ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸುದ್ದಿ ಸಂಕ್ಷೇಪ

Mainashree
Updated On : 18 Oct 2013, 11:27 am

ಐಟಿಐ ಪರೀಕ್ಷೆ ಮುಂದಕ್ಕೆ
ಶಿಗ್ಗಾಂವಿ: ತಾಲೂಕಿನ ಗಂಜಿಗಟ್ಟಿಯ ಉದ್ಯೋಗ ಮತ್ತು ತರಬೇತಿ ಇಲಾಖೆಯಿಂದ ಅ. 23ರಂದು ನಡೆಯಬೇಕಾಗಿದ್ದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿನ ಎಸ್.ಸಿ.ವಿ.ಟಿ. ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪರೀಕ್ಷೆಯನ್ನು ಪುನರ್ ನಿಗದಿಗೊಳಿಸಿ ಪರಿಷ್ಕೃತ ವೇಳಾಪಟ್ಟಿ ಶೀಘ್ರದಲ್ಲೇ ಬರಲಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಐಟಿಐ ಕಾಲೇಜಿನ ಎಸ್.ಎಚ್. ಗೌಡರ ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ವಿವಾಹಿತೆ ಕಾಣೆ: ದೂರು
ಹಿರೇಕೆರೂರು: ತಾಲೂಕಿನ ಹೊಸ ನಿಡನೇಗಿಲು ಗ್ರಾಮದ ವಿವಾಹಿತ ಮಹಿಳೆ ಉಮಾ ಪರಮೇಶಪ್ಪ ವಡ್ಡರ (35) ನಾಪತ್ತೆಯಾಗಿರುವ ಬಗ್ಗೆ ಆಕೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾನೆ. ಫೆ. 10ರಂದು ಸಂಜೆ 5ರ ಸುಮಾರಿಗೆ ಮಾಸೂರಿನ ಆಸ್ಪತ್ರೆಗೆ ಹೋಗಿಬರುವುದಾಗಿ ತಿಳಿಸಿದ್ದ ಈಕೆ ಆಮೇಲೆ ಮನೆಗೆ ವಾಪಸ್ ಬಂದಿಲ್ಲ. ಈಕೆ ದುಂಡುಮುಖ, ಗೋದಿಗೆಂಪು ಬಣ್ಣ ಹೊಂದಿದ್ದು, ಐದು ಅಡಿ ಎತ್ತರವಿದ್ದಾಳೆ. ಕಾಣೆಯಾದ ದಿನ ತಿಳಿ ನೀಲಿ ಬಣ್ಣದ ಹೂವುಗಳಿರುವ ಸೀರೆ, ತಿಳಿ ಹಸಿರು ಬಣ್ಣದ ರವಿಕೆ ಧರಿಸಿದ್ದಳು. ಕನ್ನಡ ಮತ್ತು ತೆಲುಗು (ವಡ್ಡರ) ಮಾತನಾಡಬಲ್ಲಳು. ಸುಳಿವು ಸಿಕ್ಕಲ್ಲಿ ಎಸ್ಪಿ, ದೂ. 08375-232800, ಹಿರೇಕೆರೂರು ಠಾಣೆ ದೂ. 08376-282333ಗೆ ತಿಳಿಸುವಂತೆ ಪಿಎಸ್‌ಐ ಜಿ.ಟಿ. ಶ್ರೀಶೈಲಮೂರ್ತಿ ತಿಳಿಸಿದ್ದಾರೆ.
24ರಂದು ಹಾವೇರಿ ಜಿಪಂ ಉಪಾಧ್ಯಕ್ಷರ ಆಯ್ಕೆ
ಹಾವೇರಿ: ಹಾವೇರಿ ಜಿಲ್ಲಾ ಪಂಚಾಯತಿಯ ಎರಡನೇ ಅವಧಿಗೆ ಉಪಾಧ್ಯಕ್ಷರ ಆಯ್ಕೆ ಅ. 24ರಂದು ಮಧ್ಯಾಹ್ನ 1 ಗಂಟೆಗೆ ಜಿಪಂನ ನೂತನ ಸಭಾಂಗಣದಲ್ಲಿ ಜರುಗಲಿದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯದ ಅಧಿಸೂಚನೆ ಅನ್ವಯ ಜಿಪಂ ಉಪಾಧ್ಯಕ್ಷರ ಹುದ್ದೆ ಸಾಮಾನ್ಯ (ಮಹಿಳೆ) ಅಭ್ಯರ್ಥಿಗೆ ಮೀಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
26ರಂದು ಕೆಡಿಪಿ ಸಭೆ
ಹಾವೇರಿ: ಅ. 21ರಂದು ಜಿಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಅಧ್ಯಕ್ಷತೆಯಲ್ಲಿ ಜರುಗಬೇಕಿದ್ದ ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಅ. 26ರಂದು ಬೆಳಗ್ಗೆ 11 ಗಂಟೆಗೆ  ನಡೆಯಲಿದೆ ಎಂದು ಜಿಪಂ ಸಿಇಒ ಉಮೇಶ ಕುಸುಗಲ್ಲ ತಿಳಿಸಿದ್ದಾರೆ.
