ಇದ್ದೂ ಇಲ್ಲದಂತಾದ ಬಸ್ ಶೆಲ್ಟರ್
ನರೇಗಲ್ಲ: ಪಟ್ಟಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಾಣವಾಗಿರುವ ಸಣ್ಣ ಬಸ್ ಶೆಲ್ಟರ್ ಹಲವು ದಿನಗಳಿಂದ ಉಪಯೋಗಕ್ಕೆ ಬಾರದೇ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ.
ಈ ಬಗ್ಗೆ ಗಮನ ನೀಡಬೇಕಾದ ಪಟ್ಟಣ ಪಂಚಾಯಿತಿ ಹಾಗೂ ಸಾರಿಗೆ ಸಂಸ್ಥೆ ನಿರ್ಲಕ್ಷ್ಯ ಮಾಡಿದ್ದು, ಇದರಿಂದ ಹತ್ತಾರು ಸಮಸ್ಯೆ ಸೃಷ್ಟಿಯಾಗುತ್ತಿವೆ. ಸ್ಥಳೀಯ ಪೊಲೀಸ್ ಠಾಣೆಯಿಂದ ಕೂಗಳತೆ ದೂರದಲ್ಲಿರುವ ಈ ಶೆಲ್ಟರ್ ಕಡೆ ತಿರುಗಿ ನೋಡಿದರೆ ಸಾಕು, ಅಸಹ್ಯ ಹುಟ್ಟಿಸುವಂತಹ ವಾತಾವರಣ ನಿರ್ಮಾಣವಾಗಿದೆ. ಶೆಲ್ಟರ್ ಮುಂಭಾಗದಲ್ಲಿ ಮುಳ್ಳು ಕಂಟಿಗಳು ಬೆಳೆದಿದ್ದು, ಅಸ್ವಚ್ಛತೆ ತಾಂಡವವಾಡುತ್ತಿದೆ. ಶೆಲ್ಟರ್ ಸ್ವಚ್ಛಗೊಳಿಸಿ (ಕಸ ಹೊಡೆದು) ಅದೆಷ್ಟೋ ವರ್ಷಗಳೇ ಗತಿಸಿವೆ. ಇದರಿಂದ ಆವರಣವೆಲ್ಲಾ ಕಸದಿಂದ ತುಂಬಿ ಹೋಗಿದೆ. ಪ್ರಯಾಣಿಕರು ಕುಳಿತುಕೊಳ್ಳಲು ತೆರಳಿದರೆ ದುರ್ನಾತ ಅವರನ್ನು ಸ್ವಾಗತಿಸುತ್ತದೆ. ಈ ಶೆಲ್ಟರ್ ನಿರ್ಮಾಣವಾಗಿದ್ದು ಸಾರ್ವಜನಿಕರು ಬಸ್‌ಗೆ ತೆರಳುವ ವೇಳೆಯಲ್ಲಿ ವಿಶ್ರಾಂತಿ ಪಡೆಯುವುದಕ್ಕಾಗಿ, ಆದರೆ ಇಂದು ಅನಾಥರು, ವಯಸ್ಸಾದವರು, ನಿರ್ಗತಿಕರು, ಹುಚ್ಚರು, ಅರೆ ಪ್ರಜ್ಞಾವಸ್ಥೆಯಲ್ಲಿರುವವರು, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ವಾಸಿಸುವ ತಾಣವಾದಂತಾಗಿದೆ.
ದುರಾವಸ್ಥೆಯಲ್ಲಿ ಕಟ್ಟಡ: ಶೆಲ್ಟರ್ ಸದ್ಯ ಬೀಳುವ ಹಂತದಲ್ಲಿದೆ. ಹೀಗಾಗಿ ಸಾರ್ವಜನಿಕರು ಇದರತ್ತ ಸುಳಿಯುತ್ತಿಲ್ಲ. ಆವರಣದಲ್ಲಿ ಮದ್ಯದ ಪ್ಯಾಕೇಟ್, ಗುಟ್ಕಾ ಚೀಟು, ತಂಬಾಕು ಚೀಟಿ ಇತರೆ ಕಸಕಡ್ಡಿ ಯಥೇಚ್ಛವಾಗಿ ಬಿದ್ದಿವೆ. ಅಲ್ಲದೆ ಎಲ್ಲೆಂದರಲ್ಲಿ ತಿಂದು ಉಗಿಳಿರುವ ಕಲೆಗಳು ರಾಚುತ್ತವೆ. ಇನ್ನು ಕೆಲವು ಪುಂಡರು ಇಲ್ಲಿ ವಿವಿಧ ಅಕ್ರಮ ಚಟುವಟಿಕೆ ನಡೆಸುವುದು ಸಾಮಾನ್ಯವಾಗಿದ್ದು, ಇದಕ್ಕೆಲ್ಲಾ ಕಡಿವಾಣ ಹಾಕಬೇಕಾದವರು ಮಾತ್ರ ತೆಪ್ಪಗೆ ಕುಳುತಿದ್ದಾರೆ.
ಬಸ್ ಶೆಲ್ಟರ್‌ಗಳು ಸಾಮಾನ್ಯವಾಗಿ ಬಸ್‌ಗಳು ಬರುವ ದಾರಿಗೆ ಎದುರಾಗಿ ನಿರ್ಮಿಸಬೇಕು. ಆದರೆ, ನಾಗರಕೆರೆ ಪಕ್ಕದಲ್ಲಿ ನಿರ್ಮಿಸಿರುವ ಈ ಶೆಲ್ಟರ್ ಇದಕ್ಕೆ ವಿರುದ್ಧವಾಗಿದೆ. ಪ್ರಯಾಣಿಕರು ಶೆಲ್ಟರ್‌ನಲ್ಲಿ ಕೂತರೆ ಅಥವಾ ಈ ಕೊಳಚೆ ಮಧ್ಯೆ ಕೂಡಲು ಮನಸ್ಸು ಮಾಡಿದರೂ ಬಸ್‌ಗಳು ಬರುವ ಹಾಗೂ ಹೋಗುವ ದೃಶ್ಯ ಕಾಣುವದೇ ಇಲ್ಲ. ಇದರಿಂದಾಗಿ ಬಸ್ ಶೆಲ್ಟರ್‌ಗಳಲ್ಲಿ ಕೂಡಲು ಪ್ರಯಾಣಿಕರು ಮನಸ್ಸು ಮಾಡದೇ ರಸ್ತೆಯಲ್ಲೇ ನಿಂತು ಪ್ರಯಾಣ ಮಾಡುವ ಪ್ರಸಂಗ ಉದ್ಭವಿಸಿದೆ. ವಿದ್ಯುತ್ ಸಂಪರ್ಕವಂತೂ ಇಲ್ಲಿ ಮೊದಲೇ ಇಲ್ಲ. ಈ ಕಟ್ಟಡವನ್ನು ಸಂಬಂಧಿಸಿದ ಇಲಾಖೆಯವರು ನಿರ್ಮಾಣ ಮಾಡುವಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಿದ್ದಾರೋ ಅಥವಾ ಬಂದ ಅನುದಾನವನ್ನು ಬಳಕೆಮಾಡಬೇಕೆಂಬ ದೃಷ್ಟಿಕೋನದಿಂದ ನಿರ್ಮಿಸಿದ್ದಾರೋ ಎನ್ನುವುದು ಅವರಿಗೆ ಗೊತ್ತು.
ನಿಂಗರಾಜ ಬೇವಿನಕಟ್ಟಿ