ರಾಮಾಯಣ ಬದುಕಿಗೆ ಮಾರ್ಗದರ್ಶಿ
ಕನ್ನಡಪ್ರಭ ವಾರ್ತೆ, ಗದಗ, ಅ. 18
ರಾಮಾಯಣ ಗ್ರಂಥವು ಮನುಷ್ಯನ ನಿತ್ಯ ಬದುಕಿನ ಮಾರ್ಗದರ್ಶಕವಾಗಿ ಕಾರ್ಯ ನಿರ್ವಹಿಸುವಲ್ಲಿ ಸಹಕಾರಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಇಲ್ಲಿಯ ನಗರಸಭೆ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಗದಗ-ಬೆಟಗೇರಿ ಹಾಗೂ ಜಿಲ್ಲೆಯ ವಿವಿಧ ವಾಲ್ಮೀಕಿ ನಾಯಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಬದುಕು ಹಾಗೂ ಸಮಾಜ ಹೇಗಿರಬೇಕು ಎಂಬುದನ್ನು ನಮಗೆ ರಾಮಾಯಣ ತಿಳಿಸಿಕೊಡುತ್ತದೆ. ರಾಮಾಯಣದ ಓದಿನಿಂದ ನಮ್ಮಲ್ಲಿನ ಸಾಕ್ಷಿ ಪ್ರಜ್ಞೆ ಜಾಗ್ರತವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ರಾಮಾಯಣದಲ್ಲಿನ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾಮರಾಜ್ಯ ನಿರ್ಮಾಣದ ಕನಸನ್ನು ಕಂಡ ಕಾಂಗ್ರೆಸ್ ನೇತೃತ್ವದ ಸರ್ಕಾರ ಪರಿಶಿಷ್ಟ ಜಾತಿ, ಜನಾಂಗದ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ವಸತಿ ನಿಲಯದಲ್ಲಿ ಅಧ್ಯಯನ ಮಾಡಲು ಪರಿಶಿಷ್ಟ ಜಾತಿಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವಸತಿ ನಿಲಯ ಸೌಲಭ್ಯ ದೊರೆಯದಿದ್ದಲ್ಲಿ ಅಂತಹ ವಿದ್ಯಾರ್ಥಿಗಳ ಅಧ್ಯಯನದ ಅನುಕೂಲಕ್ಕಾಗಿ ಮಾಸಿಕ ರು. 1500 ಹಣಕಾಸಿನ ನೆರವು ನೀಡುವ ಮಹತ್ವಾಕಾಂಕ್ಷಿಯ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.
ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ 6 ಲಕ್ಷ ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿದೆ. ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ 1ಲಕ್ಷ 25 ಸಾವಿರ ಶೌಚಾಲಯಗಳ ಕಾಮಗಾರಿ ಪೂರ್ಣಗೊಳಿಸುವ ಹಂತದಲ್ಲಿದೆ. ಜಿಲ್ಲೆಗೆ ಸಂಬಂಧಿಸಿದಂತೆ ಮೆಟ್ರಿಕ್ ಪೂರ್ವ ಹಾಗೂ ನಂತರದ ಪರಿಶಿಷ್ಟ ಜಾತಿಯ ವಿದ್ಯಾರ್ಥಿ ವಸತಿ ನಿಲಯವನ್ನು ಶೀಘ್ರದಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ವಾಲ್ಮೀಕಿ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ 25 ಗುಂಟೆ ಜಮೀನು ನಿಗದಿಪಡಿಸಲಾಗಿದ್ದು, ರು. 