ಸಂಗೀತ ದಿವ್ಯ ಔಷಧಿ: ಕಸ್ತೂರಿ
ಕನ್ನಡಪ್ರಭ ವಾರ್ತೆ, ಗದಗ, ಅ. 17
ಸಂಗೀತ ಮನಸ್ಸಿನ ಮನದ ಆಳಕ್ಕಿಳಿದು ನೋವು ಸರಿಸಿ ನಲಿವು ಮೂಡಿಸುವ ದಿವ್ಯ ಔಷಧಿಯಾಗಿದೆ ಎಂದು ಗದಗ ಅಕ್ಕನ ಬಳಗದ ಅಧ್ಯಕ್ಷೆ ಕಸ್ತೂರಿ ಹಿರೇಗೌಡರ ಅಭಿಪ್ರಾಯಪಟ್ಟರು.
ಅವರು ಸ್ಥಳೀಯ ಅಕ್ಕನ ಬಳಗದಲ್ಲಿ ಶರನ್ನವರಾತ್ರಿ ಕಾರ್ಯಕ್ರಮದ ಅಂಗವಾಗಿ ಈಚೆಗೆ ಏರ್ಪಡಿಸಿದ್ದ ಸಂಗೀತ ಲಹರಿ ಹಾಗೂ ಫ್ಯಾಶನ್ ಶೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಗೀತಕ್ಕೆ ತನ್ನದೇಯಾದ ಶಕ್ತಿಯಿದೆ. ಯಾವುದೇ ರಂಗದಲ್ಲಿ ಹೋದರೂ ಅಲ್ಲಿ ಸಂಗೀತ ಹಾಸು ಹೊಕ್ಕಾಗಿರುವುದು ಕಂಡು ಬರುತ್ತದೆ. ಗಾಯಕರು ಭಾವ ತುಂಬಿ ರಾಗ ಹಾಡಿದಾಗ ಕೇಳುಗರು ತನ್ಮಯತೆಯಿಂದ ಆಲಿಸುವರು. ಪ್ರತಿಯೊಬ್ಬರೂ ಸಂಗೀತವನ್ನು ಕಲಿಯುವ ಮೂಲಕ ಕಲೆಯನ್ನು ಪ್ರೋತ್ಸಾಹಿಸುವ ಮನೋಭಾವನೆ ಹೊಂದುವಂತೆ ಕೋರಿದರು.
ಸಂಗೀತ ಲಹರಿ ಕಾರ್ಯಕ್ರಮ ನೀಡಿ ಮಾತನಾಡಿದ ಗಾಯಕಿ ಉಷಾ ಕಾರಂತ, ಆಲಿಸುವವರ ಭಾವನೆಗಳನ್ನು ಹಾಗೂ ಮನಸ್ಸನ್ನು ಕೇಂದ್ರೀಕರಿಸುವಂತಹ ಸಂಗೀತ ಜನರ ಮನಸ್ಸನ್ನು ತಟ್ಟಬಲ್ಲದು. ಕಾರಣ ಪ್ರತಿಯೊಬ್ಬರೂ ಸಂಗೀತ ಕಲಿತು, ಸಂಗೀತದ ತಲ್ಲೀನತೆ ಅರಿಯಬೇಕಾಗಿದೆ ಎಂದರು.
ಜಗದೀಶ ಹೂಗಾರ ಹಾಗೂ ಸುಭಾಶ ಓಂಕಾರ ಅವರ ಸಂಗೀತ ಕಾರ್ಯಕ್ರಮ ಜರುಗಿತು. ಅಕ್ಕನ ಬಳಗದ ಸರ್ವ ಸದಸ್ಯರು ಹಾಗೂ ಭಕ್ತಿ ಸೇವೆಗೈದ ಶಾರದಾ ಬೊಮ್ಮಸಾಗರ ಉಪಸ್ಥಿತರಿದ್ದರು. ಪ್ರಭಾ ಜುಕ್ತಿಮಠ ನಿರೂಪಿಸಿದರು. ಶಶಿರೇಖಾ ಶಿಗ್ಲಿಮಠ ವಂದಿಸಿದರು.