ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಲಂಬಾಣಿಗರ ಸಂಸ್ಕೃತಿ ಅನಾವರಣ

Lingaraj Badiger
Updated On : 17 Oct 2013, 11:54 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಅ. 16
ಗದಗ ಜಿಲ್ಲೆಯಲ್ಲಿಯೇ ಶಿರಹಟ್ಟಿ ತಾಲೂಕಿನ ಛಬ್ಬಿ ಗ್ರಾಮದ ಲಂಬಾಣಿ ತಾಂಡಾದಲ್ಲಿ ದಸರಾ ಉತ್ಸವ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, 10 ದಿನಗಳ ಕಾಲ ಹಗಲು-ರಾತ್ರಿ ವಿವಿಧ ಕಲಾ ಪ್ರಕಾರಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವುದು ವಿಶೇಷ. ಜತೆಗೆ ಸೌಹಾರ್ದತೆ, ಸಾಮರಸ್ಯ ಮತ್ತು ಭಾತೃತ್ವವನ್ನು ಗಟ್ಟಿಗೊಳಿಸುವಲ್ಲಿ ದಸರಾ ಆಚರಣೆ ಮಹತ್ವ ಪಡೆದುಕೊಂಡಿದೆ.
ಸಮಾಜದ ಹಿರಿಯರ ಆಜ್ಞೆಯಂತೆ ಲಂಬಾಣಿ ಸಮಾಜ ಉದಯವಾದಾಗಿನಿಂದಲೂ ತಮ್ಮದೇ ಆದ ಸಂಪ್ರದಾಯ ಮುಂದುವರಿಸಿಕೊಂಡು ಬಂದಿರುವ ಈ ಜನಾಂಗ ದಸರಾ ಹಬ್ಬದ ಪ್ರಾರಂಭದ ದಿನದಿಂದ ನಿತ್ಯವೂ ಹಗಲು-ರಾತ್ರಿ ಮಹಿಳೆಯರು, ವೃದ್ಧರು, ಮಕ್ಕಳಾದಿಯಾಗಿ ತಾಂಡಾದ ಸೇವಾಲಾಲ ಮಂದಿರದ ಆವರಣದಲ್ಲಿ ಸಾಹಿತ್ಯ, ಕಲೆ, ಸಂಗೀತ, ಹಾಸ್ಯ ಕಾರ್ಯಕ್ರಮದ ಮೂಲಕ ದಸರಾವನ್ನು ವಿಭಿನ್ನವಾಗಿ ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ.
ಗುರು-ಹಿರಿಯರ ಸಮ್ಮುಖದಲ್ಲಿ ಸಮಾಜ ಬಾಂಧವರೆಲ್ಲರೂ ಸೇರಿ ದಸರಾ ಹಬ್ಬದ ಮೊದಲನೇ ದಿನ ತಾಂಡಾದ 20 ಜನ ಮದುವೆ ಆಗದ ಹೆಣ್ಣು ಮಕ್ಕಳಿಗೆ (ಯುವತಿಯರಿಗೆ) ಗೌರಿ ಸಸಿ ನೆಡಲು ಬುಟ್ಟಿ ತರಲು ಸೂಚಿಸುತ್ತಾರೆ. ಯುವತಿಯರು ಮಡಿವಂತಿಕೆಯಿಂದ ಕಪ್ಪು-ಕಡಿ ಸೇವನೆ ಮಾಡದೇ ಭಕ್ತಿಯಿಂದ ಬುಟ್ಟಿ ಜತೆಗೆ ಮಣ್ಣು, ಕುರಿ ಹಿಕ್ಕಿ ತರುತ್ತಾರೆ. ಈ ಬುಟ್ಟಿಯಲ್ಲಿ ಗೋದಿ ಹಾಕಲಾಗುತ್ತದೆ. ದಸರಾ ಹಬ್ಬದ ಕೊನೆ ದಿನ ಉಪವಾಸ ವ್ರತ ಆಚರಿಸಿ ಬುಟ್ಟಿಯಲ್ಲಿ ಮೊಳಕೆಯೊಡೆದ ಸಸಿ ತೆಗೆದು ದೇವರಿಗೆ ಏರಿಸಿ ಪೂಜೆ ಸಲ್ಲಿಸಿ, ಹಳ್ಳ, ಬಾವಿ, ಕೆರೆಗಳಿಗೆ ಸಸಿ ಕಳುಹಿಸುವ ಸಂಪ್ರದಾಯ ನಡೆಯುತ್ತದೆ.
ವೃದ್ಧೆಯಿಂದ ನೃತ್ಯ
ವಿಶೇಷವೆಂದರೆ 10 ದಿನಗಳ ಕಾಲ ನಡೆಯುವ ವಿವಿಧ ಪ್ರಕಾರದ ಲಂಬಾಣಿ ನೃತ್ಯದಲ್ಲಿ ಸೋಮವ್ವ ಜಾಪಣ್ಣ ಲಮಾಣಿ ಎಂಬ 95 ವರ್ಷದ ವೃದ್ಧೆ ಯುವತಿಯರನ್ನು ನಾಚಿಸುವಂತೆ ನೃತ್ಯ ಮಾಡಿದ್ದು ಜನತೆಯನ್ನು ಬೆರಗುಗೊಳಿಸಿತು. ಸಮಾಜದ ಮುಖಂಡರನ್ನೇ ಮಾರುತಿ ದೇವರ ರೂಪಕ ಮಾಡಿ ನಿಲ್ಲಿಸಿ ಅವರಿಂದ ವರ ಕೇಳುವುದು, ಆರತಿ ಹಿಡಿದು ವಿಶೇಷ ಪೂಜೆ ಸಲ್ಲಿಸುವುದು, ಅವರ ಪಾದಕ್ಕೆ ಬಿದ್ದು ನಮಸ್ಕರಿಸುವುದು ಮತ್ತೊಂದು ವಿಶೇಷತೆಯಾಗಿದೆ.
ಜಾನು ನಾಯಕ, ಮಾನು ನಾನಪ್ಪ ನಾಯಕ, ಜಂಬಣ್ಣ ಕಾರಬಾರಿ, ರಾಮಚಂದ್ರಪ್ಪ ಕಾರಬಾರಿ, ಡಾವ ರಾಮಚಂದ್ರಪ್ಪ ದೊಡ್ಡಮನಿ, ದೇನಪ್ಪ ಹರಿಜಪ್ಪ ಲಮಾಣಿ, ಜಾನು ಲಮಾಣಿ, ದೇವಪ್ಪ ಲಮಾಣಿ, ಎನ್.ಕೆ. ಲಮಾಣಿ, ತಿಪ್ಪಣ್ಣ ಲಮಾಣಿ, ರಾಮು ಲಮಾಣಿ, ಮಲ್ಲೇಶ ಲಮಾಣಿ, ಮಾನಪ್ಪ ಕಾರಬಾರಿ, ಪಾಂಡು ಲಮಾಣಿ, ರಾಮಪ್ಪ ನಾನಪ್ಪ ಲಮಾಣಿ, ಹೆಗ್ಗಪ್ಪ ರುದ್ರಪ್ಪ ಲಮಾಣಿ ಮತ್ತಿತರ ಸಮಾಜದ ಮುಖಂಡರ ನೇತೃತ್ವದಲ್ಲಿ 10 ದಿನಗಳ ದಸರಾ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಯಿಂದ ಜರುಗಿದವು.
- ಮಹದೇವಪ್ಪ ಎಂ. ಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement