ಜಿಲ್ಲಾ ಮಟ್ಟಕ್ಕೆ ಆಯ್ಕೆ
ರೋಣ: ತಾಲೂಕು ಮಟ್ಟದ ಗಣಿತ ವಿಷಯದ ಓಲಂಪಿಯಾಡ್ ಪರೀಕ್ಷೆಯಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ರೋಹಿತ್ ನಿಡಗುಂದಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಗುರಿಕಾರ ಆಯ್ಕೆ
ರೋಣ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾಗಿ ನರೇಗಲ್ಲನ ಡಾ. ಶಿವರಾಜ ಗುರಿಕಾರ ಅವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ ಎಂದು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಶಿವಪ್ಪ ಕುರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಈದ್ಗಾ ಮೈದಾನದಲ್ಲಿ ನಮಾಜ್
ಗದಗ: ಗದುಗಿನ ದಿವಾನಜಿ ಜಮಾಅತೆ ಮಸೀದೆ ಹಾಗೂ ಅಂಜುಮನ್ ಸಭೆಯು ಈಚೆಗೆ ಸರಫರಾಜ ಉಮಚಗಿ ಅಧ್ಯಕ್ಷತೆಯಲ್ಲಿ ನಗರದ ಜಾಮಾಅತೆ ಮಸೀದಿಯಲ್ಲಿ ಜರುಗಿತು. ಸಭೆಯಲ್ಲಿ ಬಕ್ರೀದ್ ಹಬ್ಬ ಆಚರಣೆ ಬಗ್ಗೆ ಚರ್ಚಿಸಲಾಯಿತು. ಬಕ್ರೀದ್ ಹಬ್ಬದ (ಈದುದ್ದುಹಾ) ನಮಾಜ್ನ್ನು ಅ. 16ರಂದು ಬುಧವಾರ ಬೆಳಗ್ಗೆ 9.30 ಗಂಟೆಗೆ ನಗರದ ಡಂಬಳ ನಾಕಾದ ಈದ್ಗಾ ಮೈದಾನದಲ್ಲಿ ನಡೆಯಲಿದ್ದು, ಮುಸ್ಲಿಂ ಸಮಾಜ ಬಾಂಧವರು ಬೆಳಗ್ಗೆ 9 ಗಂಟೆಗೆ ಜಮಾತ್ ಮಸೀದಿಯಲ್ಲಿ ಹಾಜರಿರಬೇಕೆಂದು ಕಾರ್ಯದರ್ಶಿ ಜೀವನಸಾಹೇಬ ಮಂಗಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಗೆ ಬೆಂಬಲ
ಗದಗ: ರಾಘವಾಂಕನ ನಕಲಿ ಸಿದ್ಧರಾಮೇಶ್ವರ ಚರಿತ್ರೆಯಲ್ಲಿ ಬಸವಾದಿ ಶರಣರ ಬಗ್ಗೆ ಕೀಳುಮಟ್ಟದ ಭಾಷೆ ಬಳಸಿ ಸಿದ್ಧಪಡಿಸಿರುವ ಕೃತಿಯನ್ನು ಮುಟ್ಟುಗೋಲು ಹಾಕಬೇಕು ಹಾಗೂ ಈ ಕೃತಿಯನ್ನು ಬರೆಯಲು ಪ್ರೇರಣೆ ನೀಡಿದವರನ್ನು, ಪ್ರಕಾಶನ ಮಾಡಿದವರನ್ನು, ಸಂಪಾದಕರನ್ನು ಬಂಧಿಸಬೇಕೆಂದು ಆಗ್ರಹಿಸಿ ಅ. 21ರಂದು ನಗರದಲ್ಲಿ ನಡೆಯಲಿರುವ ಪ್ರತಿಭಟನಾ ಮೆರವಣಿಗೆಗೆ ಉತ್ತರ ಕರ್ನಾಟಕ ಪದವಿಧರ ಒಕ್ಕೂಟ ಸಂಪೂರ್ಣ ಬೆಂಬಲ ಸೂಚಿಸುತ್ತದೆ ಎಂದು ಉತ್ತರ ಕರ್ನಾಕಟ ಪದವೀಧರ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ಎಸ್. ನಾಗರಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಲುವೆಗೆ ಬಿದ್ದು ವಿದ್ಯಾರ್ಥಿ ಸಾವು
ರಾಣಿಬೆನ್ನೂರು: ತಾಲೂಕಿನ ಐತಿಹಾಸಿಕ ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ನಡೆಯುವ ದಸರಾ ಹಬ್ಬ, ಕಾರ್ಣಿಕೋತ್ಸವ ಹಾಗೂ ಬನ್ನಿ ಮುಡಿಯುವ ಕಾರ್ಯ ವೀಕ್ಷಿಸಿ, ದೇವರ ದರ್ಶನಕ್ಕೆ ತೆರಳಿದ್ದ ನಗರದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬ ದೇವಸ್ಥಾನದ ಪಕ್ಕದಲ್ಲಿ ಹರಿಯುತ್ತಿರುವ ತುಂಗಾ ಮೇಲ್ದಂಡೆ ಕಾಲುವೆಗೆ ಸ್ನಾನಕ್ಕೆ ತೆರಳಿದ್ದಾಗ ಮುಳುಗಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಗದಗ ಜಿಲ್ಲೆ ರೋಣ ತಾಲೂಕಿನ ಯಾವಗಲ್ಲ ಗ್ರಾಮದ ನಿವಾಸಿ ಶ್ರೀಕಾಂತ ಕಣವಿ (24) ಮೃತ ವಿದ್ಯಾರ್ಥಿ. ಪೊಲೀಸರು ಸ್ಥಳಕ್ಕೆ ಧಾವಿಸಿ, ಶವ ಪತ್ತೆ ಮಾಡಿದ್ದಾರೆ. ಪ್ರಕರಣ ದಾಖಲಾಗಿದೆ.
