ಶಾಲೆಗಳ ನಿರ್ಮಾಣ ಪವಿತ್ರ ಕಾರ್ಯ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಅ. 16
ದೇವಾಲಯಗಳ ನಿರ್ಮಾಣಕ್ಕಿಂತ ಶಾಲೆಗಳನ್ನು ನಿರ್ಮಿಸುವುದು ಪವಿತ್ರ ಕಾರ್ಯವಾಗಿದೆ. ಶಾಲೆಗಳು ಸಮಾಜದ ಏಳ್ಗೆಗೆ ಶ್ರಮಿಸುತ್ತವೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಸಮೀಪದ ಹುಲ್ಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯ ಅಡಿಯಲ್ಲಿ ಈ ಪ್ರೌಢಶಾಲೆಯ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು, ಗ್ರಾಮೀಣ ಪ್ರದೇಶದ ಮಕ್ಕಳು ಉನ್ನತ ಶಿಕ್ಷಣ ಹೊಂದಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಅನುದಾನ ನೀಡುತ್ತಿವೆ. ಅದಕ್ಕಾಗಿ ಗ್ರಾಮೀಣ ಪ್ರದೇಶದ ಮಕ್ಕಳು ಪಟ್ಟಣ ಪ್ರದೇಶದ ಮಕ್ಕಳಿಗೆ ಯಾವುದೇ ರೀತಿಯಿಂದಲೂ ಕಡಿಮೆ ಎನ್ನುವ ಭಾವನೆಯನ್ನು ತೊಡೆದುಹಾಕಿ ಉತ್ತಮ ಶಿಕ್ಷಣವನ್ನು ಹೊಂದುವ ಮೂಲಕ ತಮ್ಮ ಗುರಿ ಸಾಧನೆಯತ್ತ ಗಮನ ನೀಡುವುದರ ಜತೆಯಲ್ಲಿ ಊರಿನ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು. ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಎಸ್.ದೊಡ್ಡಗೌಡರ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎನ್ನುವ ಉದ್ದೇಶದಿಂದ ಸರ್ಕಾರ ನೀಡಿರುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ತಾಪಂ ಸದಸ್ಯ ತಿಮ್ಮರೆಡ್ಡಿ ಅಳವಂಡಿ, ಮುಖ್ಯೋಪಾಧ್ಯಾಯ ಎಚ್.ಬಿ. ರಡ್ಡೇರ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಾಪಂ ಅಧ್ಯಕ್ಷೆ ಸುನಂದಮ್ಮ ಬಿದರಳ್ಳಿ, ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಲಮಾಣಿ, ಉಪಾಧ್ಯಕ್ಷ ಶೇಖಪ್ಪ ಕನಕಣ್ಣವರ, ತಾಪಂ ಸದಸ್ಯೆ ಪಾರ್ವತೆವ್ವ ಗಾಣಿಗೇರ, ರಾಮಣ್ಣ ರಗಟಿ, ಫಕ್ಕಿರೇಶ ಕವಲೂರ, ಬಸಪ್ಪ ಗಾಣಿಗೇರ, ದೇವಪ್ಪ ಮೂಕಿ, ಜಿ.ಎಸ್. ರಾಮಶೆಟ್ಟರ, ಗಿರೀಶ ಕೋಡಬಾಳ, ವೈ.ಎನ್. ತೆವರಿ, ರಾಘವೇಂದ್ರ ತಿಮ್ಮರಡ್ಡೇರ, ಭರತರಾಜ ಗುಡಗೇರಿ, ಶೇಖಪ್ಪ ಸಾಸಲವಾಡ, ನಾಗಪ್ಪ ಮೂಕಿ, ಷಣ್ಮುಖಪ್ಪ ಮುದಕಣ್ಣವರ, ಫಕ್ಕೀರಪ್ಪ ಹಾವೇರಿ ಹಾಗೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯ ಅಭಿಯಂತರ ಗುರುಲಿಂಗಯ್ಯ ಹಿರೇಮಠ ಹಾಜರಿದ್ದರು. ಸಂತೋಷ ಹುದ್ದಾರ ನಿರೂಪಿಸಿದರು. ಡಿ.ಎಂ. ದ್ಯಾಮಣ್ಣನವರ ವಂದಿಸಿದರು.