ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ
ಕನ್ನಡಪ್ರಭ ವಾರ್ತೆ, ಗದಗ, ಅ. 18
2010-11ನೇ ಸಾಲಿನ ವಾಜಪೇಯಿ ನಗರ ಆಶ್ರಯ ಯೋಜನೆಯ ಅಡಿಯಲ್ಲಿ ಆಯ್ಕೆಯಾಗಿರುವ 600 ಮೂಲ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿ ಈಚೆಗೆ ಜಯಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಗದಗ ತಾಲೂಕು ಅಧ್ಯಕ್ಷ ಸುರೇಶ ಮೇದಾರ ಮಾತನಾಡಿ, 2010-11ನೇ ಸಾಲಿನ ವಾಜಪೇಯಿ ನಗರ ಆಶ್ರಯ ಯೋಜನೆಯ ಅಡಿ 600 ಮೂಲ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಸಿದ್ಧಗೊಳಿಸಿದ್ದು, ನಂತರದ ದಿನದಲ್ಲಿ ಗದಗ-ಬೆಟಗೇರಿಯ ನಗರಸಭೆಯ ಕೆಲ ಅಧಿಕಾರಿಗಳು ಈ ಹಿಂದೆ ಮಂಜೂರಾದ ಫಲಾನುಭವಿಗಳ ಯಾದಿಯನ್ನು ಬದಲಾವಣೆ ಮಾಡುತ್ತಿದ್ದು, ಈ ಕುರಿತಾಗಿ ಕೇಳಿದರೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಲಾಗುತ್ತಿದೆ. ಇದರಿಂದಾಗಿ ಮುಗ್ಧ ಜನರಿಗೆ ಮೋಸವಾಗುತ್ತಿದೆ.
ಈ ಕುರಿತಾಗಿ ನಿವೇಶನಕ್ಕೆ ಅರ್ಜಿ ಸಲ್ಲಿಸಿದ ಮತ್ತು ಈ ಹಿಂದೆ ಯಾದಿಯನ್ನು ಪೂರ್ಣಗೊಳಿಸಿ ಅಂತಿಮಗೊಳಿಸಿದ ಯಾದಿಯನ್ನು ಪರಿಶೀಲಿಸಿ ಹಿಂದೆ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಆಶ್ರಯ ಮನೆಗಳನ್ನು ಮಂಜೂರು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಈ ಯೋಜನೆಯಲ್ಲಿ ಮುಗ್ಧ ಜನರಿಗೆ ವಂಚನೆ ನಡೆಸಲು ಹುನ್ನಾರ ನಡೆಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಬಡವರಿಗೆ, ನಿರ್ಗತಿಕರಿಗೆ ಸೂಕ್ತ ನ್ಯಾಯ ದೊರಕಿಸಿ ಕೊಡುವಲ್ಲಿ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಮೈಲಾರಪ್ಪ ಕೊಟೆಪ್ಪನವರ, ಕಾರ್ಯದರ್ಶಿ ಜೋಸಫ್ ಉದೋಜಿ, ರಂಗಪ್ಪ ಯರಗುಡಿ, ಶಿವು, ಚಿದಾನಂದ ಬಳಗಾನೂರ, ಕಿಟ್ಟು ಜಾಧವ, ನಾಗರಾಜ ಕುರಗೋಡ, ಶರಣಪ್ಪ ಕರಡಿ, ಶಿವು ಗಾಳಪ್ಪನವರ, ಹನುಮಂತಪ್ಪ ಶಾಂತಗಿರಿ, ಸತ್ಯಪ್ಪ ಹೊಂಬಳ, ಮಂಜುನಾಥ ಶಾಂತಗಿರಿ, ಚಂದ್ರಕಾಂತ ವರ್ಣೇಕರ, ಶ್ರೀನಿವಾಸ ಭಂಡಾರಿ, ಅರವಿಂದ ಹುಲ್ಲೂರ ಮುಂತಾದವರು ಉಪಸ್ಥಿತರಿದ್ದರು.