ಸುದ್ದಿ ಸಂಕ್ಷೇಪ
ವಾಲ್ಮೀಕಿ ಜಯಂತಿ ಆಚರಣೆ
ಗದಗ: ಮಹರ್ಷಿ ವಾಲ್ಮೀಕಿಯು ಬರೆದ ರಾಮಾಯಣವು ಪ್ರಪಂಚದ ಪ್ರಥಮ ಸಂಸ್ಕೃತ ಕಾವ್ಯವಾಗಿದೆ ಎಂದು ಪ್ರಾಚಾರ್ಯ ವೆಂಕಟೇಶ ಕಟ್ಟಿಮನಿ ಹೇಳಿದರು. ಸ್ಥಳೀಯ ನಗರಸಭೆಯ ಸಂಯುಕ್ತ ಪಪೂ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದರು. ಗದಗ ಕ್ಲಸ್ಟರ್ ಅಧಿಕಾರಿ ಎಸ್.ಎಸ್. ಗೌಡರ ಮಾತನಾಡಿದರು. ಶಿಕ್ಷಕ ಬಿ.ಬಿ. ಗಾಯಕವಾಡ, ಟಿ.ಆರ್. ಬೇವಿನಮರದ, ಎನ್.ಎಂ. ಕಬಾಡಿ, ಎಸ್.ಎ. ಪತ್ತಾರ,ಎಸ್.ಎಸ್. ಬಾಕಳೆ, ಪಾರ್ವತಮ್ಮ ರಾಮಣ್ಣ ಮುಂತಾದವರು ಉಪಸ್ಥಿತರಿದ್ದರು.
ಟಿಪ್ಪರ್ ಹಾಯ್ದು ಯುವಕ ಸಾವು
ಗದಗ: ಟಿಪ್ಪರ್ ಹರಿದು ಯುವಕ ಮೃತಪಟ್ಟ ಘಟನೆ ಭಾನುವಾರ ಬೆಳಗಿನ ಜಾವ ತಾಲೂಕಿನ ಶ್ಯಾಗೋಟಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಜಮೀನಿನಲ್ಲಿ ಮಣ್ಣು ಅಗೆಯುವ ಕೆಲಸ ಮಾಡುತ್ತಿದ್ದ ಯುವಕ ರಾತ್ರಿ ಕೆಲಸ ಮುಗಿಸಿ ಅಲ್ಲಿಯೇ ಮಲಗಿದ್ದ. ಇದನ್ನು ಗಮನಿಸದ ಟಿಪ್ಪರ್ ಚಾಲಕ ಹಿಂಬದಿಯಲ್ಲಿ ಚಲಾಯಿಸಿದ ಹಿನ್ನೆಲೆಯಲ್ಲಿ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿ ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಮೃತನನ್ನು ಶರಣಬಸವ (21) ಎಂದು ಗುರುತಿಸಲಾಗಿದೆ. ಇದೇ ಘಟನೆಯಲ್ಲಿ ರಮೇಶ ಎನ್ನುವವನಿಗೆ ತೀವ್ರಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ದಾಖಲಿಸಲಾಗಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ ಪಲ್ಟಿ: ಮಗು ಸಾವು
ರೋಣ: ಚಾಲಕನ ನಿಯಂತ್ರಣ ತಪ್ಪಿದ ಕಾರ್ ಪಲ್ಟಿಯಾಗಿ ಬಾಲಕ ಸೃಜನ ಕುಲಕರ್ಣಿ (3) ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನುಳಿದ ಮೂವರು ಗಾಯಗೊಂಡ ಘಟನೆ ತಾಲೂಕಿನ ಬಾಸಲಾಪುರ ಕ್ರಾಸ್ ಬಳಿ ಭಾನುವಾರ ಬೆಳಗ್ಗೆ ಸಂಭವಿಸಿದೆ. ಹುಬ್ಬಳ್ಳಿಯಿಂದ ಗಜೇಂದ್ರಗಡದಲ್ಲಿನ ಸಂಬಂಧಿಕರ ಮನೆಯಲ್ಲಿ ನಡೆಯಲಿರುವ ಪವಮಾನ ಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ರಸ್ತೆಯಲ್ಲಿನ ಗುಂಡಿಯನ್ನು ತಪ್ಪಿಸುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ ಎನ್ನಲಾಗಿದೆ. ಅಪಘಾತಕ್ಕಿಡಾದವರು ಹುಬ್ಬಳ್ಳಿಯ ಉಣಕಲ್ನ ಶ್ರೀನಗರ 3ನೇ ಕ್ರಾಸ್ ನಿವಾಸಿಗಳೆಂದು ತಿಳಿದು ಬಂದಿದ್ದು, ಗಾಯಾಳು ಅನಂತರಾವ್ ಉದ್ದಾರ, ಮುರಳಿ ಕುಲಕರ್ಣಿ, ಸುಜಾತಾ ಕುಲಕರ್ಣಿ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು 108 ಆರೋಗ್ಯ ರಕ್ಷಾ ಕವಚ ವಾಹನ ಮೂಲಕ ರೋಣ ಪಟ್ಟಣದ ಪಂ. ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಿಪಿಐ ವೆಂಕಟಪ್ಪ ನಾಯಕ, ಪಿಎಸ್ಐ ಡಿ.ಬಿ.ಪಾಟೀಲ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ರೋಣ ಪೋಲಿಸ್ ಠಾಣೆಯಲ್ಲಿ ಪ್ರಕಟಣ ದಾಖಲಾಗಿದೆ.