ಹೆಸರು ನೋಂದಾಯಿಸಿ
ಹಾವೇರಿ: ಪಶ್ಚಿಮ ಪದವೀಧರ ಮತಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಒಬ್ಬ ಸದಸ್ಯರ ಆಯ್ಕೆಗೆ 2014ರಲ್ಲಿ ಚುನಾವಣೆ ನಡೆಯಲಿದೆ. ಮತಕ್ಷೇತ್ರ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆ ಒಳಗೊಂಡಿದೆ. ಅರ್ಹ ಪದವೀಧರರು ತಮ್ಮ ಹೆಸರು ಸೇರಿಸಲು ನಮೂನೆ 18ರಲ್ಲಿ ಅರ್ಜಿ ಸಲ್ಲಿಸಬೇಕು. ಆಕ್ಷೇಪಣೆಗಳನ್ನು ಅ. 30ರೊಳಗಾಗಿ ತಹಸೀಲ್ದಾರ್ ಕಚೇರಿಯಲ್ಲಿರುವ ಸಹಾಯಕ ಮತದಾರರ ನೋಂದಣಿ ಅಧಿಕಾರಿಗೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಪಲ್ಲಕ್ಕಿಯೊಂದಿಗೆ ಕೆಂಡ ಹಾಯುವ ಕಾರ್ಯಕ್ರಮ
ಶಿಗ್ಗಾಂವಿ: ಅಂಬೇಡ್ಕರ್ ಓಣಿಯಲ್ಲಿರುವ ದುರ್ಗಾದೇವಿ ದೇವಸ್ಥಾನದಲ್ಲಿ ದಸರಾ ಹಬ್ಬದ ಮರುದಿನ ದೇವಿಗೆ ಪೂಜೆ ಸಲ್ಲಿಸಿ ಕೆಂಡ ಹಾಯುವ ಕಾರ್ಯಕ್ರಮ ನಡೆಯಿತು. ದುರಗಪ್ಪ ಪೂಜಾರ ಹಾಗೂ ಚಂದ್ರು ದುರಗಪ್ಪ ಪೂಜಾರ ದೇವಿಗೆ ಪೂಜೆ ಸಲ್ಲಿಸಿ, 20 ಅಡಿ ಸುತ್ತಳತೆಯ ಅಗ್ನಿ ಕುಂಡದಲ್ಲಿ ಸಾಗಿದರು. ದೇವಿ ಪಲ್ಲಕ್ಕಿ ಬಳಿ ಹೋಗಿ, ಮತ್ತೆ ಪಲ್ಲಕ್ಕಿಯೊಂದಿಗೆ ಅಗ್ನಿ ಹಾಯುವ ದೃಶ್ಯ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಬಳಿಕ ಪಲ್ಲಕ್ಕಿ ಮೆರವಣಿಗೆ ಗ್ರಾಮದಲ್ಲಿ ಸಂಚರಿಸಿತು. ಜನರು ಸಂಭ್ರಮದಿಂದ ಬನ್ನಿ ಮುಡಿಯುತ್ತ, ಮನೆ ಮುಂದೆ ಬಂದ ಪಲ್ಲಕ್ಕಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರು. ದೊಡ್ಡ ಪಕ್ಕೀರಪ್ಪ ಪೂಜಾರ, ಕರಿಯಪ್ಪ ಕಟ್ಟಿಮನಿ, ಶಿದ್ದಪ್ಪ ಪೂಜಾರ, ಗದಿಗೆಪ್ಪ ಕೊಡ್ಲವಾಡ, ಹರ ಗ್ರಾಮಾಬಿವೃದ್ಧಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಮಣ್ಣಣ್ಣವರ, ತಾಪಂ ಉಪಾಧ್ಯಕ್ಷ ನಿಂಗಪ್ಪ ಪುಟ್ಟಪ್ಪ ಹರಿಜನ, ತಿಪ್ಪಣ್ಣ ಸಾತಣ್ಣವರ, ಗುತ್ತಿಗೆದಾರ ಅರ್ಜುನ ಹಂಚಿನಮನಿ, ಜಟ್ಟಪ್ಪಾ ಪೂಜಾರ, ಹನಮಂತಪ್ಪ ಕಟ್ಟಿಮನಿ, ಶಿವಪ್ಪ ಪೂಜಾರ, ಸಂತೋಷ ಕಟ್ಟಿಮನಿ, ಪರಶುರಾಮ ಕಟ್ಟಿಮನಿ, ಪ್ರವೀಣ ಕಟ್ಟಿಮನಿ, ಸುಭಾಸ ಕಾಳೆ, ಶಿವಾಜಿ ಕಟ್ಟಿಮನಿ ಇದ್ದರು.
