುರಿತು ಗಮನ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿ.ಕೆ. ಗುಜಮಾಗಡಿ, ಪುರಸಭೆ ಸದಸ್ಯ ಉಮೇಶ ಕುಡನ್ನವರ, ಉಮೇಶ ಪಾಟೀಲ, ಎಲ್.ಎಂ. ಪಾಟೀಲ, ಬಸವಗೌಡ ಹುಡೇದಮನಿ, ಉಮೇಶ ಯಳ್ಳೂರ, ಸುರೇಶ ಹುಡೇದಮನಿ ಮುಂತಾದವರು ಹಾಜರಿದ್ದರು.