ಆಧುನಿಕ ದಿನಗಳಲ್ಲಿ ಮಹಿಳೆ ಸಬಲಳಾಗಿದ್ದಾಳೆ: ಜಾಲಿಹಾಳ
ಕನ್ನಡಪ್ರಭ ವಾರ್ತೆ, ಗದಗ, ಅ. 16
ಇಂದಿನ ಆಧುನಿಕ ದಿನಗಳಲ್ಲಿ ಮಹಿಳೆ ಸಬಲಳಾಗಿದ್ದಾಳೆ ಎಂದು ಗದಗ ಕೆವಿಎಸ್ಆರ್ ಕಾಲೇಜಿನ ಪ್ರಾಚಾರ್ಯ ಬಿ.ಆರ್.ಜಾಲಿಹಾಳ ಅಭಿಪ್ರಾಯಪಟ್ಟರು.
ಅವರು ನಗರದ ಅಕ್ಕನ ಬಳಗದಲ್ಲಿ ಶರನ್ನವರಾತ್ರಿ ಅಂಗವಾಗಿ ಭಾನುವಾರ ಅಕ್ಕನ ಬಳಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯ ಪಾತ್ರ ವಿಷಯವಾಗಿ ಮಾತನಾಡಿದರು.
ಪ್ರಗತಿಪರ ಇಂದಿನ ಆಧುನಿಕ ದಿನಗಳಲ್ಲಿ ಮಹಿಳೆ ಪುರುಷನಿಗೆ ಸರಿಸಮನಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಎಲ್ಲ ರಂಗದಲ್ಲಿಯೂ ವಿಶಿಷ್ಟ ಸಾಧನೆಗೈದಿರುವ ಮಹಿಳೆ ತೊಟ್ಟಿಲು ತೂಗುವ ಕೈ ಜಗತ್ತನ್ನೆ ತೂಗಬಲ್ಲಳು ಎಂಬುದನ್ನು ಸಾಬೀತುಗೊಳಿಸಿದ್ದಾಳೆ. ಮನೆ ನಂದನಗೋಕುಲವಾಗಿರಬೇಕು, ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯಿಂದ ಕೂಡಿರಬೇಕಾದರೆ ಮಹಿಳೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಕ್ಕನ ಬಳಗದ ಅಧ್ಯಕ್ಷೆ ಕಸ್ತೂರಿ ಹಿರೇಗೌಡರ ಮಾತನಾಡಿ, ಮಹಿಳೆ ಮಮತೆಯ ಖನಿ, ತಾಯಿಯಾಗಿ ಪ್ರೀತಿ, ವಾತ್ಸಲ್ಯ, ಕಕ್ಕುಲತೆ ತೋರುತ್ತಾಳೆ. ಸಂಸಾರದಲ್ಲಿ ಸಮಾಜದಲ್ಲಿ ಮಹಿಳೆಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ ಎಂದರು.
ವಿ.ಆರ್. ಮಾಳೆಕೊಪ್ಪಮಠ ಮಾತನಾಡಿದರು. ಪಾರ್ವತಿ ಮಾಳೆಕೊಪ್ಪಮಠ, ಸುವರ್ಣ ವಸ್ತ್ರದ, ಬಾಳಿಹಳ್ಳಿಮಠ ಹಾಗೂ ಸುಗ್ಲಾ ಯಳಮಲಿ ಅವರಿಂದ ನೃತ್ಯ ರೂಪಕ ಜರುಗಿತು. ಕಸ್ತೂರಿ ಶಾಂತಾದೇವಿ ಕಲ್ಲೂಳಗಿ, ಕುಸುಮಾದೇವಿ ಮಾಳೆಕೊಪ್ಪಮಠ, ಶಿವಪಾರ್ವತಿ ಕುಟ್ಟೂರಶೆಟ್ಟರ, ಲಲಿತಾ ಬಾಳಿಹಳ್ಳಿಮಠ, ಶಕುಂತಲಾ ಗೌಡರ, ಶಿವಲೀಲಾ ಕುರಡಗಿ ಮುಂತಾದವರಿದ್ದರು. ಹಿರೇಗೌಡರ ಸ್ವಾಗತಿಸಿದರು. ಸುನಂದಾ ಮಾಳೆಕೊಪ್ಪಮಠ ನಿರೂಪಿಸಿದರು. ಶಾರದಾ ಹಿರೇಮಠ ವಂದಿಸಿದರು.