ಆಧಾರ್ ಕಾರ್ಡ್ ಕಡ್ಡಾಯ ಬೇಡ
ಕನ್ನಡಪ್ರಭ ವಾರ್ತೆ, ಗದಗ, ಅ. 16
ಆಧಾರ್ ಕಾರ್ಡ್ ವಿತರಣೆ ಮತ್ತು ನಿರ್ವಹಣೆಯಲ್ಲಿ ಸಾಕಷ್ಟು ಲೋಪದೋಷಗಳಿದ್ದು, ಸರ್ಕಾರ ಎಲ್ಲದಕ್ಕೂ ಆಧಾರ್ ಕಾರ್ಡ್ ಕಡ್ಡಾಯಗೊಳಿಸಬಾರದು ಎಂದು ಸುಪ್ರೀಂಕೋರ್ಟ್ 23-9-2013 ರಂದು ಸೂಚಿಸಿದೆ. ಆದರೆ, ಸರ್ಕಾರ ಮಾತ್ರ ಅದರಲ್ಲಿಯೂ ಗದಗ ಜಿಲ್ಲೆಯಲ್ಲಿ ಏಕಪಕ್ಷೀಯವಾಗಿ ಆಧಾರ್ ಕಾರ್ಡ್ ಕಡ್ಡಾಯಗೊಳಿಸುತ್ತಿದ್ದು, ಕೂಡಲೇ ಅದನ್ನು ಸ್ಥಗಿತಗೊಳಿಸಬೇಕು ಹಾಗೂ ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕೊಳಚೆ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲೆಯಾದ್ಯಂತ ಸಾರ್ವಜನಿಕರು ಸರ್ಕಾರದ ಯೋಜನೆಗಳಾದ ಪಡಿತರ ಚೀಟಿ, ಸಾಲದ ಯೋಜನೆ, ಶೈಕ್ಷಣಿಕ ಯೋಜನೆ, ವಸತಿ ಯೋಜನೆ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಮಂಜೂರಾಗುವ ಎಲ್ಲ ಯೋಜನೆಗಳಿಗೆ ಆಧಾರ್ ಕಾರ್ಡ್ನ್ನು ಕಡ್ಡಾಯವಾಗಿ ಕೇಳುತ್ತಿರುವುದರಿಂದ ಜಿಲ್ಲೆಯ ಸಾವಿರಾರು ಬಡ ಕುಟುಂಬದ ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರದ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಸುಪ್ರೀಂಕೋರ್ಟ್ ಆಧಾರ್ ಕಾರ್ಡ್ ಕಡ್ಡಾಯವಾಗಬಾರದೆಂದು ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ. ಆದರೂ ಗದಗ ಜಿಲ್ಲೆಯ ಇಲಾಖೆಗಳಲ್ಲಿ ಪ್ರತಿಯೊಂದು ಕೆಲಸಕ್ಕೆ ಆಧಾರ್ ಕಾರ್ಡ್ ಕೇಳುತ್ತಿರುವುದು ಖಂಡನೀಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ತಕ್ಷಣ ಜಿಲ್ಲಾಧಿಕಾರಿ ಸುಪ್ರೀಂಕೋರ್ಟ್ ಆದೇಶದಂತೆ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಸರ್ಕಾರದ ಯೋಜನೆಗಳಲ್ಲಿ ಆಧಾರ್ ಕಾರ್ಡ್ ಕಡ್ಡಾಯ ಗೊಳಿಸಬಾರದೆಂದು ನಿರ್ದೇಶನ ನೀಡಬೇಕು. ಒಂದು ವೇಳೆ ಇಲಾಖೆಯಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ನೀಡಬೇಕೆಂದು ಕೇಳಿದರೆ ಅಂತಹ ಅಧಿಕಾರಿಗಳ ಮೇಲೆ ನ್ಯಾಯಾಲಯದ ಆದೇಶದ ಉಲ್ಲಂಘನೆಯಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸಮಿತಿ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಮಾನ್ವಿ, ಅಧ್ಯಕ್ಷ ಅಶೋಕ ಮ್ಯಾಗೇರಿ, ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಮಹಿಳಾ ಸಮಿತಿ ಅಧ್ಯಕ್ಷ ಉಮಾದೇವಿ ಕಾತರಕಿ, ತಿಪ್ಪವ್ವ ಮುಟಗಾರ, ಯುವ ಸಮಿತಿ ಅಧ್ಯಕ್ಷ ಶರೀಫ ಬಿಳೆಯಲಿ, ಉಪಾಧ್ಯಕ್ಷ ಯಲಪ್ಪ ರಾಮಗಿರಿ, ಪರಶುರಾಮ ಕಾಳೆ, ರಾಜು ಕಣಗಿನಹಾಳ, ನಾಗರಾಜ ಮುಟಗಾರ, ಅನೀಲ ಕಾಳೆ, ಬಸವರಾಜ ಬಿಳೆಯಲಿ, ಸಲೀಂ, ಗೌರಮ್ಮ ಶಿರಗುಪ್ಪಿ, ಶಹಜಾನಬೇಗಂ ಕರ್ನಾಚಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.