20ರಂದು ಆಧ್ಯಾತ್ಮಿಕ ರಸಗವಳ
ಶಿಗ್ಗಾಂವಿ: ವ್ಯಕ್ತಿ ವಿಕಾಸ, ವ್ಯಕ್ತಿತ್ವ ನಿರ್ಮಾಣದ ಮೂಲಕ ಲೋಕೋದ್ಧಾರಕ್ಕಾಗಿ 27 ವರ್ಷಗಳಿಂದ ಸಕ್ರಿಯವಾಗಿರುವ ಡಿವೈನ್ ಪಾರ್ಕ್‌ನ ವಿವೇಕ ಜಾಗೃತ ಬಳಗದಿಂದ ವಿರಕ್ತಮಠದ ಮಂಗಲ ಭವನದಲ್ಲಿ ಅ. 20ರಂದು ವಿಶಿಷ್ಟ ಆಧ್ಯಾತ್ಮಿಕ ರಸಗವಳ ಕಾರ್ಯಕ್ರಮ ನಡೆಯಲಿದೆ. ಗುರೂಜಿ ಡಾ೤ ಎ. ಚಂದ್ರಶೇಖರ ಉಡುಪ ಸಾನ್ನಿಧ್ಯ ವಹಿಸುವರು ಎಂದು ನಿರ್ದೇಶಕ ಕೆ.ಜಿ. ಕರಿಶಿದ್ದಪ್ಪ ಹೇಳಿದರು. ನ್ಯಾಯವಾದಿ ಎಸ್.ಕೆ. ಅಕ್ಕಿ, ಬಳಗದ ಕಾರ್ಯಾಧ್ಯಕ್ಷೆ ಭಾರತಿ ಛಬ್ಬಿ, ವರ್ಧಮಾನ ಛಬ್ಬಿ, ಅಧ್ಯಕ್ಷ ರಾಜಣ್ಣ ಗಾಣಿಗೇರ, ಉಮೇಶ ಪಿ. ಹಿರೇಮಠ ಇದ್ದರು.

ಗಾಳಿ ವಿದ್ಯುತ್ ಉತ್ಪಾದನಾ ಯಂತ್ರಗಳು ಅಕ್ರಮ ಎನ್ನುವುದು ಹಿಂದಿನ ಜಿಲ್ಲಾಧಿಕಾರಿಗಳು ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗಗೊಂಡು ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಯಾವ ಕಂಪನಿಗಳೂ ಉತ್ತರಿಸಿಲ್ಲ. ಅದರೆ ಜಿಲ್ಲಾಡಳಿತ ಮಾತ್ರ ಇನ್ನೂ ಕ್ರಮಕ್ಕೆ ಮುಂದಾಗದೇ ಇರುವುದು ಹಲವು ಸಂಶಯಕ್ಕೆ ಕಾರಣವಾಗಿದೆ. ಇನ್ನಾದರೂ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳದೇ ಇದ್ದಲ್ಲಿ ರೈತ ಸಂಘದ ನೇತೃತ್ವದಲ್ಲಿ ಹೋರಾಟ ರೂಪಿಸಲಾಗುವುದು.
- ಕೆ.ಜಿ. ಶಾಂತಸ್ವಾಮಿಮಠ
ರೈತ ಸಂಘದ ರಾಜ್ಯ ಉಪಾಧ್ಯಕ್ಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement