ಮಕ್ಕಳ ಶೈಕ್ಷಣಿಕ ಉನ್ನತಿ ಶಿಕ್ಷಕರ ಹೊಣೆ
ಗಜೇಂದ್ರಗಡ: ಸರ್ಕಾರದ ಅನುದಾನ ಸಮರ್ಪಕ ಸದ್ಬಳಕೆಯ ಜತೆಗೆ ಮಕ್ಕಳ ಶೈಕ್ಷಣಿಕ ಕ್ಷೇತ್ರದ ಉನ್ನತಿಗೆ ಶ್ರಮಿಸುವ ಹೊಣೆಗಾರಿಕೆ ಶಿಕ್ಷಕ ಸಮೂಹ ಮೇಲಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು. ಸಮೀಪದ ಗೊಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಆರ್.ಎಂ.ಎಸ್.ಎ ಯೋಜನೆಯ ಅಡಿ ಮಂಜೂರಾದ ಅನುದಾನದಲ್ಲಿ 4 ಕೊಠಡಿ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ದೇಶದ ಪ್ರತಿ ಮಗುವಿಗೂ ಶಿಕ್ಷಣ ಕಡ್ಡಾಯ ಎಂಬ ಧ್ಯೇಯದೊಂದಿಗೆ ಉಚಿತ ಪಠ್ಯ ಪುಸ್ತಕ ಸಮವಸ್ತ್ರ, ಸೈಕಲ್, ಬಿಸಿಯೂಟ, ವಸತಿ ಜತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದಂತಹ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿ ಆ ಮೂಲಕ ಶಿಕ್ಷಣ ಕ್ರಾಂತಿ ಮಾಡಲು ಪಣತೊಟ್ಟ ಸರ್ಕಾರದ ಕನಸು ನನಸಾಗಿಸುವತ್ತ ಶಿಕ್ಷಕ ಸಮೂಹ ಸನ್ನದ್ಧರಾಗಬೇಕು ಎಂದರು. ಎಸ್.ಎಂ. ಆರಗಿದ್ದಿ, ವಿ.ಆರ್. ಗುಡಿಸಾಗರ, ವೀರಣ್ಣ ಶೆಟ್ಟರ, ಹನುಮಪ್ಪ ಕಮ್ಮಾರ, ಇಮಾಮ್ಸಾಬ್ ಬಾಗವಾನ, ಎಸ್.ಡಿ.ಎಂ.ಸಿ ಅಧ್ಯಕ್ಷ ಸಿ.ಎಂ. ಭೋಸಲೆ, ಹನುಮಪ್ಪ ಹೊರಪೇಟಿ, ಹನಮಪ್ಪ ಮಾದರ, ಮೌನೇಶಪ್ಪ ಭೋಸಲೆ, ಮಲ್ಲಿಕಾರ್ಜುನ ಗಾರಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಪಾಟೀಲ, ಮುಖ್ಯೋಪಾಧ್ಯಾಯ ಬಿ.ಎನ್. ಜಾಲಿಹಾಳ, ಶ್ರೀಕಾಂತ ಅವಧೂತ, ಉಮೇಶ ರಾಠೋಡ, ಎಫ್.ಎಸ್. ಕರಿದುರಗನವರ, ಮರ್ತುಜಾ ಡಾಲಾಯತ್, ಬಾಬಣ್ಣ ನದಾಫ, ಶರಣಪ್ಪ ಕೊಟಗಿ, ಭೀಮಣ್ಣ ತಳವಾರ, ಶ್ರೀಕಾಂತ ತಾಳಿಕೋಟಿ ಮುಂತಾದವರು ಉಪಸ್ಥಿತರಿದ್ದರು.