ಜೀವನ ಅರಿಯಲು ಎನ್ನೆಸ್ಸೆಸ್ ಸಹಕಾರಿ
ಗದಗ: ನಮ್ಮ ರಾಷ್ಟ್ರದಲ್ಲಿ ಸುಮಾರು 40 ಕೋಟಿಗಿಂತ ಅಧಿಕ ಯುವಕರಿದ್ದು, ಇವರಲ್ಲಿ ಬದ್ಧತೆ ಮತ್ತು ಇಚ್ಚಾಶಕ್ತಿ ಇದ್ದರೆ ಏನನ್ನಾದರೂ ಸಾಧಿಸಬಹುದು. ಹಾಗಾಗಿ ಯುವಕರು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಸಾಂಘಿಕ ಜೀವನ ನಡೆಸುವಲ್ಲಿ ಸಹಾಯವಾಗುತ್ತದೆ ಎಂದು ಉಪನ್ಯಾಸಕ ಜಿ.ಎನ್. ಹಕಾರಿ ಹೇಳಿದರು.
ಅವರು ಈಚೆಗೆ ಸ್ಥಳೀಯ ಸರ್ಕಾರಿ ಪಪೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನದ ಬಗ್ಗೆ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕೆ.ಬಿ. ತಳಗೇರಿ ಮಾತನಾಡಿದರು. ಎನ್‌ಎಸ್‌ಎಸ್ ಗೀತೆಯನ್ನು ಸೌಭಾಗ್ಯ ಹಾಗೂ ಸಂಗಡಿಗರು ಹಾಡಿದರು. ಕೆ.ಎಸ್. ಗಂಗನಗೌಡ್ರ, ವೈ.ಬಿ. ಕೋಣ್ಣೂರ ಪ್ರಾಸ್ತಾವಿಕ ಮಾತನಾಡಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಬಿ.ವಿ. ಸಜ್ಜನರ ಹಾಗೂ ಎಲ್ಲ ಉಪನ್ಯಾಸಕರು ಇದ್ದರು. ಬಸವರಾಜೇಶ್ವರಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಹೂಲಿ ನಿರೂಪಿಸಿದರು. ಮಂಗಳಾ ಸಜ್ಜನರ ವಂದಿಸಿದರು.