ಹೆಗ್ಗಡೆ ಮೇಲೆ ಆರೋಪ ಸಲ್ಲದು
ಗದಗ: ಸೌಜನ್ಯಾ ಹತ್ಯೆ ಪ್ರಕರಣದ ಕುರಿತು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೇಲೆ ಕೆಲ ಕಿಡಿಗೇಡಿಗಳು ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಇದು ಅತ್ಯಂತ ಖಂಡನೀಯವಾಗಿದ್ದು, ವೀರೇಂದ್ರ ಹೆಗ್ಗಡೆಯವರಿಗೆ ಅಗೌರವ ತರಲು ಇಂತಹ ಹುನ್ನಾರ ನಡೆಸಲಾಗುತ್ತಿದೆ ಎಂದು ಜ. ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ವಿವಿಧ ಸಮಾಜದ ಮುಖಂಡರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಕ್ಷಾಂತರ ಭಕ್ತರನ್ನು ಹೊಂದಿದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ವೀರೇಂದ್ರ ಹೆಗ್ಗಡೆ ಜನರ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಜಾತಿ, ಮತ, ಪಂಥವೆನ್ನದೇ ಎಲ್ಲ ಸಮಾಜದ ಜನರ ನಂಬಿಕೆಗೆ ಪಾತ್ರರಾಗಿ ಸರ್ಕಾರವೂ ಕೈಗೊಳ್ಳದಂತಹ ಹೊಸ ಹೊಸ ಯೋಜನೆಗಳನ್ನು ರೂಪಿಸಿ ರಾಜ್ಯದಲ್ಲಿಯೇ ಇತರರಿಗೆ ಮಾದರಿಯಾಗುವಂತಹ ಕಾರ್ಯಗಳನ್ನು ಕೈಗೊಳ್ಳುತ್ತಾ ಜನರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯ.
ರೂಡಸೆಟ್, ಮೈಕ್ರೋಫೈನಾನ್ಸ್ ಹಾಗೂ ಹಲವು ಶಿಕ್ಷಣ ಸಂಸ್ಥೆಗಳನ್ನು ತೆರೆದು ಎಷ್ಟೋ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ, ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯನ್ನು ತೆರೆದು ರಾಜ್ಯಾದ್ಯಂತ ವಿಸ್ತರಿಸಿ ಹಲವು ಬಡಕುಟುಂಬಗಳ ಜೀವನಾಧಾರಕ್ಕೆ ಕಾರಣಕರ್ತರಾಗುವ ಮೂಲಕ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಧರ್ಮಸ್ಥಳದ ಕೀರ್ತಿ ಬೆಳೆಸುವಲ್ಲಿ ಕಾರಣಿಕರ್ತರಾದ ವೀರೇಂದ್ರ ಹೆಗ್ಗಡೆ ಮೇಲೆ ಕೆಲವು ಕಿಡಿಗೇಡಿಗಳು ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಅವರ ಘನತೆಗೆ ಧಕ್ಕೆತರುವ ಪ್ರಯತ್ನ ಮಾಡುತ್ತಿದ್ದು, ಇಂತಹ ಸುಳ್ಳು ಆರೋಪಗಳಿಗೆ ಸಾರ್ವಜನಿಕರು ಕಿವಿಕೊಡಬಾರದು ಎಂದರು.
ಸೌಜನ್ಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೂ ವೀರೇಂದ್ರ ಹೆಗ್ಗಡೆ ಸಹಕಾರ ನೀಡುವುದಾಗಿ ತಿಳಿಸಿದ್ದು, ರಾಜ್ಯ ಸರ್ಕಾರ ಹತ್ಯೆಗೆ ಕಾರಣರಾದ ಆರೋಪಿ ಪತ್ತೆ ಮಾಡಿ ಸುಳ್ಳು ಆರೋಪಗಳಿಗೆ ತೆರೆ ಎಳೆಯಲಿ ಎಂದರು.
ಈಶ್ವರಸಾ ಮೇರವಾಡೆ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಫಕೀರಪ್ಪ ಹೆಬಸೂರ, ಜಯದೇವ ಭಟ್, ಬಾಲಚಂದ್ರ ಭರಮಗೌಡ್ರ, ಅಶೋಕ ಜೈನ್, ಸುಧಾಕರ, ನಾಗಪ್ಪ ಕುರಿ, ಬೂದಪ್ಪನವರ, ಮುರಗೇಶ ಬಡ್ನಿ, ಜಂಬುಸಾ ಹಬೀಬ, ರಾಮಣ್ಣ ಗುಜಮಾಗಡಿ, ದತ್ತಪ್ರಸನ್ನ ಪಾಟೀಲ, ಕೊಟ್ರೇಶ ಮೆಣಸಿನಕಾಯಿ ಉಪಸ್ಥಿತರಿದ್ದರು.