ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವೈದ್ಯರ ಬರಹ ಸ್ಪಷ್ಟವಾಗಿರಲಿ

Lingaraj Badiger
Updated On : 16 Oct 2013, 11:44 am

ಕನ್ನಡಪ್ರಭ ವಾರ್ತೆ, ಗದಗ, ಅ. 15
ವೃತ್ತಿ ನಿರತ ವೈದ್ಯರ ಕೈ ಬರಹ ಕಡ್ಡಾಯವಾಗಿ ದಪ್ಪ ಅಕ್ಷರಗಳಲ್ಲಿರಬೇಕು ಎಂಬ ಕರ್ನಾಟಕ ವೈದ್ಯಕೀಯ ಪರಿಷತ್‌ನ 2012ರ ನಿಯಮ ಸಮರ್ಪಕ ಜಾರಿಗೆ ತರುವಂತೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಗೆ ಆಗ್ರಹಿಸುವುದಾಗಿ ರಾಜ್ಯ ವೈದ್ಯರ ಕೈಬರಹ ಸುಧಾರಕರ ಸಂಘದ ರಾಜ್ಯಾಧ್ಯಕ್ಷ ಡಾ. ಶಾಂತಗೇರಿ ಮಲ್ಲಪ್ಪ ಹೇಳಿದರು.
ಅವರು ಮಂಗಳವಾರ ನಗರದ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಹೊಸ ನಿಯಮ ಆಗಸ್ಟ್ 24ರ 2012 ರಂದೇ ಜಾರಿಯಾಗಿದ್ದರೂ ರಾಜ್ಯದಲ್ಲಿ ವೈದ್ಯಕೀಯ ಪರಿಷತ್‌ನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 96 ಸಾವಿರಕ್ಕೂ ಹೆಚ್ಚು ವೈದ್ಯರಿಗೆ ಈ ನಿಯಮಗಳ ಬಗ್ಗೆ ಸ್ಪಷ್ಟವಾದ ಮಾಹಿತಿಯಿಲ್ಲ. ಇದರಿಂದಾಗಿ ಈ ಆದೇಶ ಪಾಲನೆಯಾಗುತ್ತಿಲ್ಲ. ಮುಖ್ಯಮಂತ್ರಿಗಳ ಸಚಿವಾಲಯ ಆಗಸ್ಟ್ 7ರ 2013ರಂದು ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೀಡಿದ ಸೂಚನೆಯ ಹಿನ್ನೆಲೆಯಲ್ಲಿ ಸೆ. 2ರಂದು ಸುತ್ತೋಲೆ ಹೊರಡಿಸಿ ಆಯುಶ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 34 ಸಾವಿರ ವೈದ್ಯರು ಕೈಬರಹ ಸುಧಾರಣೆಗೆ ಪ್ರಾಮುಖ್ಯತೆ ನೀಡುವಂತೆ ಆದೇಶ ಮಾಡಲಾಗಿದೆ. ರೋಗಿಗಳಿಗೆ ವೈದ್ಯರು ಔಷಧಿ ಚೀಟಿ ನೀಡುವಾಗ ಕಡ್ಡಾಯವಾಗಿ ಇಂಗ್ಲಿಷನ ಕ್ಯಾಪಿಟಲ್ ಅಕ್ಷರಗಳನ್ನು ಬಳಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಇಲಾಖೆಯ ಆಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ವೈದ್ಯ ಪದ್ಧತಿಯ ಆಯುರ್ವೇದ, ಯುನಾನಿ, ಯೋಗ, ನ್ಯಾಚುರೋಪತಿ, ಹೋಮಿಯೋಪತಿ ಕಾಲೇಜುಗಳಿಗೂ ಈ ಕ್ರಮ ಅನ್ವಯವಾಗಲಿದ್ದು, ಮುಂದಿನ ಹಂತದಲ್ಲಿ ವೈದ್ಯ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಕಾಲೇಜುಗಳಿಗೂ ಮತ್ತು ಆಸ್ಪತ್ರೆಗಳಿಗೂ ಈ ಸೂಚನೆ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸರ್ಕಾರವನ್ನು ಸಂಘ ಒತ್ತಾಯಿಸಲಿದೆ. ಈಗಾಗಲೇ ಮಹಾರಾಷ್ಟ್ರ ರಾಜ್ಯದಲ್ಲಿ ಈ ನಿಯಮ ಜಾರಿಯಲ್ಲಿದ್ದು, ಅಲ್ಲಿನ ವೈದ್ಯರು ಈ ನಿಯಮವನ್ನು ಸಮರ್ಪಕವಾಗಿ ಜಾರಿಗೆ ತಂದಿದ್ದಾರೆ. ಈ ನಿಯಮವನ್ನು ದೇಶಾದ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಆಗ್ರಹಿಸಿ ಕೇಂದ್ರದ ಆರೋಗ್ಯ ಸಚಿವರಿಗೂ ಹಾಗೂ ಭಾರತೀಯ ವೈದ್ಯಕೀಯ ಪರಿಷತ್‌ಗೂ ಈಗಾಗಲೇ ಪತ್ರಮುಖೇನ ಆಗ್ರಹಿಸಲಾಗಿದೆ.
ವೈದ್ಯರು ನೀಡುವ ಅಸ್ಪಷ್ಟ ಬರಹವುಳ್ಳ ಔಷಧ ಚೀಟಿಗಳಿಂದ ಪ್ರತಿವರ್ಷ ಅಮೆರಿಕಾದಲ್ಲಿ 7 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಅಮೆರಿಕಾದ ಇನ್‌ಸ್ಟ್ಯೂಟ್ ಆಫ್ ವರದಿ ನೀಡಿದೆ. ಭಾರತದಲ್ಲಿ ಈ ಕುರಿತು ಇನ್ನೂ ನಿಖರವಾದ ಸಮೀಕ್ಷೆ ಜರುಗಿಲ್ಲ. ದೇಶದಲ್ಲಿ ಪ್ರತಿದಿನ ಸುಮಾರು 40 ಲಕ್ಷಕ್ಕೂ ಅಧಿಕ ವೈದ್ಯಕೀಯ ಚೀಟಿಗಳನ್ನು ಬರೆಯಲಾಗುತ್ತಿದೆ ಎಂಬುದು ಸಂಘಟನೆಯೊಂದರ ಸಮೀಕ್ಷೆಯಾಗಿದೆ. ಈ ಹಿನ್ನೆಲೆಯಲ್ಲಿ ಕೈಬರಹ ಸುಧಾರಣೆಗೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಪ್ರಾಮುಖ್ಯತೆ ನೀಡಿ ಕಟ್ಟುನಿಟ್ಟಿನ ನಿಯಮ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement