ಸಕಾಲಕ್ಕೆ ಸಾಲ ಮರುಪಾವತಿಸಿ
ಗದಗ: ಸಾರ್ವಜನಿಕರು ಬ್ಯಾಂಕ್ನಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರಳಿಸಿದಲ್ಲಿ ಇತರರಿಗೆ ಸಕಾಲದಲ್ಲಿ ಸಾಲ ನೀಡಲು ಸಹಕಾರಿಯಾಗಲಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹಾತಲಗೇರಿ ನಾಕಾ ಶಾಖೆ ವ್ಯವಸ್ಥಾಪಕ ಆರ್.ಕೆ. ಗುಡಿಯವರ ಹೇಳಿದರು.
ತಾಲೂಕಿನ ಸಂಭಾಪುರದಲ್ಲಿ ಇತ್ತೀಚಿಗೆ ರೈತರ, ರೈತಮಹಿಳೆಯರ ಹಾಗೂ ಕೂಲಿ ಕಾರ್ಮಿಕರಿಗಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹಾತಲಗೇರಿ ನಾಕಾ ಶಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತರು ಕೇವಲ ಹೊಲಗಳ ಮೇಲೆ ಬೆಳೆ ಸಾಲ ತೆಗೆದುಕೊಂಡು ಶ್ರೀಮಂತರಾಗಬಾರದು. ತೆಗೆದುಕೊಂಡ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದಾಗ ಮಾತ್ರ ನಮ್ಮ ಬ್ಯಾಂಕಿನ ವತಿಯಿಂದ ಹೆಚ್ಚಿನ ಸವಲತ್ತುಗಳನ್ನು ಕೊಡಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಮಹಿಳಾ ಗುಂಪುಗಳನ್ನು ಉದ್ಘಾಟನೆ ಮಾಡಿ ಮಹಿಳೆಯರು ಸಾಂಘಿಕವಾಗಿದ್ದಾಗ ಮಾತ್ರ ಗ್ರಾಮೀಣ ಬದುಕು ಹಸನಾಗಿರುತ್ತದೆ. ದುಡಿಯುವ ಕೈಗಳಿಗೆ ಶಕ್ತಿ ಬರಬೇಕು. ಅದಕ್ಕಾಗಿ ಕೂಲಿ ಕಾರ್ಮಿಕ ಸಂಘಟನೆಗಳು ಬರುವ ಆದಾಯದಲ್ಲಿ ನಮ್ಮ ಬ್ಯಾಂಕಿಗೆ ಹಣವನ್ನು ತುಂಬಿದರೆ ನಮ್ಮ ಬ್ಯಾಂಕಿನ ವತಿಯಿಂದ ನಿಮ್ಮ ಎಲ್ಲ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗಾಗಿ ಸಹಾಯವನ್ನು ನೀಡಬಹುದಾಗಿದೆ ಎಂದರು.
ಸಭೆಯಲ್ಲಿ ಬಂಡಿಯವರ, ನಾಗನೂರ, ಮುಳ್ಳೂರ ಸೇರಿದಂತೆ ಗ್ರಾಮದ ಪ್ರಗತಿ ಪರ ರೈತರು, ಮಹಿಳಾ ಸಂಘಟನೆಗಳ ಪದಾಧಿಕಾರಿಗಳು, ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದರು. ಸುಂಕದ ನಿರೂಪಿಸಿದರು.