1 ಕೋಟಿ ಜಿಲ್ಲಾಡಳಿತದಲ್ಲಿದೆ. ಬಿಡುಗಡೆಯಾದ ಹಣ ಸಾಕಾಗದಿದ್ದರೆ ಇನ್ನು ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಲು ಪ್ರಯತ್ನಿಸುವುದಾಗಿ ತಿಳಿಸಿದರು. ಬದಾಮಿ ವೀರ ಪುಲಿಕೇಶಿ ಪಪೂ ಕಾಲೇಜಿನ ಉಪನ್ಯಾಸಕಿ ಡಾ. ಪಾರ್ವತಿ ಲೆಂಕಣ್ಣವರ ಉಪನ್ಯಾಸ ನೀಡಿ, ಭಾರತ ಸಂಸ್ಕೃತಿ ಮೇಲೆ ಪರಿಣಾಮ ಬೀರಿದ ವಾಲ್ಮೀಕಿ ರಚಿಸಿದ ರಾಮಾಯಣ ಮನುಕುಲದ ವಿಕಾಸಕ್ಕೆ ಕಾರಣವಾದ ಕೃತಿಯಾಗಿದೆ. ನೆಲದ ಮೊದಲ ಕಾವ್ಯವಾದ ರಾಮಾಯಣ ಇಂದಿಗೂ ನಮ್ಮೆಲ್ಲರ ಮಧ್ಯ ಇದ್ದು, ಬೆಳಗುತ್ತಿರುವ ಕಾವ್ಯವಾಗಿದೆ. ಅವರು ಅನುಷ್ಕ ಛಂದಸ್ಸಿನಲ್ಲಿ ರಚಿಸಿದ ಕೃತಿಯಿಂದಾಗಿ ಇಂದಿಗೂ ಸಂಸ್ಕೃತ ಪಂಡಿತರು ವಾಲ್ಮೀಕಿಗೆ ಋಣಿಯಾಗಿದ್ದಾರೆ. ವಿದೇಶದಲ್ಲಿಯೂ ಕೂಡ ರಾಮಾಯಣಕ್ಕೆ ಬೆಲೆಯಿದೆ ಎಂದರು. ಕೆಪಿಸಿಸಿ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯಾಧ್ಯಕ್ಷ ಟಿ.ಈಶ್ವರ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಮನೋಜಕುಮಾರ ಪೂಜಾರ, ಹರ್ಷಕುಮಾರ ಚಿಕ್ಕನರಗುಂದ, ವನಶ್ರೀ ಹುಲ್ಲಣ್ಣವರ, ಬಿ.ಪಿ. ಅಡ್ನೂರ, ಡಿ.ಕೆ. ಮಾದನವರ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪರಿಶಿಷ್ಟ ಪಂಗಡದವರಿಗೆ ಇರುವ ಸರ್ಕಾರದ ಸೌಲಭ್ಯಗಳ ಕರಪತ್ರವನ್ನು ಸಚಿವ ಎಚ್.ಕೆ. ಪಾಟೀಲ ಬಿಡುಗಡೆಗೊಳಿಸಿದರು. ಕಾರ್ಯಕ್ರಮ ಪೂರ್ವದಲ್ಲಿ ನಗರದ ಪ್ರಮುಖ ಬೀದಿಯಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ಜರುಗಿತು. ಮಾಜಿ ಶಾಸಕ ಡಿ.ಆರ್. ಪಾಟೀಲ, ತಾಪಂ ಅಧ್ಯಕ್ಷ ಹನಮಪ್ಪ ಇಂಗಳಳ್ಳಿ, ಉಪಾಧ್ಯಕ್ಷೆ ಪ್ರತಿಭಾ ಸಿದ್ಧರಾಮಣ್ಣವರ, ನಗರಸಭೆ ಸದಸ್ಯೆ ಜ್ಯೋತಿ ಈರಾಳ, ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಸಿಇಓ ವೀರಣ್ಣ ತುರಮುರಿ, ಎಸ್ಪಿ ಡಾ. ಎಸ್.ಡಿ. ಶರಣಪ್ಪ, ರಾಮಣ್ಣ ಫಲದೊಡ್ಡಿ ಉಪಸ್ಥಿತರಿದ್ದರು. ಖಾಜಾಹುಸೇನ ಮುಧೋಳ ಸ್ವಾಗತಿಸಿದರು.