ಜಿಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ
ಗದಗ: ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿರುದ್ಧ 11 ಬಿಜೆಪಿ ಸದಸ್ಯರು ಕೈ ಎತ್ತುವುದರ ಮೂಲಕ ಅವಿಶ್ವಾಸ ನಿರ್ಣಯ ಮಂಡನೆಗೆ ಸೋಮವಾರ ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಮ್ಮ ಸಮ್ಮತಿ ಸೂಚಿಸಿದರು.
ಒಟ್ಟು 18 ಸದಸ್ಯ ಬಲಹೊಂದಿದ ಜಿಲ್ಲಾ ಪಂಚಾಯಿತಿಯಲ್ಲಿ 12 ಬಿಜೆಪಿ ಸದಸ್ಯರು ಹಾಗೂ 6 ಕಾಂಗ್ರೆಸ್ ಸದಸ್ಯರಿದ್ದಾರೆ. ಹಾಗಾಗಿ 1993 ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 180, 2ಸಿ ಪ್ರಕಾರ ಸದಸ್ಯ ಬಲದ ಅರ್ಧದಷ್ಟು ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರಿಂದ ಸಭೆಯನ್ನು ಪ್ರಾರಂಭಿಸಲಾಯಿತು.
ಸೆ. 30 ರಂದು ಬಿಜೆಪಿಯ 10 ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಮನವಿ ಸಲ್ಲಿಸಿದ್ದರು. ನಂತರ ಅ. 11 ರಂದು ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ ಅವರು ಸಿಇಒ ವೀರಣ್ಣ ತುರುಮುರಿ ಅವರಿಗೆ ಟಿಪ್ಪಣಿ ಬರೆದು ಆ ಮೂಲಕ ತಾವೂ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಈಗಾಗಲೇ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿಗಳಿಗೆ ರಾಜಿನಾಮೆ ಪತ್ರ ಸಲ್ಲಿಸಿದ್ದೇನೆ. ಹಾಗಾಗಿ ವಿಶೇಷ ಸಭೆಯನ್ನು ರದ್ದುಗೊಳಿಸುವಂತೆ ತಿಳಿಸಿದ್ದರು. ಆದರೆ, ಕರ್ನಾಟಕ ರಾಜ್ ಪಂಚಾಯತ್ ಅಧಿನಿಯಮ 180-2ಎ ಅಡಿಯಲ್ಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳುವ ಅಧಿಕಾರ ಸದಸ್ಯರಿಗೆ ಇರುವುದರಿಂದ ಸಭೆಗೆ ಅವಕಾಶ ನೀಡಲಾಗಿದೆ ಎಂದು ಸಿಇಒ ವೀರಣ್ಣ ತುರುಮುರಿ ತಿಳಿಸಿದರು.
ಅವಿಶ್ವಾಸ ನಿರ್ಣಯ: ಒಟ್ಟು 12 ಬಿಜೆಪಿ ಸದಸ್ಯರ ಪೈಕಿ ಹಾಲಿ ಅಧ್ಯಕ್ಷ ಎಂ.ಎಸ್. ಪಾಟೀಲ ಅವರನ್ನು ಹೊರತುಪಡಿಸಿ ಉಳಿದ 11 ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿ ನಿರ್ಣಯವನ್ನು ಜಿಪಂ ಸದಸ್ಯ ಬೀರಪ್ಪ ಬಂಡಿ ಮಂಡಿಸಿದರು. ಇದಕ್ಕೆ ಸದಸ್ಯೆ ಚಂಬವ್ವ ಪಾಟೀಲ ಅನುಮೋದನೆ ನೀಡಿದರು. ಸಭೆಯಲ್ಲಿ ಪಾಲ್ಗೊಂಡಿದ್ದ 11 ಸದಸ್ಯರು ಕೈ ಎತ್ತುವುದರ ಮೂಲಕ ಇದಕ್ಕೆ ಒಪ್ಪಿಗೆ ಸೂಚಿಸಿದರು. ಸದಸ್ಯರ ಅವಿಶ್ವಾಸ ನಿರ್ಣಯವನ್ನು ಪರಿಗಣಿಸಿ ಈ ಮೂಲಕ ಜಿಪಂ ಅಧ್ಯಕ್ಷ ಸ್ಥಾನ ಖಾಲಿಯಗಿರುವ ಬಗ್ಗೆ ಜಿಪಂ ಕಾರ್ಯ ನಿರ್ವಾಹಣಾಧಿಕಾರಿ ಘೋಷಣೆ ಮಾಡಿದರು.
