ಗ್ರಾಮಾಭಿವೃದ್ಧಿಗೆ ಪಣತೊಟ್ಟ ನೀರೆಯರು
ಲಕ್ಷ್ಮೇಶ್ವರ: ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲರು. ಹೌದು, ಸಮೀಪದ ನಾಗರಮಡುವು ಎಂಬ ಚಿಕ್ಕ ಗ್ರಾಮ ಈಗ ಮಹಿಳಾ ಮಣಿಗಳ ಒಗ್ಗಟ್ಟಿನಿಂದ ಸುಧಾರಣೆಯತ್ತ ಮುಖ ಮಾಡಿದ್ದು, ಗ್ರಾಮದ ಮಹಿಳೆಯರ ಹೋರಾಟ ಮನೋಭಾವನೆ ರಾಜಕಾರಣಿಗಳನ್ನು ನಾಚಿಸುವಂತಿದೆ.
ಲಕ್ಷ್ಮೇಶ್ವರ ಕೋಗನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಮಡುವು ಗ್ರಾಮದ ಮಹಿಳಾ ಸ್ವ-ಸಹಾಯ ಗುಂಪುಗಳ ಸುಮಾರು 125 ಮಹಿಳೆಯರು ಸೇರಿಕೊಂಡು ಮಹಿಳಾ ಸಮ್ಯಖ್ ಸಂಘವನ್ನು ಸ್ಥಾಪಿಸಿಕೊಂಡು ಗ್ರಾಮ ಪಂಚಾಯಿತಿಯ ನರೇಗಾ ಯೋಜನೆಯ ಹಾಗೂ ನಿರ್ಮಲ ಭಾರತ ಅಭಿಯಾನ ಯೋಜನೆ ಸಹಾಯದೊಂದಿಗೆ ಗ್ರಾಮಕ್ಕೆ ಮೂಲ ಸೌಕರ್ಯ, ಅಭಿವೃದ್ಧಿಗಾಗಿ ಶ್ರಮಿಸಲು ಟೊಂಕಕಟ್ಟಿ ನಿಂತಿದ್ದಾರೆ.
ಕಳೆದ ಹಲವು ವರ್ಷಗಳಿಂದ ಗ್ರಾಮದಲ್ಲಿ ಸರಿಯಾಗಿ ಸಂಚರಿಸಲು ರಸ್ತೆಗಳು ಇರಲಿಲ್ಲ. ಏಕೆಂದರೆ ಗ್ರಾಮದ ಹಲವರು ರಸ್ತೆ ಮಧ್ಯದಲ್ಲಿ ಮನೆಗಳನ್ನು ಕಟ್ಟಿ ವಾಸಮಾಡುತ್ತಿದ್ದರು. ಅಲ್ಲದೆ ತಮಗೆ ಹೇಗೆ ಬೇಕೋ ಹಾಗೆ ಅಡ್ಡಾದಿಡ್ಡಿಯಾಗಿ ಮನೆಗಳನ್ನು ಕಟ್ಟಿಕೊಂಡಿದ್ದರು. ಇದರಿಂದ ಗ್ರಾಮದಲ್ಲಿ ಎತ್ತು, ಚಕ್ಕಡಿಗಳು ಹಾಗೂ ಸಣ್ಣ ಪುಟ್ಟ ವಾಹನಗಳು ಸಂಚರಿಸುವುದು ದುಸ್ತರವಾಗಿತ್ತು. ಅಲ್ಲದೆ ಊರಿನಲ್ಲಿ ಯಾವುದೇ ಚರಂಡಿಗಳು ಇರಲಿಲ್ಲ. ಇದರಿಂದ ಕೊಳಚೆ ನೀರು ನಿಂತು ಹಲವು ರೋಗಕ್ಕೆ ದಾರಿಯಾಗಿತ್ತು. ಯಾವುದೇ ಮನೆಯಲ್ಲಿ ಶೌಚಾಲಯವು ಇರಲಿಲ್ಲ. ಇದರಿಂದ ಮಹಿಳೆಯರು ತುಂಬಾ ತೊಂದರೆ ಪಡುತ್ತಿದ್ದರು. ಆದರೆ ಇದೆಲ್ಲಾ ಈಗ ಈ ಮಹಿಳೆಯರ ಪ್ರಯತ್ನ, ಶ್ರಮದಿಂದಲೇ ಕೊನೆಗೊಂಡಿದೆ.
