ಎನ್ನೆಸ್ಸೆಸ್ನಿಂದ ಸಾಮಾಜಿಕ ಜವಾಬ್ದಾರಿ: ದಂಡಿನ
ಗಜೇಂದ್ರಗಡ: ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಶಿಸ್ತಿನ ಜತೆ ಗ್ರಾಮೀಣ ಪರಿಸರದ ಅರಿವಿನೊಂದಿಗೆ ಸಾಮಾಜಿಕ ಜವಾಬ್ದಾರಿ ಹೆಚ್ಚುವಲ್ಲಿ ಸಹಕಾರಿಯಾಗಿದೆ ಎಂದು ಕನಕದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿ ದಂಡಿನ ಹೇಳಿದರು.
ಅವರು ಸ್ಥಳೀಯ ಕೆ.ಎಸ್.ಎಸ್. ಕಾಲೇಜು ವತಿಯಿಂದ ಈಚೆಗೆ ದತ್ತು ಗ್ರಾಮ ಪುರ್ತಗೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಎನ್.ಎಸ್.ಎಸ್. ಶಿಬಿರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಪಠ್ಯದ ಜತೆಗೆ ಎನ್ಎಸ್ಎಸ್ ದಂತಹ ಇತರೆ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಅಂತರಂಗದ ವ್ಯಕ್ತಿತ್ವ ವಿಕಸನ ರೂಪುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಯುವಸಮೂಹ ಶಿಸ್ತು, ಸಂಯಮ ಪಾಲನೆಯಿಂದ ಅಧ್ಯಯನ ಮಾಡಿ ರಾಷ್ಟ್ರದ ಗೌರವ ಹೆಚ್ಚಿಸುವಲ್ಲಿ ಮುಂದಾಗಿ ಎಂದರು.
ತಾಪಂ ಅಧ್ಯಕ್ಷೆ ಲಲಿತಾ ಪೂಜಾರ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರ ಜತೆಗೆ ಸಾಮಾಜಿಕ ಚಿಂತನೆ ಅಳವಡಿಕೆ ಅವಶ್ಯ ಎಂದರು. ಪುರಸಭೆ ಸದಸ್ಯ ಶರಣಪ್ಪ ರೇವಡಿ, ಗ್ರಾಪಂ ಮಾಜಿ ಅಧ್ಯಕ್ಷ ಚನ್ನಬಸಪ್ಪ ಹಡಪದ, ಪ್ರಾಚಾರ್ಯ ಎಚ್.ಎನ್. ಗೌಡರ, ಎಂ.ಬಿ. ಅವಾರಿ, ಗಣಪತಿರಾವ ಮೋಹಿತೆ, ಎ.ಡಿ. ಘೋರ್ಪಡೆ, ಪರಸಪ್ಪ ಮುಶಿಗೇರಿ, ಯಮನೂರಪ್ಪ ಮುಶಿಗೇರಿ, ಸಿ.ಎ. ಯಲಿಗಾರ, ಎಸ್.ಎ. ಜಿಗಳೂರ, ಎಫ್.ಕೆ. ಹಿರೇಮಠ, ಆರ್.ಪಿ. ಹೋಳಿಗಿ, ಎಸ್.ಕೆ. ಕುಂಬಾರ, ಎಚ್.ಬಿ. ಮುಶಿಗೇರಿ ಮುಂತಾದವರು ಉಪಸ್ಥಿತರಿದ್ದರು. ಯು.ಎಸ್. ಮಲ್ಲಾಪುರ ಸ್ವಾಗತಿಸಿದರು. ಬಿ.ಕೆ. ಮಾದಿ ನಿರೂಪಿಸಿದರು. ಸುಭಾಸ ಅವದೂತ ವಂದಿಸಿದರು.