ಅವಿಶ್ವಾಸ ಗೊತ್ತುವಳಿ ಸಭೆಯಲ್ಲಿ ಜಿಪಂ ಅಧ್ಯಕ್ಷ ಎಂ.ಎಸ್.ಪಾಟೀಲ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳುವ ಸಭೆಯಲ್ಲಿ ಸ್ವತಃ ಎಂ.ಎಸ್. ಪಾಟೀಲ ಹಾಗೂ ಕಾಂಗ್ರೆಸ್‌ನ 6 ಸದಸ್ಯರು ಭಾಗವಹಿಸದೇ ಇರುವುದು ವಿಶೇಷವಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ರಮೇಶ ಮುಂದಿನಮನಿ ವಹಿಸಿಕೊಂಡಿದ್ದರು. ಜಿಪಂ ಸದಸ್ಯ ಬೀರಪ್ಪ ಬಂಡಿ, ಹೇಮಗಿರೀಶ ಹಾವಿನಾಳ, ಎಂ.ಎಸ್. ದೊಡ್ಡಗೌಡ್ರ, ಕಮಲವ್ವ ಸಜ್ಜನರ, ಸುನೀತಾ ಹಳ್ಳೆಪ್ಪನವರ, ನಿರ್ಮಲಾ ಬರದೂರ, ಶಾಂತವ್ವ ದಂಡಿನ, ಬಸವರಾಜೇಶ್ವರಿ ಪಾಟೀಲ, ಶಾರದಾ ಹಿರೇಗೌಡ್ರ, ಚಂಬವ್ವ ಪಾಟೀಲ ಉಪಸ್ಥಿತರಿದ್ದರು.
ಎಂ.ಎಸ್. ಪಾಟೀಲ ಮೇಲೆ ಸೂಕ್ತ ಕ್ರಮ: ಬಂಡಿ
ಗದಗ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಎಸ್. ಪಾಟೀಲರಿಗೆ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಲು ಪಕ್ಷ ಸೂಚಿಸಿದ್ದರೂ ರಾಜಿನಾಮೆ ನೀಡಿರಲಿಲ್ಲ. ಅವರ ವಿರುದ್ದ ಇನ್ನುಳಿದ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿದ್ದರಿಂದ ಅಂದಿನ ಸಭೆಯಲ್ಲಿ ತಪ್ಪದೆ ಪಾಲ್ಗೊಳ್ಳುವಂತೆ ಅವರಿಗೆ ವಿಪ್ ಜಾರಿ ಮಾಡಲಾಗಿತ್ತು. ಆದರೆ, ಸೋಮವಾರದ ಸಭೆಗೆ ಅವರು ಗೈರು ಹಾಜರಾಗುವ ಮೂಲಕ ವಿಪ್ ಉಲ್ಲಂಘಿಸಿದ್ದು ಅವರ ಮೇಲೆ ಪಕ್ಷ ಅಗತ್ಯ ಕ್ರಮ ತೆಗೆದುಕೊಳ್ಳುತ್ತದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಕಳಕಪ್ಪ ಬಂಡಿ ಹೇಳಿದರು. ಅವರು ಸೋಮವಾರ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ಒಪ್ಪಂದದ ಪ್ರಕಾರ 10 ತಿಂಗಳಿಗೆ ಜಿಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕಿತ್ತು. ಅದರಂತೆ ಉಪಾಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಆದರೆ, ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ ರಾಜಿನಾಮೆ ನೀಡಿರಲಿಲ್ಲ. ಹಾಗಾಗಿ ಅವರಿಗೆ ವಿಪ್ ಜಾರಿ ಮಾಡಲಾಗಿತ್ತು. ಆದರೆ ವಿಪ್ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಜತೆ ಈ ಕುರಿತು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಜಿಪಂ ಸದಸ್ಯ ಬೀರಪ್ಪ ಬಂಡಿ, ಹೇಮಗಿರೀಶ ಹಾವಿನಾಳ ಹಾಗೂ ಎಂ.ಎಂ. ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.