ಕೀಟನಾಶಕ ಬಳಕೆಯಿಂದ ಆಹಾರವೂ ವಿಷ: ಪರಡ್ಡಿ
ನರಗುಂದ: ಭೂ ತಾಯಿಗೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಸುವುದರಿಂದ ನಾವೆಲ್ಲಾ ಸೇವನೆ ಮಾಡುವ ಆಹಾರವೂ ವಿಷಯುಕ್ತವಾಗುತ್ತಿದೆ ಎಂದು ಅನಸೂಯಾ ಪರಡ್ಡಿ ಹೇಳಿದರು. ಅವರು ಈಚೆಗೆ ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ದೊರೆಸ್ವಾಮಿ ಸ್ಮರಣೋತ್ಸವ ಮತ್ತು ಜಿಲ್ಲಾ ಮತ್ತು ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಬೆಳೆಗಳಿಗೆ ಹಲವಾರು ವರ್ಷಗಳಿಂದ ವಿಷಪೂರಿತ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಉಪಯೋಗ ಮಾಡಿದ್ದರಿಂದ ಆಹಾರವೆಲ್ಲಾ ವಿಷವಾಗುತ್ತಿದೆ. ಇದನ್ನು ನಮ್ಮ ರೈತ ಬಾಂಧವರು ಕೂಡಲೇ ಗಮನಿಸಬೇಕು ಮತ್ತು ಕೀಟನಾಶಕ ಬಳಸುವುದನ್ನು ನಿಲ್ಲಿಸಬೇಕು ಎಂದರು. ಹುಬ್ಬಳ್ಳಿಯ ಮೂರುಸಾವಿರದ ಮಠದ ಸಾಧಕ ಶಿವಮೂರ್ತಿ ದೇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಲಿ.ದೊರೆಸ್ವಾಮಿ ಸ್ಮರಣೋತ್ಸವದ ಅಂಗವಾಗಿ ಪೂಜ್ಯರ ಭಾವಚಿತ್ರದ ಪಲ್ಲಕ್ಕಿ ಮರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಜಿಲ್ಲಾ ಮತ್ತು ತಾಲೂಕು ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಹನುಮಂತಪ್ಪ ಪಟ್ಟೇದ, ಮುತ್ತಣ್ಣ ಮೇಟಿ ಅವರನ್ನು ಶ್ರೀ ಮಠದಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ವೀರೇಶ ದೇವರು, ಶಿವಯ್ಯ ಹಿರೇಮಠ, ಶಾಂತಕುಮಾರ ಭಜಂತ್ರಿ, ಶೇಖರಯ್ಯ ಉಮಚಗಿಮಠ, ಬಸನಗೌಡ ಕರಮಡಿ, ದಾನಪ್ಪ ವಡ್ಡಿನ, ಕುಬೇರಪ್ಪ ಪರಡ್ಡಿ ಹಾಜರಿದ್ದರು. ಭೀಮಣ್ಣ ಅಕ್ಕೇರಿ ನಿರೂಪಿಸಿದರು. ಮಹಾಂತೇಶ ಹಿರೇಮಠ ಸ್ವಾಗತಿಸಿ, ವಂದಿಸಿದರು.