ಪಡಿತರ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ರೋಣ, ಅ. 17
ಪಡಿತರ ಆಹಾರ ಧಾನ್ಯ ವಿತರಣೆಯಲ್ಲಾಗುತ್ತಿರುವ ತಾರತಮ್ಯ ಸರಿಪಡಿಸದಿದ್ದರೆ ತಹಸೀಲ್ದಾರ್ ಕಚೇರಿ ಎದುರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಾಲೂಕಿನ ಹಿರೇಹಾಳ ಗ್ರಾಮದ ಜನತೆ ರೈತ ಸಂಘದ ನೇತೃತ್ವದಲ್ಲಿ ಗುರವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲೋಕನಗೌಡ ಗೌಡರ ಮಾತನಾಡಿ, ಕಳೆದ ಒಂದು ವರ್ಷದಿಂದ ಹಿರೇಹಾಳ ಗ್ರಾಮದಲ್ಲಿ 300ಕ್ಕೂ ಹೆಚ್ಚು ಅರ್ಹ ಪಲನಾಭವಿಗಳು ಪಡಿತರ ಚೀಟಿ ಹೊಂದಿದ್ದರೂ ಆಹಾರ ಧಾನ್ಯದಿಂದ ವಂಚಿತರಾಗಿದ್ದಾರೆ. ನ್ಯಾಯಕ್ಕಾಗಿ ಈ ಹಿಂದೆ ಅನೇಕ ಬಾರಿ ರಸ್ತೆ ತಡೆ, ಚಳವಳಿ, ಗ್ರಾಪಂ ಮತ್ತು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುತ್ತಾ ಬರಲಾಗಿದೆ. ಆದರೂ ತಾಲೂಕು ಆಡಳಿತ ಮಾತ್ರ ಅವ್ಯವಸ್ಥೆಯನ್ನು ಸರಿಪಡಿಸುವ ಗೋಜಿಗೆ ಹೋಗದೆ ನ್ಯಾಯಬೆಲೆ ಅಂಗಡಿಯ ಶಂಕರಗೌಡ ಗೌಡರ ಎಂಬುವರಿಗೆ ಬೆಂಬಲ ಸೂಚಿಸುತ್ತಾರೆಯೇ ಹೊರತು, ಬಡವರಿಗಾಗುತ್ತಿರುವ ಅನ್ಯಾಯಕ್ಕೆ ಕಿವಿಗೊಡುತ್ತಿಲ್ಲ ಎಂದು ಆರೋಪಿಸಿದರು.
ಆತ್ಮಹತ್ಯೆಗೆ ನಿರ್ಧಾರ: ಪಡಿತರ ಚೀಟಿ ಹೊಂದಿದ್ದರೂ ನೀವು ಬಯೋವುಟ್ರಿಕ್ ನೀಡಿಲ್ಲ. ನಿಮ್ಮ ಕಾರ್ಡ್ ರದ್ದಾಗಿದೆ. ನೀವು ಪಡಿತರಕ್ಕೆ ಅರ್ಹರಲ್ಲ ಎಂದು ನ್ಯಾಯಬೆಲೆ ಅಂಗಡಿ ಮಾಲೀಕ ಶಂಕರಗೌಡ ಗೌಡರ ಎಂಬುವರು ನಿತ್ಯ ಬಡವರಿಗೆ ತೊಂದರೆ ಕೊಡುತ್ತಿದ್ದಾರೆ. ಹೀಗೆಕೆ ಎಂದು ಕೇಳಿದವರಿಗೆ ನೀವು ಪ್ರತಿಭಟನೆ ಮಾಡಿ ಆಹಾರ ಧಾನ್ಯ ಪಡೆದುಕೊಳ್ರೀ ಇಲ್ಲಿಗೇಕೆ ಬಂದಿದ್ದಿರೀ..ಬೇಕಿದ್ದರೆ ತಹಸೀಲ್ದಾರ್ರನ್ನೇ ಕೇಳ ಹೋಗಿ ಎಂದು ದಭಾಯಿಸಿ ಕಳುಹಿಸುತ್ತಾರೆ. ನಮ್ಮ ಕಾರ್ಡ್ ಸರಿಯಾಗಿವೆ. ಆಹಾರ ಧಾನ್ಯ ಕೊಡಿ ಎಂದು ಕಾರ್ಡ್ ತೋರಿಸಲು ಮುಂದಾದರೆ ಕಾರ್ಡ್ಗಳನ್ನು ಕಿತ್ತುಕೊಂಡು ರಸ್ತೆಗೆ ಎಸೆಯುತ್ತಾನೆ. ಇದರಿಂದ ನಮಗೆ ತೀವ್ರ ಬೇಸರವಾಗಿದೆ. ಸರ್ಕಾರ ಬಡವರಿಗಾಗಿ ಈ ಯೋಜನೆ ಜಾರಿಗೆ ತಂದಿದ್ದರೂ ಅದು ಸರಿಯಾಗಿ ತಲುಪುತ್ತಿಲ್ಲ. ಕಳೆದ ಆರು ತಿಂಗಳಿನಿಂದ ನ್ಯಾಯಕ್ಕಾಗಿ ಹೋರಾಡಿದರೂ ಯಾವುದೇ ಪ್ರಯೋಜನವಾಗದ್ದರಿಂದ ತಹಸೀಲ್ದಾರ್ ಕಚೇರಿ ಎದುರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದೇವೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲೋಕನಗೌಡ ಗೌಡರ, ವೀರೇಶ ಕಣವಿ, ಬಸವರಾಜ ಗುಡಿಮನಿ, ಈರವ್ವ ಶ್ಯಾನಬೋಗ, ಶಾಂತವ್ವ ಸೋಮನಕಟ್ಟಿ, ಈರಣ್ಣ ಸಿಮೇಕೇರಿ, ಯಲ್ಲ ಮಡಿವಾಳರ, ಯಮನಪ್ಪ ಮಡಿವಾಳರ, ಭಾರತೆವ್ವ ಹರನಶಿಕಾರಿ, ಚಂದವ್ವ ಹರನಶಿಕಾರಿ, ಗೌರಮ್ಮ ಹಡಗಲಿ, ಸಾವಂತ್ರವ್ವ ಹನುಮನಾಳ, ಗಿರಿಜವ್ವ ಹರನಶಿಕಾರಿ, ಸಂಗಪ್ಪ ಪೂಜಾರ, ಜುಲಪ್ಪ ಹರನಶಿಕಾರಿ, ಶಂಕ್ರಪ್ಪ ಹುಗಾರ, ಪರಶುರಾಮ ಕೂಗಲ್ ಮುಂತಾದವರು ಇದ್ದರು.
ಮಾತಿನ ಚಕಮಕಿ: ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ತಹಸೀಲ್ದಾರ್ ಎ.ಜಿ. ಪಂಡಿತ ಅವರ ಕಾರ್ಯಾಲಯಕ್ಕೆ ತೆರಳಿ ಮನವಿ ಸಲ್ಲಿಸಿದರು. ಅಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತಿನ ಚಕಮಕಿ ನಡೆಯಿತು. ಅರ್ಹರಿಗೆ ಕೂಡಲೇ ಪಡಿತರ ವಿತರಿಸಲು ಆದೇಶಿಸಲಾಗುವುದು ಎಂದು ಭರವಸೆ ನೀಡದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.