ಮಹಿಳೆಯರು ಆರ್ಥಿಕ ಸಬಲರಾಗಿ
ಕನ್ನಡಪ್ರಭ ವಾರ್ತೆ, ಗದಗ, ಅ. 19
ಮಹಿಳೆಯರು ಸ್ವಾವಲಂಬಿಗಳಾಗಿ ದುಡಿದರೆ ಮಾತ್ರ ಆರ್ಥಿಕ ಸಬಲತೆ ಹೊಂದಲು ಸಾಧ್ಯ ಎಂದು ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ನ ವ್ಯವಸ್ಥಾಪಕ ರಾಮಚಂದ್ರ ಗುಡಿ ಹೇಳಿದರು.
ಅವರು ಸ್ಥಳೀಯ ಪಂಚಾಕ್ಷರಿ ನಗರದಲ್ಲಿ ಗುರುವಾರ ಮಹಿಳಾ ಜಂಟಿ ಹೊಣೆಗಾರಿಕೆ ಗುಂಪುಗಳ (ಜೆಎಲ್ಸಿ) ಮಹಿಳಾ ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಬ್ಯಾಂಕ್ ಹಣಕಾಸಿನ ನೆರವು ಹಾಗೂ ಸೌಲಭ್ಯಗಳ ಬಗ್ಗೆ ನಮ್ಮ ಸಿಬ್ಬಂದಿ ಮಾಹಿತಿ ನೀಡುತ್ತಾರೆ ಎಂದರು. ಇದೇ ಸಂದರ್ಭದಲ್ಲಿ 2 ಮಹಿಳಾ ಒಕ್ಕೂಟಗಳು ಕ್ರೋಡೀಕರಿಸಿದ ಒಟ್ಟು ಹಣದಿಂದ ಬಂದ ಲಾಭದಲ್ಲಿ ಅರ್ಹ ಫಲಾನುಭವಿಗಳಿಗೆ ಒಕ್ಕೂಟದ ಪದಾಧಿಕಾರಿಗಳ ಹಾಗೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಖಜಾಂಚಿಗಳ ಸಮ್ಮುಖದಲ್ಲಿ ಸಾಲವನ್ನು ಕೊಡಲಾಯಿತು.
ನಗರಸಭೆಯ ಮಾಜಿ ಅಧ್ಯಕ್ಷೆ ಜಯಶ್ರೀ ಉಗಲಾಟದ ಹಾಗೂ ನಗರಸಭೆಯ ಸದಸ್ಯೆ ಅಕ್ಕಿ ಪ್ರಾಸ್ತಾವಿಕವಾಗಿ ಮಾತಾಡಿದರು. ಉಪನ್ಯಾಸಕ ಸತೀಶ ಪಾಸಿ, ಮಲ್ಲಿಕಾರ್ಜುನ ಐಲಿ, ಪ್ರಕಾಶ ಉಗಲಾಟದ, ಪ್ರೇಮಕ್ಕ ಕಡೇಮನಿ, ಲೀಲಾವತಿ ಉಗಲಾಟದ, ರೇಣುಕಾ ಬೆಳವಟಗಿ, ಅನಸೂಯಾ ಹಿರೇಮಠ, ಸರಸ್ವತಿ ಹೂಗಾರ, ಗಂಗಮ್ಮ ನೆರ್ತಿ, ಅನ್ನಪೂರ್ಣ ಲಕ್ಕುಂಡಿ, ಸುವರ್ಣಾ ಪಾಟೀಲ, ಅಂದಮ್ಮ ಹೊಟ್ಟಿನ ಮುಂತಾದವರು ಉಪಸ್ಥಿತರಿದ್ದರು. ಶಿವಲೀಲಾ ಕಿರೇಸೂರ ಸ್ವಾಗತಿಸಿದರು. ಪ್ರೇಮಾ ಕಡೇಮನಿ ವಂದಿಸಿದರು.