ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸುದ್ದಿ ಸಂಕ್ಷೇಪ

Mainashree
Updated On : 19 Oct 2013, 11:17 am

ಇಂದು ಸಮಾರಂಭ
ಗದಗ: ಡಿಜಿಎಂ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ವಾರ್ಷಿಕ ಸ್ನೇಹಸಮ್ಮೇಳನ ಹಾಗೂ ದೀಕ್ಷಾಂತ ಸಮಾರೋಹ ಸಮಾರಂಭವು ಅ. 19ರ ಬೆಳಗ್ಗೆ 10.30ಕ್ಕೆ ನಗರದ ಶಿವಾನಂದ ಕಲ್ಯಾಣ ಮಂಟಪದಲ್ಲಿ ಜರುಗಲಿದೆ. ಅಭಿನವ ಶಿವಾನಂದ ಶ್ರೀಗಳು ಸಾನ್ನಿಧ್ಯ ವಹಿಸುವರು. ದೀಕ್ಷಾಂತ ಭಾಷಣಕಾರರಾಗಿ ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಕುಲಸಚಿವ ಡಾ. ಡಿ. ಪ್ರೇಮಕುಮಾರ ಆಗಮಿಸುವರು. ಇಂಚಲದ ಎಸ್.ಎಸ್.ಆರ್. ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾ.ಡಾ. ವಿನಯ ಮೋಹನ ಪ್ರಮಾಣ ವಚನ ಬೋಧಿಸಲಿದ್ದಾರೆ. ಸಂಸ್ಥೆಯ ಚೇರ್‌ಮನ್ ಎಸ್.ಬಿ. ಸಂಶಿ, ಪ್ರಾಚಾರ್ಯ ಡಾ. ಜಿ.ಬಿ. ಪಾಟೀಲ ಉಪಸ್ಥಿತರಿರುವರು.  
ಬೈಕ್ ಸ್ಕಿಡ್: ಸವಾರ ಸಾವು
ಗದಗ:  ವೇಗವಾಗಿ ಚಲಿಸುತ್ತಿದ್ದ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಹಾತಲಗೇರಿ-ಲಕ್ಕುಂಡಿ ರಸ್ತೆಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಮೃತನನ್ನು ಜಿಲ್ಲೆಯ ಹಳ್ಳಿಕೇರಿ ಗ್ರಾಮದ ಕಲ್ಲಯ್ಯ ವಿರೂಪಾಕ್ಷಯ್ಯ ಹಿರೇಮಠ (35) ಎಂದು ಗುರುತಿಸಲಾಗಿದೆ. ಗದಗನಿಂದ ಹಳ್ಳಿಕೇರಿಗೆ ಹಾತಲಗೇರಿ ಮಾರ್ಗದ ಮೂಲಕ ತೆರಳುವಾಗ ಈ ಘಟನೆ ಸಂಭವಿಸಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ: ಓರ್ವ ಸಾವು
ಗದಗ: ಅತಿ ಜೋರಾಗಿ ಬಂದ ವಾಹನವೊಂದು ರಸ್ತೆಯ ಬದಿಯಲ್ಲಿ ಸೈಕಲ್ ಚಲಾಯಿಸುತ್ತಿದ್ದ ವ್ಯಕ್ತಿಯೋರ್ವನಿಗೆ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸಾವನ್ನಪ್ಪಿರುವ ಘಟನೆ ಗುರುವಾರ ರಾತ್ರಿ ತಾಲೂಕಿನ ಹುಲಕೋಟಿ ಗ್ರಾಮದ ಈಚಲ ಹಳ್ಳದ ಬಳಿ ಸಂಭವಿಸಿದೆ. ಮೃತನನ್ನು ಸ್ಥಳೀಯ ನಿವಾಸಿ ಯಮನಪ್ಪ ಭಜಂತ್ರಿ (50) ಎಂದು ಗುರುತಿಸಲಾಗಿದೆ. ಹುಲಕೋಟಿ ಮಿಲ್‌ದಿಂದ ಹುಲಕೋಟಿ ಕಡೆಗೆ ಸೈಕಲ್ ಮೇಲೆ ಹೊರಟಾಗ ವಾಹನವೊಂದು ಡಿಕ್ಕಿ ಹೊಡೆದು ಹೋಗಿದೆ ಎನ್ನಲಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ ಆಟಗಾರನ ಬಂಧನ
ಗದಗ: ಬೆಟಗೇರಿಯ ಹೆಲ್ತ್ ಕ್ಯಾಂಪ್ ಬಳಿ ಮಟ್ಕಾ ನಂಬರ್ ಜೂಜಾಟವಾಡುತ್ತಿದ್ದಾಗ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿ, ರು. 6,500 ವಶಪಡಿಸಿಕೊಂಡಿದ್ದಾರೆ. ಬಾಬಾಸಾಬ್ ಗಿರೋಸಾಬ್ ಬದಿ ಬಂಧಿತ ಆರೋಪಿಯಾಗಿದ್ದು, ಬೆಟಗೇರಿ ಸಿಪಿಐ ಆರ್.ಎಸ್. ಬೆಂತೂರ ನೇತೃತ್ವದಲ್ಲಿ ದಾಳಿ ನಡೆದಿದೆ. ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ ಬುಕ್ಕಿ: ಬಂಧನ
ಗದಗ: ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಹಿರೇಬಜಾರದಲ್ಲಿರುವ ವಿರೂಪಾಕ್ಷ ದೇವರ ದೇವಸ್ಥಾನದ ಬಳಿ ಮಟ್ಕಾ ನಂಬರ್ ಬರೆದುಕೊಳ್ಳುತ್ತಿದ್ದ ಇಬ್ಬರು ಮಟ್ಕಾ ಬುಕ್ಕಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗಜೇಂದ್ರಗಡ ಪಟ್ಟಣದ ಬಾಬು ಯಮನಾಜಿ ಮಾಂಡ್ರೆ ಹಾಗೂ ಜೀಗೇರಿ ಗ್ರಾಮದ ದುರಗಪ್ಪ ಗ್ಯಾಣಪ್ಪ ಕಟ್ಟಿಮನಿ ಬಂಧಿತ ಆರೋಪಿಗಳು. ಬಂಧಿತರಿಂದ ರು. 2,520 ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement