ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮರಗಳ ಮಾರಣಹೋಮ

Lingaraj Badiger
Updated On : 23 Oct 2013, 10:53 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಅ. 22
ಗದಗ ಜಿಲ್ಲೆಯಲ್ಲಿ ಕಪ್ಪತ್ತಗುಡ್ಡವನ್ನು ಹೊರತು ಪಡಿಸಿದಲ್ಲಿ ಹೆಚ್ಚು ಅರಣ್ಯ ಹಾಗೂ ಗುಡ್ಡದ ಪ್ರದೇಶವನ್ನು ಹೊಂದಿರುವ ಗಜೇಂದ್ರಗಡ ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯಲ್ಲಿ ನಿತ್ಯ ಮರಗಳ ಮಾರಣ ಹೋಮ ನಡೆಯುತ್ತಿದೆ.
ಒಂದೆರೆಡು ತಿಂಗಳಿಂದ ಮರಗಳ್ಳರಿಂದ ಬೆಳಗಾಗುವುದರಷ್ಟರಲ್ಲಿ ನಿಂತ ಮರಗಳೆಲ್ಲಾ ಬುಡಮೇಲಾಗಿ ಬಿದ್ದಿರುತ್ತವೆ. ಕಡಿದ ಮಾರನೆ ದಿನವೇ ಮರಗಳನ್ನು ಅಲ್ಲಿಂದ ಬೇರೆಡೆ ಸಾಗಿಸುವ ಕಾರ್ಯ ಎಗ್ಗಿಲ್ಲದೆ ಸಾಗಿದೆ.
ಬೇವಿನಕಟ್ಟಿ ಗ್ರಾಮದಿಂದ ದಿಂಡೂರ ಗ್ರಾಮ ಸಂಚಾರ ಮಧ್ಯೆದಲ್ಲಿನ ಹಿರೇಹಳ್ಳದ ದಡದಲ್ಲಿ ಅರಣ್ಯ ಇಲಾಖೆ ವತಿಯಿಂದ ನೆಟ್ಟ ನೂರಾರು ಸಸಿಗಳು ಈಗ ಗಿಡ, ಮರಗಳಾಗಿ ಬೆಳೆದಿವೆ. ಆದರೆ ಅವುಗಳ ಸೂಕ್ತ ರಕ್ಷಣೆ ಇಲ್ಲದ್ದರಿಂದ ಶ್ರೀಗಂಧ ಸೇರಿ ಇತರೆ ಬೆಲೆ ಬಾಳುವ ಮರಗಳನ್ನು ಮರಗಳ್ಳರು ರಾತ್ರೋರಾತ್ರಿ ಕಡಿದು ಸಾಗಾಟ ಮಾಡುತ್ತಿದ್ದಾರೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಸಸಿ ನೆಡುವಾಗ ಇರುವ ಕಾಳಜಿ ಗಿಡಗಳು ಬೆಳೆದು ಹೆಮ್ಮರವಾದಾಗೇಕೆ ಅರಣ್ಯ ಇಲಾಖೆ ಅವುಗಳ ರಕ್ಷಣೆಗೆ ಮುಂದಾಗುವುದಿಲ್ಲ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.
ಅನುಮಾನಕ್ಕೆ ಕಾರಣ: ಹೊಲಗಳಿಗೆ ಸಂಚರಿಸುವ ಮಾರ್ಗ ಮಧ್ಯೆ ಹಲವಾರು ವರ್ಷಗಳ ಹಿಂದೆ ನೆಟ್ಟಿದ್ದ ಈ ಮರಗಳು ದಾರಿ ಹೋಕರಿಗೆ ಮತ್ತು ದಣಿದ ಕೃಷಿಕರಿಗೆ ನೆರಳಾಗಿದ್ದವು. ಹಚ್ಚು ಹಸಿರಿನಿಂದ ಕಂಗೊಳಿಸುತ್ತಿದ್ದವು. ಆದರೆ ಇಂದು ಕಾನೂನು ಬಾಹಿರವಾಗಿ ಮರಗಳ ಮಾರಣ ಹೋಮ ನಿತ್ಯ ನಡೆಯುತ್ತಿದ್ದರೂ ತಡೆಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವಿಫಲರಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಬಹು ಅಮೂಲ್ಯ ಪರಿಸರ ಸಂಪತ್ತು ಮಾನವನ ದುರಾಸೆಗೆ ಜತೆಗೆ ರಕ್ಷಣೆ ಹೊಣೆ ಹೊತ್ತ ಇಲಾಖಾಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ದಿನೇ ದಿನೇ ನಾಶವಾಗುತ್ತಿರುವುದು ದುರ್ದೈವದ ಸಂಗತಿ. ಸರ್ಕಾರ ಇನ್ನಾದರೂ ಗಿಡ ಮರ ಬೆಳೆಸುವ ಜತೆಗೆ ಬೆಳೆದು ನಿಂತ ಮರಗಳ ರಕ್ಷಣೆಗೆ ಮುಂದಾಗಬೇಕಿದೆ ಎನ್ನುವುದು ಪರಿಸರ ಪ್ರೇಮಿಗಳ ಆಶಯವಾಗಿದೆ.


ಕಾಲಕಾಲೇಶ್ವರದಿಂದ ದಿಂಡೂರ, ಬೇವಿನಕಟ್ಟಿ ಹಾಗೂ ಸೂಡಿ ಮಾರ್ಗದ ಹಿರೇಹಳ್ಳದ ಪಕ್ಕದಲ್ಲಿ ಅರಣ್ಯ ಇಲಾಖೆ ಸುಪರ್ದಿಯಲ್ಲಿ ಶ್ರೀಗಂಧ, ಬೇವು, ನೀಲಗೇರಿ, ತೇಗ ಮರಗಳನ್ನು ಬೆಳೆಸಲಾಗಿದೆ. ಅಲ್ಲದೆ ಈ ಭಾಗದ ರೈತರು ತಮ್ಮ ಹೊಲದ ಬದುವಿನಲ್ಲಿ ಬೆಳೆಸಿದ್ದಾರೆ. ಕೆಲ ವರ್ಷಗಳ ಹಿಂದೆ ಈ ಭಾಗದಲ್ಲಿ ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡಿದ ಬಗ್ಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಆದರೆ, ಮತ್ತೆ ಮರಗಳನ್ನು ಅಕ್ರಮವಾಗಿ ಕಡಿಯುತ್ತಿರುವ ಬಗ್ಗೆ ತಿಳಿದು ಬಂದಿದ್ದು, ಕೂಡಲೇ ಕ್ರಮಕ್ಕೆ ಮುಂದಾಗುತ್ತೇವೆ.
 
-ಟಿ.ವೈ. ಜೋಗಿನ
ಅರಣ್ಯ ಇಲಾಖೆ ಅಧಿಕಾರಿ, ರೋಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement