ಕಡತ ವಿಲೇವಾರಿಗೆ ಆಗ್ರಹಿಸಿ ಮನವಿ
ಕನ್ನಡಪ್ರಭ ವಾರ್ತೆ, ಗದಗ, ಅ. 20
ಗದಗ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಗೂ ಶಿಕ್ಷಕ ಶಿಕ್ಷಕೇತರ ಸಮಸ್ಯೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಸಿಬ್ಬಂದಿ ಸ್ಪಂದಿಸದ ಹಿನ್ನೆಲೆಯಲ್ಲಿ ಮಾಧ್ಯಮಿಕ ಶಾಲಾ ನೌಕರರ ಸಂಘದ ಪದಾಧಿಕಾರಿಗಳು ಈಚೆಗೆ ಸಾ.ಶಿ.ಇ. ಉಪನಿರ್ದೇಶಕ ರಾಜೀವ ನಾಯಕ್ ಅವರಿಗೆ ಮನವಿ ಸಲ್ಲಿಸಿ, ಶೀಘ್ರ ಕಡತ ವಿಲೇವಾರಿಗೆ ಗಡುವು ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಸಿಬ್ಬಂದಿ ಅನವಶ್ಯಕವಾಗಿ ಕಿರುಕುಳ ನೀಡುವ ಮೂಲಕ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಿಗೆ, ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗೆ ಗೌರವ ನೀಡದೇ ಸತಾಯಿಸುತ್ತಿದ್ದಾರೆ.
ಕಡತಗಳನ್ನು ವಿಲೇವಾರಿ ಮಾಡದೇ ವಿಳಂಬ ಮಾಡುವುದರ ಜತೆಗೆ ಸ್ಪಷ್ಟವಾದ ಮಾಹಿತಿಯನ್ನು ನೀಡುತ್ತಿಲ್ಲ. ಜತೆಗೆ ನ್ಯಾಯಾಲಯ, ಅದಾಲತ್ತುಗಳಲ್ಲಿ ನೀಡಿದ ನಿರ್ದೇಶನಗಳನ್ನು ಪಾಲಿಸದೇ ಇರುವ ಅಂಶಗಳನ್ನು ಮನವಿಯಲ್ಲಿ ತಿಳಿಸಿದ್ದಾರೆ. ಒಂದು ವಾರದಲ್ಲಿ ಪರಿಹರಿಸುವುದಾಗಿ ಉಪನಿರ್ದೇಶಕರು ಭರವಸೆ ನೀಡಿದ್ದರಿಂದ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ತಿಳಿಸಿದರು.
ಡಾ. ಬಸವರಾಜ ಧಾರವಾಡ, ಎಸ್.ಎಂ. ಕೊಟಗಿ, ಪಾಂಡಪ್ಪ ದಾಸರ, ಎಂ.ಎಸ್. ಚಿನ್ನೂರ, ಬಿ.ಕೆ. ಪಾಟೀಲ, ಎಸ್.ಎಂ. ಅಗಡಿ, ಎಸ್.ಎಂ. ನರಗುಂದಕರ, ಎಚ್.ವೈ. ಭಜಂತ್ರಿ, ಎಸ್.ಎಚ್. ಜೋಗಿನ, ಎಸ್.ಪಿ. ಗಿಂಡಿಮಠ, ಎಸ್.ವಿ. ಕುಸಗಲ್ಲ, ಎಸ್.ಎ. ಮರಿಗೌಡರ, ಎಸ್.ಎ. ಮುಂಡರಗಿ, ಎಸ್.ಬಿ. ಚಾಂದಖಾನ, ಎಂ.ಎಸ್. ಕಣವಿ, ಹೂಗಾರ, ಆರ್.ಎಂ. ಪಾಟೀಲ, ಎಸ್.ಬಿ. ಗೌಡರ, ಕೆ.ಬಿ.ನಿಂಬನಗೌಡರ, ಕೆ.ಬಿ. ಭಜಂತ್ರಿ, ಅರುಣ ಕುಲಕರ್ಣಿ, ಎ.ಬಿ. ಹೊನವಾಡ, ಕೆ.ಎ. ಹಮ್ಮಗಿ ಮುಂತಾದವರು ಹಾಜರಿದ್ದರು.