ಮಳೆಯೂ ಇಲ್ಲ, ಕಾಲುವೆಗೆ ನೀರು ಬಂದಿಲ್ಲ
ಕನ್ನಡಪ್ರಭ ವಾರ್ತೆ, ನರಗುಂದ, ಅ. 18
ತಾಲೂಕಿನ ರೈತರಿಗೆ ಎರಡು ವರ್ಷಗಳಿಂದ ಅದ್ಯಾವ ಶಾಪ ಕಾಡುತ್ತಿದೆಯೋ ಗೊತ್ತಿಲ್ಲ. ರೈತರು ಮಾತ್ರ ಒಂದಿಲ್ಲೊಂದು ಸಮಸ್ಯೆ ಎದುರಿಸುವುದು ತಪ್ಪುತ್ತಿಲ್ಲ.
ರೈತರು ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನ ಪ್ರಾರಂಭದಲ್ಲಿ ಉತ್ತಮ ಮಳೆಯಾಗಿದ್ದು, ಅದನ್ನು ಆಧರಿಸಿ ಬಿತ್ತನೆ ಮಾಡಿದ್ದಾರೆ. ಆದರೆ, ಒಂದೆಡೆ ಮಳೆಯೂ ಆಗುತ್ತಿಲ್ಲ, ಇನ್ನೊಂದೆಡೆ ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ ಕಾಲುವೆ ನೀರೂ ಸಿಗುತ್ತಿಲ್ಲ. ಇದು ತಾಲೂಕಿನ ರೈತ ಸಮುದಾಯವನ್ನು ಕಂಗಾಲಾಗಿಸಿದೆ.
ಜಿಲ್ಲೆಯಲ್ಲಿ ಮಲಪ್ರಭಾ ಕಾಲುವೆ ನೀರಾವರಿಯನ್ನು ಹೊಂದಿರುವ ಏಕೈಕ ತಾಲೂಕು ಎನ್ನುವ ಹೆಗ್ಗಳಿಕೆ ಹೊಂದಿರುವ ನರಗುಂದ ತಾಲೂಕಿನ ರೈತರಿಗೆ ಈ ಹೆಗ್ಗಳಿಕೆ ಬಿಟ್ಟು ಏನೂ ಸಿಗುತ್ತಿಲ್ಲ. ಕಾಲುವೆಗಳ ಸಮರ್ಪಕ ನಿರ್ವಹಣೆ ಇಲ್ಲದೇ ಇರುವುದರಿಂದ ತಾಲೂಕಿನ ಹಿರೇಕೊಪ್ಪ, ಹುಣಸೀಕಟ್ಟಿ, ಕುರ್ಲಗೇರಿ, ಬನಹಟ್ಟಿ, ಸುರಕೋಡ, ಮದುಗುಣಕಿ, ಭೈರನಹಟ್ಟಿ, ಹದಲಿ, ಗಂಗಾಪುರ, ಖಾನಾಪುರ, ರಡ್ಡೇರನಾಗನೂರ, ಕುರಗೋವಿನಕೊಪ್ಪ, ಕೊಣ್ಣೂರು ಗ್ರಾಮಗಳು ಹೆಸರಿಗೆ ಮಾತ್ರ ಕಾಲುವೆ ನೀರಾವರಿ ಹೊಂದಿದ ಪ್ರದೇಶವಾಗಿದ್ದು, ಹಲವಾರು ವರ್ಷಗಳಿಂದ ಈ ಗ್ರಾಮಗಳ ರೈತರ ಹೊಲಗಳಿಗೆ ಕಾಲುವೆ ನೀರು ಸಿಗುತ್ತಿಲ್ಲ.
ರೈತರ ಹೊಲಗಳು ಕಾಲುವೆಯ ಕೊನೆಯ ಭಾಗದಲ್ಲಿರುವುದರಿಂದ ರೈತರಿಗೆ ಇದರ ಲಾಭ ತಟ್ಟುತ್ತಿಲ್ಲ.
ಕೈಕೊಟ್ಟ ಮಳೆ: ಇನ್ನು ಕಾಲುವೆ ನೀರು ಬರದೇ ಇದ್ದರೂ ತೊಂದರೆ ಇಲ್ಲ. ಸರಿಯಾದ ಸಮಯಕ್ಕೆ ಮಳೆಯಾದರೂ ಸಾಕು ಎಂದು ರೈತರು ಆಕಾಶದತ್ತ ದೃಷ್ಟಿ ನೆಟ್ಟಿದ್ದು, ಮಳೆರಾಯ ಮಾತ್ರ ಮತ್ತೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾನೆ. ತಾಲೂಕಿನ ಕೆಲವು ಗ್ರಾಮಗಳಿಗೆ ಮಳೆಯಾದರೂ ಇನ್ನುಳಿದ ಹಲವಾರು ಗ್ರಾಮಗಳ ರೈತರು ಹಿಂಗಾರಿ ಬಿತ್ತನೆ ಮಾಡಿ ಮಳೆಗಾಗಿ ಕಾಯುತ್ತಿದ್ದಾರೆ. ಅದರಲ್ಲಿಯೂ ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಗೋವಿನಜೋಳ ಬಿತ್ತನೆ ಮಾಡಿದ ರೈತರು ತೇವಾಂಶದ ಕೊರತೆಯಿಂದ ಬೆಳೆ ಒಣಗುತ್ತಿರುವುದರಿಂದ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.
