ಧರ್ಮಾಧಿಕಾರಿ ದೂಷಣೆ ಸರಿಯಲ್ಲ
ಗದಗ: ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ನಡೆಯಿತೆನ್ನಲಾದ ವಿದ್ಯಾರ್ಥಿನಿ ಸೌಜನ್ಯಾ ಕೊಲೆ ಪ್ರಕರಣದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿಗಳನ್ನು ದೂಷಿಸುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಕೂಡಲೇ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ದಿಗಂಬರ ಜೈನ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ 45 ವರ್ಷಗಳಿಂದ ಕಾಯಾ, ವಾಚಾ, ಮನಸಾ, ಧಾರ್ಮಿಕ, ಶೈಕ್ಷಣಿಕ ಸಾಮಾಜಿಕ ಸೇವೆಯನ್ನು ಮಾಡುತ್ತ ನಿಸ್ವಾರ್ಥ ಜನ ಸೇವಕರಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿ ಮತ್ತು ಕ್ಷೇತ್ರದ ಕುರಿತು ಸೌಜನ್ಯಾಳ ಕೊಲೆ ಪ್ರಕರಣದಲ್ಲಿ ಸಿಲುಕಿಸಿ, ನಿಂದನೆ ಮಾಡುತ್ತಿರುವುದು ದೇಶದ ನಾಡಿನ ಭಕ್ತ ಜನಕ್ಕೆ ಆಘಾತವನ್ನುಂಟು ಮಾಡಿದೆ.
ಸೌಜನ್ಯಾಳ ಕೊಲೆ ಪ್ರಕರಣವನ್ನು ಸರ್ಕಾರವು ತೀವ್ರ ರೀತಿಯಲ್ಲಿ ತನಿಖೆ ನಡೆಸಬೇಕು. ನಿಜವಾದ ಅಪರಾಧಿಗಳನ್ನು ಪತ್ತೆ ಹಚ್ಚಿ ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಅದಕ್ಕೆ ಸರ್ಕಾರವು ಹಲವು ಬಗೆಯಿಂದ ತನಿಖಾ ಕಾರ್ಯವನ್ನು ತೀವ್ರಗೊಳಿಸಿ ನಿಜವಾದ ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಬೇಕು. ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಅಂಟಿರುವ ಕಳಂಕವನ್ನು ಕಳೆದು ಅವರಿಂದ ಯಾವುದೇ ತಪ್ಪಾಗಿಲ್ಲ ಎನ್ನುವುದನ್ನು ಸಮಾಜಕ್ಕೆ ತಿಳಿಸಬೇಕಿದೆ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ದಿಗಂಬರ ಜೈನ ಸಂಘ ಅಧ್ಯಕ್ಷ ಬಿ.ಎಸ್. ನಾವಳ್ಳಿ, ಕೆ.ಎನ್. ಮಲ್ಲಾಡದ, ಪಿ.ಸಿ. ಮುತ್ತಿನ, ನಾಗರಾಜ ತುಕೋಳ, ಶೀತಲ ದೇಸಾಯಿ, ಜೆ.ಪಿ. ಪುಟ್ಟಣ್ಣನವರ, ಪಾರ್ಶ್ವನಾಥ ಕಬ್ಬಿಣ, ಬಾಹುಬಲಿ ತುಕೋಳ, ವೈ.ಬಿ. ಹೊಸೂರ, ರಾಜಣ್ಣ ರೋಖಡೆ, ಭಾರತಿ ಮುತ್ತಿನ ಉಪಸ್ಥಿತರಿದ್ದರು.