ಭಾವೈಕ್ಯ ಸಾರುವ ಬಕ್ರೀದ್
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಅ. 15
ಮುಸಲ್ಮಾನ ಬಾಂಧವರು ಅಲ್ಲಾಹನಲ್ಲಿ ಶರಣಾಗತಿಯ ಸಂದೇಶ ಸಾರುವ ಮೂಲಕ ಭಾವೈಕ್ಯ ಸಾರುವ ಬಕ್ರೀದ್ (ಈದ್, ಉದ್ ದುವ್ಹಾ) ಹಬ್ಬವನ್ನು ಸಂಭ್ರಮದಿಂದ ಅ. 16ರಂದು ವೈಶಿಷ್ಟ ಪೂರ್ಣವಾಗಿ ಆಚರಿಸಲಾಗುತ್ತಿದೆ.
ಅರಬ್ಬೀಯನ್ ಭಾಷೆಯಲ್ಲಿ ಬಕರ್ ಎಂದರೆ ಹಸು ಅಥವಾ ಮೇಕೆ ಎಂಬ ಅರ್ಥ ಅಲ್ಲಾಹನ ಹೆಸರಿನಲ್ಲಿ ಬಲಿಕೊಡುವ ದಿನದ ಆಚರಣೆಗೆ ಬಕ್ರೀದ್ (ಇದ್ ಉದ್ ದುಹ್ಹಾ) (ಕುರ್ಬಾನ್) ಎಂದು ಕರೆಯುತ್ತಾರೆ. ಈ ಹಬ್ಬವನ್ನು ಜಿಲ್ಹಾಜ್ ತಿಂಗಳದ 10ನೇ ದಿನದಂದು ಆಚರಿಸಲಾಗುತ್ತದೆ. ಹಾಗೆಯೇ ಈ ಮಾಸದಲ್ಲಿ ಮುಸಲ್ಮಾನ್ ಬಾಂಧವರು ಹಜ್ ಯಾತ್ರೆಯನ್ನು ಕೈಗೊಂಡು ಅಪಾರ ಸಂಖ್ಯೆಯಲ್ಲಿ ಮೆಕ್ಕಾದಲ್ಲಿರುವ ಪವಿತ್ರ ಕಾಬಾವನ್ನು ಸಂದರ್ಶಿಸುತ್ತಾರೆ. ಅಲ್ಲದೆ ಮೀನಾ ಎಂಬ ಸ್ಥಳದಲ್ಲಿ ಕುರ್ಬಾನಿ (ಬಲಿದಾನ) ನೀಡಿ ಪುನೀತರಾಗುತ್ತಾರೆ.
ಬಕ್ರೀದ್ ಹಿನ್ನೆಲೆ: ಹಜರತ್ ಇಬ್ರಾಹಿಂ ಖಲೀಲುಲ್ಲಾರವರ ಕಾಲದಿಂದ ಈ ಆಚರಣೆ ಆರಂಭಗೊಂಡಿದೆ ಎಂದು ಕುರಾನ್ ಮತ್ತು ಹದೀಸುಗಳಲ್ಲಿ ಇದರ ಉಲ್ಲೇಖವಿದೆ. ಸುಮಾರು 4 ಸಾವಿರ ವರ್ಷಗಳ ಹಿಂದೆ ಹಜರತ್ ಇಬ್ರಾಹಿಂ ಖಲೀಲುಲ್ಲಾ ಅವರ ಧರ್ಮಪತ್ನಿ ಹಬೀಬಿ ಹಾಜರಾ ಎಂಬ ಸಾತ್ವಿಕ ದಂಪತಿಗೆ ಇಸ್ಮಾಯಿಲ್ ಎಂಬ ಪುತ್ರ ಜನಿಸಿದ. ಸಾಕ್ಷಾತ ಅಲ್ಲಾಹನ ಅನುಯಾಯಿಗಳಾಗಿದ್ದ ಈ ದಂಪತಿಯು ತಮ್ಮ ಪರಿವಾರ ಸಮೇತ ಇಸ್ಲಾಂ ಧರ್ಮದ ತತ್ವ ಸಿದ್ಧಾಂತ ನಂಬಿದವರು. ದೇವರ ಮೇಲೆ ಇವರಿಗಿದ್ದ ದೃಢ ನಿಷ್ಠೆಯನ್ನು ಲೋಕದ ಜನರಿಗೆ ತೋರಿಸಿಕೊಡಲು ಅಲ್ಲಾಹನು ಹಜರತ್ ಇಬ್ರಾಹಿಂ ಅವರಿಗೆ ಅತ್ಯಂತ ಕಠಿಣ ಅಗ್ನಿ ಪರೀಕ್ಷೆಯನ್ನು ಒಡ್ಡಿದನೆಂದು ಇತಿಹಾಸದ ಪ್ರತೀತಿಯಿದೆ.