ಇದೊಂದು ಚಿಕ್ಕ ಗ್ರಾಮ: ಸುಮಾರು 180 ಮನೆಗಳನ್ನು ಹೊಂದಿರುವ ಈ ಚಿಕ್ಕ ಗ್ರಾಮದಲ್ಲಿ ರಸ್ತೆ ಸೇರಿದಂತೆ ಸಾರ್ವಜನಿಕರ ಕೆಲಸಗಳಿಗೆ ತೊಡಕಾಗಿದ್ದ ಕೆಲ ಕಟ್ಟಡಗಳನ್ನು ಒಂದು ತಿಂಗಳಿನಲ್ಲಿ ಸುಮಾರು 26 ಮನೆಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಈ ಮಹಿಳೆಯರು ಒಗ್ಗಟ್ಟಿನಿಂದ ಹೋರಾಡಿದ್ದಾರೆ. ಗ್ರಾಮದಲ್ಲಿನ ರಸ್ತೆ ಸುಧಾರಣೆಗೆ ಹಾಗೂ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲು ಈ ಮಹಿಳೆಯರು ಮುಂದಾಗಿದ್ದು ಶ್ಲಾಘನೀಯ. ಅದಕ್ಕಾಗಿ ನರೇಗಾ ಯೋಜನೆಯಲ್ಲಿ ಎಲ್ಲ ಮನೆಗಳಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಾಣ ಮಾಡಬೇಕೆನ್ನುವ ಗುರಿ ಹೊಂದಿದ್ದಾರೆ. ಗ್ರಾಮವನ್ನು ಬಯಲು ಶೌಚಾಲಯ ಮುಕ್ತ ಗ್ರಾಮವನ್ನಾಗಿ ಮಾಡಲು ಗ್ರಾಮದ ಹೊರಗಿನ ಮುಳ್ಳು ಕಂಟಿಗಳನ್ನು ಸ್ವಚ್ಛ ಮಾಡಿದ್ದೇವೆ ಎನ್ನುತ್ತಾರೆ ಗ್ರಾಪಂ ಮಾಜಿ ಅಧ್ಯಕ್ಷೆ ಮಲ್ಲಮ್ಮ ಆನೆಪ್ಪನವರ, ವಿಜಯಲಕ್ಷ್ಮಿ ಬಳಗಾನೂರಮಠ
ನರೇಗಾ ಲಾಭ: ಕೇಂದ್ರ ಸರ್ಕಾರದ ನರೇಗಾ ಯೋಜನೆಯ ಲಾಭ ಪಡೆದು ದೇಶದ ಎಲ್ಲ ಗ್ರಾಮಗಳು ಅಮೂಲಾಗ್ರ ಬದಲಾವಣೆ ಹೊಂದಲು ಸಾಧ್ಯವಿದೆ. ಆದರೆ ಎಲ್ಲ ಗ್ರಾಮಗಳೂ ಇದರ ಉಪಯೋಗ ಪಡೆಯುತ್ತಿಲ್ಲ. ಗ್ರಾಮಗಳು ಸುಧಾರಣೆಯಾದರೆ ದೇಶವು ಸುಧಾರಣೆಯಾದಂತೆ ಎನ್ನುವ ಗಾಂಧೀಜಿಯವರ ಕನಸ್ಸು ನನಸಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನುವುದನ್ನು ಅರಿತು ಈ ಮಹಿಳೆಯರು ಉತ್ತಮ ಕಾರ್ಯಕ್ಕೆ ಮುಂದಾಗಿರುವುದು ಜಿಲ್ಲೆಗೆ ಮಾತ್ರವಲ್ಲ, ರಾಜ್ಯಕ್ಕೆ ಮಾದರಿಯಾಗಿದೆ.
ಅಶೋಕ ಸೊರಟೂರ