ಮಕ್ಕಳ ಶೈಕ್ಷಣಿಕ ಉನ್ನತಿ ಶಿಕ್ಷಕರ ಹೊಣೆ
ಗಜೇಂದ್ರಗಡ: ಸರ್ಕಾರದ ಅನುದಾನ ಸಮರ್ಪಕ ಸದ್ಬಳಕೆಯ ಜತೆಗೆ ಮಕ್ಕಳ ಶೈಕ್ಷಣಿಕ ಕ್ಷೇತ್ರದ ಉನ್ನತಿಗೆ ಶ್ರಮಿಸುವ ಹೊಣೆಗಾರಿಕೆ ಶಿಕ್ಷಕ ಸಮೂಹ ಮೇಲಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಸಮೀಪದ ಗೊಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಆರ್.ಎಂ.ಎಸ್.ಎ ಯೋಜನೆಯ ಅಡಿ ಮಂಜೂರಾದ ಅನುದಾನದಲ್ಲಿ 4 ಕೊಠಡಿ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ದೇಶದ ಪ್ರತಿ ಮಗುವಿಗೂ ಶಿಕ್ಷಣ ಕಡ್ಡಾಯ ಎಂಬ ಧ್ಯೇಯದೊಂದಿಗೆ ಉಚಿತ ಪಠ್ಯ ಪುಸ್ತಕ ಸಮವಸ್ತ್ರ, ಸೈಕಲ್, ಬಿಸಿಯೂಟ, ವಸತಿ ಜತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದಂತಹ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿ ಆ ಮೂಲಕ ಶಿಕ್ಷಣ ಕ್ರಾಂತಿ ಮಾಡಲು ಪಣತೊಟ್ಟ ಸರ್ಕಾರದ ಕನಸು ನನಸಾಗಿಸುವತ್ತ ಶಿಕ್ಷಕ ಸಮೂಹ ಸನ್ನದ್ಧರಾಗಬೇಕು ಎಂದರು. ಎಸ್.ಎಂ. ಆರಗಿದ್ದಿ, ವಿ.ಆರ್. ಗುಡಿಸಾಗರ, ವೀರಣ್ಣ ಶೆಟ್ಟರ, ಹನುಮಪ್ಪ ಕಮ್ಮಾರ, ಇಮಾಮ್ಸಾಬ್ ಬಾಗವಾನ, ಎಸ್.ಡಿ.ಎಂ.ಸಿ ಅಧ್ಯಕ್ಷ ಸಿ.ಎಂ. ಭೋಸಲೆ, ಹನುಮಪ್ಪ ಹೊರಪೇಟಿ, ಹನಮಪ್ಪ ಮಾದರ, ಮೌನೇಶಪ್ಪ ಭೋಸಲೆ, ಮಲ್ಲಿಕಾರ್ಜುನ ಗಾರಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಪಾಟೀಲ, ಮುಖ್ಯೋಪಾಧ್ಯಾಯ ಬಿ.ಎನ್. ಜಾಲಿಹಾಳ, ಶ್ರೀಕಾಂತ ಅವಧೂತ, ಉಮೇಶ ರಾಠೋಡ, ಎಫ್.ಎಸ್. ಕರಿದುರಗನವರ, ಮರ್ತುಜಾ ಡಾಲಾಯತ್, ಬಾಬಣ್ಣ ನದಾಫ, ಶರಣಪ್ಪ ಕೊಟಗಿ, ಭೀಮಣ್ಣ ತಳವಾರ, ಶ್ರೀಕಾಂತ ತಾಳಿಕೋಟಿ ಮುಂತಾದವರು ಉಪಸ್ಥಿತರಿದ್ದರು.