ಅಲ್ಲಾಹನ ಪರೀಕ್ಷೆ: ಅಲ್ಲಾಹನು ಹಜರತ್ ಇಬ್ರಾಹಿಂರವರಿಗೆ ಒಂದು ದಿನ ಸ್ವಪ್ನದಲ್ಲಿ ಪ್ರತ್ಯಕ್ಷನಾಗಿ ನಿನ್ನ ಪ್ರೀತಿಯ ಸುಪುತ್ರನನ್ನ ನನಗೆ ಬಲಿಕೊಡಬೇಕೆಂದು ಆಜ್ಞಾಪಿಸಿದ. ಅಲ್ಲಾಹನ ಆಜ್ಞೆಯಂತೆ ಮಾರನೇ ದಿನ ತಮ್ಮ 12 ವರ್ಷ ವಯಸ್ಸಿನ ಇಸ್ಮಾಯಿಲ್ನನ್ನು ಕರೆದುಕೊಂಡು ಮಿನಾದತ್ತ ಪ್ರಯಾಣ ಬೆಳೆಸಿದರು. ಮೀನಾದಲ್ಲಿ ಅಲ್ಲಾಹನ ಆಜ್ಞೆಯಂತೆ ಕರುಳ ಕುಡಿಯನ್ನು ಬಲಿಕೊಡಲು ಸನ್ನದ್ಧರಾದಾಗ ಕ್ಷಣಾರ್ಧದಲ್ಲಿ ಅಲ್ಲಾಹನು ಇವರ ಪ್ರಾಮಾಣಿಕತೆ, ಭಕ್ತಿಗೆ ಮೆಚ್ಚಿ ಹಜರತ್ ಜಿಬ್ರಾಯಿಲ್ ಎಂಬ ದೇವದೂತನ ಮೂಲಕ ಬಲಿದಾನವಾಗುತ್ತಿದ್ದ ಇಸ್ಮಾಯಿಲ್ ಸ್ಥಾನದಲ್ಲಿ ಬಕರಾ (ಟಗರ)ನ್ನು ಸೃಷ್ಟಿಸಿ ಬಲಿ ನೀಡಲಾಯಿತು. ಅಂದಿನಿಂದ ವಿಶ್ವದಾದ್ಯಂತ ಮುಸಲ್ಮಾನ್ ಬಾಂಧವರು ಜಿಲ್ಹಾಜ್ ಮಾಸದಲ್ಲಿ ತಮ್ಮ ತಮ್ಮ ಶಕ್ತಾನುಸಾರವಾಗಿ ಅಲ್ಲಾಹನ ಹೆಸರಿನಲ್ಲಿ ಜುಬಾ (ಮಂತ್ರಗಳನ್ನು ಪಠಿಸಿ) ಶುದ್ಧ ಮಾಂಸವನ್ನು ಸರಿಯಾಗಿ ಮೂರು ಭಾಗ ಮಾಡಿ ಒಂದು ಭಾಗವನ್ನು ಬಡವರಿಗೆ, ಒಂದು ಭಾಗವನ್ನು ಬಂಧು ಮಿತ್ರರಿಗೆ ಹಂಚುತ್ತಾರೆ. ಉಳಿದೊಂದು ಭಾಗವನ್ನು ತಾವು ಉಪಯೋಗಿಸುತ್ತಾರೆ. ಇನ್ನು ಹಜ್ ಯಾತ್ರಿಕರು ಮೀನಾ ಎಂಬ ಸ್ಥಳದಲ್ಲಿ ಬಲಿದಾನ ಮಾಡುತ್ತಾರೆ. ಹಜ್ ಸಮಯದಲ್ಲಿ ಬಲಿದಾನ ಮಾಡಲು ಟಗರು ದೊರೆಯದಿದ್ದಲ್ಲಿ ಅಲ್ಲಿ 3 ದಿನ ರೊಜಾ (ಉಪವಾಸ) ಆಚರಿಸಿ ಸ್ವದೇಶಕ್ಕೆ ಮರಳಿದ ಮೇಲೆ ಏಳು ದಿನ ಉಪವಾಸ ವೃತ ಕೈಗೊಳ್ಳಬಹುದೆಂದು ಹೇಳಲಾಗುತ್ತದೆ. ಇನ್ನು ಈ ಪವಿತ್ರ ಆಚರಣೆಯನ್ನು ಭಾರತೀಯ ಮುಸಲ್ಮಾನ್ ಬಾಂಧವರು ಅತ್ಯಂತ ಶೃದ್ಧಾ ಭಕ್ತಿಯಿಂದ ಬಡವ ಬಲ್ಲಿದನೆಂಬ ಭೇದವಿಲ್ಲದೆ ಭಾವೈಕ್ಯ ಸಂದೇಶವಾಗಿ ಬಕ್ರೀದ್ ಹಬ್ಬವನ್ನು ಆಚರಿಸಿ ಅಲ್ಲಾಹನಲ್ಲಿ ಕೃತಾರ್ಥರಾಗುತ್ತಾರೆ.