ಡಿಸಿ ಭರವಸೆ: ರೈತರಸತ್ಯಾಗ್ರಹ ಮುಕ್ತಾಯ
ಗದಗ: ಗದಗ ಜಿಲ್ಲಾಧಿಕಾರಿ ಕಚೇರಿಯ ಎದುರಿಗೆ 15 ದಿನಗಳಿಂದ ಭೂಮಿ ಬೇಕು, ರೈತ ಆಂದೋಲನ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ರೋಣ ತಾಲೂಕಿನ 24 ಬಡ ರೈತ ಕುಟುಂಬಗಳು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಸೋಮವಾರ ಸಂಜೆ ನೀಡಿದ ಭರವಸೆ ಮೇರೆಗೆ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಲಾಯಿತು. ರೋಣ ತಾಲೂಕಿನ 24 ಬಡ ರೈತ ಕುಟುಂಬಗಳಿಗೆ 1987ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಗರೀಬಿಹಟಾವೋ ಕಾರ್ಯಕ್ರಮದ ಅಡಿಯಲ್ಲಿ ಹೆಚ್ಚುವರಿ ಭೂಮಿಯನ್ನು ಬಡವರಿಗೆ ಮಂಜೂರಿ ಮಾಡಲಾಗಿತ್ತು. ಪ್ರಸ್ತುತ ಮೂಲ ಜಮೀನುದಾರರು ಬಡ ರೈತ ಕುಟುಂಬಗಳಿಗೆ ಅನಾವಶ್ಯಕ ಕಿರುಕುಳ ನೀಡುತ್ತಿರುವುದನ್ನು ವಿರೋಧಿಸಿ ಸರ್ಕಾರದ ಗಮನ ಸೆಳೆಯಲು 24 ರೈತ ಕುಟುಂಬಗಳು ಜಿಲ್ಲಾಧಿಕಾರಿ ಕಚೇರಿಯ ಎದುರಿಗೆ ಉಪವಾಸ ಸತ್ಯಾಗ್ರಹವನ್ನು ವಿಪ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠರ ನೇತೃತ್ವದಲ್ಲಿ 15 ದಿನಗಳಿಂದ ಸತ್ಯಾಗ್ರಹ ನಡೆಯುತ್ತಿತ್ತು. ರೈತರ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಹಲವಾರು ಬಾರಿ ರೈತರನ್ನು ಹಾಗೂ ಹೊರಟ್ಟಿಯರನ್ನು ಸಂಪರ್ಕಿಸಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಹೊರಟ್ಟಿಯವರ ಹಾಗೂ ಎಸ್.ಆರ್. ಹಿರೇಮಠರ ಸೂಚನೆ ಮೇರೆಗೆ ಡಾ. ಬಸವರಾಜ ಧಾರವಾಡ ನೇತೃತ್ವದಲ್ಲಿ ರೈತರೊಂದಿಗೆ ಜಿಲ್ಲಾಧಿಕಾರಿಗಳು ಸುದೀರ್ಘವಾಗಿ ಚರ್ಚಿಸಿದ ಮೇಲೆ ಜಿಲ್ಲಾಧಿಕಾರಿಗಳಿಂದ ರೈತರ ಪರವಾಗಿ ಸ್ಪಷ್ಟವಾದ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಹೋರಾಟವನ್ನು ಸೋಮವಾರ ಹಿಂದಕ್ಕೆ ಪಡೆಯಲಾಯಿತು. ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಸತ್ಯಾಗ್ರಹ ಸ್ಥಳಕ್ಕೆ ಬಂದು ಉಪವಾಸ ನಿರತರಿಗೆ ಹಣ್ಣಿನ ರಸ ಕುಡಿಸಿದ ಬಳಿಕ ಮಾತನಾಡಿ, ಸರ್ಕಾರ ಜಿಲ್ಲಾಡಳಿತ ನಿಮ್ಮ ನೋವಿಗೆ ಸ್ಪಂದಿಸುತ್ತದೆ. ನಿಮಗೆ ಏನೇ ತೊಂದರೆಯಾದರೂ ನನ್ನನ್ನು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಸಂಪರ್ಕಿಸಿ, ಸದಾಕಾಲ ನಿಮ್ಮೊಂದಿಗೆ ಜಿಲ್ಲಾಡಳಿತವಿದೆ ಎಂಬ ಭರವಸೆ ನೀಡಿದರು. ಫಕ್ಕೀರಪ್ಪ ಮಾದರ, ರಾಜಪ್ಪ ಮುದೇನಗುಡಿ, ಯಮನಪ್ಪ ಪೂಜಾರ, ಬಸಪ್ಪ ಚಲವಾದಿ, ಚನ್ನಪ್ಪ ಚಲವಾದಿ, ಫಕ್ಕೀರವ್ವ ಚಲವಾದಿ, ಫಕ್ಕರವ್ವ ದೊಡ್ಡಮನಿ, ಹನಮಂತಪ್ಪ ತಳವಾರ, ಇಮಾಮಸಾಬ ನದಾಫ, ಖಾದರಸಾಬ ಕಲಾದಗಿ, ಮಹ್ಮದಅಲಿ ಹೊರಪೇಟಿ, ಗುಡುಮಾ ಕೋಲಕಾರ, ಅಲ್ಲಸಾಬ ಕಂದಕೂರ, ಯಲ್ಲಪ್ಪ ಮಣ್ಣೇರಿ, ಸಿದ್ದಪ್ಪ ಕುರಹಟ್ಟಿ, ಕೀಡಯ್ಯ ಚೊಳಚಗುಡ್ಡ, ಉಮೇಶ ಕಲೇಗಾರ, ಬಾಬು ಕುಂಟೇಕಾರ, ಸಂಗಮ್ಮ ಬೆನಹಾಳ, ಶಿವಪ್ಪ ಹಡಪದ, ಯಲ್ಲಪ್ಪ ಕೊತಬಾಳ, ಶಿವಯ್ಯ ಮಠದ, ಫಕ್ಕೀರಪ್ಪ ತೆಗ್ಗಿನಮನಿ ಮುಂತಾದವರು ಇದ್ದರು.