ಜಿಲ್ಲಾ ಆಸ್ಪತ್ರೆಗೆ ಮೂಲ ಸೌಲಭ್ಯ ಒದಗಿಸಿ: ಆಗ್ರಹ
ಗದಗ: ಗದಗ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ, ಸಿಬ್ಬಂದಿ ಹಾಗೂ ಯಂತ್ರೋಪಕರಣಗಳ ಕೊರತೆಯಿದ್ದು, ಹೀಗಾಗಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ತೆ ದೊರೆಯತ್ತಿಲ್ಲ. ಆಸ್ಪತ್ರೆಗೆ ಬೇಕಾದ ಮೂಲ ಸೌಲಭ್ಯ ಒದಗಿಸಬೇಕೆಂದು ದಲಿತ ಯುವ ಸೇನಾ ಸಮಿತಿಯ ಗದಗ ಜಿಲ್ಲಾದ್ಯಕ್ಷ ವಿಜಯ ಮುಳಗುಂದ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಆಸ್ಪತ್ರೆಯಲ್ಲಿ 27 ವೈದ್ಯರು ಹಾಗೂ 61 ಸ್ಟಾಫ್‌ನರ್ಸ್, 33 ಲಿಪಿಕ ಸಿಬ್ಬಂದಿ ಮತ್ತು186 ಗ್ರೂಪ್ ಡಿ ಹಾಗೂ ಯಂತ್ರೋಪಕರಣಗಳ ಕೊರತೆಯಿದ್ದು, ಕೂಡಲೇ ವೈದ್ಯರ ನೇಮಕಾತಿ ಮಾಡಿ ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯುವಂತೆ ಮಾಡಬೇಕು. ಇಲ್ಲಿ ಸೌಲಭ್ಯಗಳ ಕೊರತೆ ಇರುವುದರಿಂದ ರೋಗಿಗಳು ಹುಬ್ಬಳ್ಳಿ ಕಿಮ್ಸ್, ಧಾರವಾಡ ಎಡಿಎಂ, ಬೆಳಗಾವಿ ಕೆಎಲ್‌ಇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕಾಗಿದೆ. ಬಡವರಿಗೆ ಲಕ್ಷಗಟ್ಟಲೆ ಹಣ ಸುರಿದು ಚಿಕಿತ್ಸೆ ಪಡೆಯುವುದು ಕಷ್ಟಕರವಾಗಿದೆ. ಈಚೆಗೆ ಡೆಂಘೀ ಜ್ವರದ ಹಾವಳಿ ಹೆಚ್ಚಾಗಿದ್ದು, ಅದರ ಚಿಕಿತ್ಸೆಗೆ ಸರ್ಕಾರವು ಮೃತರ ಕುಟುಂಬಕ್ಕೆ ರು. 1 ಲಕ್ಷ ನೀಡುತ್ತಿದೆ. ರೋಗಿಯ ಚಿಕಿತ್ಸೆಗೆ ಆರ್ಥಿಕ ಸೌಲಭ್ಯ ಸರ್ಕಾರವು ನೀಡಲು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಆಸ್ಪತ್ರೆಯನ್ನು ಕೋಟಿ-ಕೋಟಿ ಹಣ ಖರ್ಚುಮಾಡಿ ಕಟ್ಟಿಸಿದ್ದರೂ ಬಡಜನರ ಉಪಯೋಗಕ್ಕೆ ಬಾರದಂತಾಗಿದೆ. ರೋಗಿಗಳ ಪರದಾಟ ಕೇಳೊರಿಲ್ಲದಂತಾಗಿದೆ. ಜಿಲ್ಲಾ ಆಸ್ಪತ್ರೆ ಗಬ್ಬೆದ್ದು ನಾರುತ್ತಿದೆ. ವೈದ್ಯರಿಲ್ಲದೇ ಆಸ್ಪತ್ರೆ ಬಿಕೋ ಎನ್ನೂವಂತಾಗಿದೆ. ಸಚಿವರು ಪರಿಶೀಲಿಸಿ ಜಿಲ್ಲಾ ಆಸ್ಪತ್ರೆಗೆ ಸಕಲ ಸೌಲಭ್ಯ ಕಲ್ಪಿಸಬೇಕು ಎಂದು ದಲಿತ ಯುವ ಸೇನಾ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.