ಸಮರ್ಪಕ ನಿರ್ವಹಣೆ ಮಾಡಿ: ಮಲಪ್ರಭಾ ಕಾಲುವೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿಯುತ್ತಿದ್ದರೂ ಕಾಲುವೆ ಕೊನೆ ಭಾಗದಲ್ಲಿರುವ ರೈತರಿಗೆ ನೀರು ಸಿಗುತ್ತಿಲ್ಲ. ಕಾಲುವೆಗಳ ಪ್ರಾರಂಭದಲ್ಲಿಯೇ ಜಮೀನುಗಳನ್ನು ಹೊಂದಿರುವ ರೈತರು ಅಗತ್ಯಕ್ಕಿಂತ ಹೆಚ್ಚಿನ ನೀರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೆಲ ರೈತರ ಹೊಲಗಳಿಗೆ ಕಾಲುವೆ ನೀರು ಲಭ್ಯವಾಗದೇ ಇರುವುದರಿಂದ ಅವರೆಲ್ಲಾ ಅನಧಿಕೃತವಾಗಿ ಕಾಲುವೆಗಳಿಗೆ ಪಂಪ್ಸೆಟ್ಗಳನ್ನು ಅಳವಡಿಸಿ ಆ ಮೂಲಕ ನೀರೆತ್ತುತ್ತಿದ್ದು, ಇದರಿಂದಾಗಿ ಸರ್ಕಾರಕ್ಕೆ ನೀರಿನ ಕರ ಕಟ್ಟಿದ ರೈತರಿಗೂ ಕಾಲುವೆ ನೀರು ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ನೀರಾವರಿ ನಿಗಮದ ಅಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಂಡು ಕಾಲುವೆ ನೀರು ಹರಿಸುವ ಕುರಿತು ಸಮರ್ಪಕ ನಿರ್ವಹಣೆ ಮಾಡಬೇಕಿದೆ.
ಕಾಲುವೆ ನೀರು ಹರಿಸುವ ಕುರಿತಂತೆ ಉತ್ತರ ಕರ್ನಾಟಕ ಭಾಗದವರಾದ ನೀರಾವರಿ ಸಚಿವ ಎಂ.ಬಿ. ಪಾಟೀಲರಿಗೆ ಮನವಿ ಮಾಡಲಾಗಿದ್ದು, ಕಾಲುವೆ ನೀರು ನಿರ್ವಹಣೆಯನ್ನು ಮರಳಿ ನೀರಾವರಿ ನಿಗಮಕ್ಕೆ ನೀಡಬೇಕು. ಖಾಸಗಿಯವರಿಗೆ ಗುತ್ತಿಗೆ ನೀಡುವುದನ್ನು ತಕ್ಷಣ ರದ್ದುಗೊಳಿಸಬೇಕು ಎಂದು ವಿನಂತಿ ಮಾಡಲಾಗಿದೆ. ಸಚಿವರು ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೋ ಕಾದು ನೋಡಿ, ನಂತರ ಹೋರಾಟದ ರೂಪುರೇಷೆ ಸಿದ್ಧಗೊಳಿಸಲಾಗುವುದು.
ವಿಜಯ ಕುಲಕರ್ಣಿಕಳಸಾ-ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ
ತಾಲೂಕಿನ ಹಲವೆಡೆ ಸಮರ್ಪಕವಾಗಿ ಮಳೆಯಾಗಿಲ್ಲ. ಕಾಲುವೆ ನೀರನ್ನಾದರೂ ಪಡೆದುಕೊಳ್ಳಬೇಕು ಎಂದರೆ ಅವುಗಳ ಸರಿಯಾದ ನಿರ್ವಹಣೆ ಇಲ್ಲ. ನಿತ್ಯ ನೂರಾರು ಕ್ಯುಸೆಕ್ ನೀರು ಬಳಕೆಯಾಗದೇ ಬೆಣ್ಣಿಹಳ್ಳದ ಮೂಲಕ ಹರಿದು ಹೋಗುತ್ತಿದೆ. ನೀರಾವರಿ ನಿಗಮ ಅಧಿಕಾರಿಗಳಾಗಲಿ, ಕಾಲುವೆ ನೀರು ಪೂರೈಕೆ ಮಾಡಲು ಗುತ್ತಿಗೆ ಪಡೆದಿರುವ ಗುತ್ತಿಗೆದಾರರಾಗಲಿ ಕೂಡಲೇ ಗಮನಹರಿಸಿ ರೈತರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಬೇಕು.
ಸಹದೇವ ಸಾಬಳೆ, ಮಾರುತಿ ದೊಡ್ಡಮನಿ, ಬಸವರಾಜ ಪೂಜಾರ, ಅಲ್ಲಿಸಾಬ ನದಾಫ್ (ವಿವಿಧ ಗ್ರಾಮಗಳ ರೈತರು)
ಎಸ್.ಜಿ. ತೆಗ್ಗಿನಮನಿ