ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮೆಂಟಲ್ ಕೋತಿ ಕಾಟಕ್ಕೆ ಕಂಗೆಟ್ಟ ಜನ

Lingaraj Badiger
Updated On : 23 Oct 2013, 10:49 am

ಕನ್ನಡಪ್ರಭ ವಾರ್ತೆ, ಗದಗ, ಅ. 22
ಜಿಲ್ಲೆಯ ರೋಣ ತಾಲೂಕಿನ ಯಾವಗಲ್ಲ ಗ್ರಾಮದಲ್ಲಿರುವ ಮಾರುತಿ ದೇವಸ್ಥಾನದ ಸಮೀಪದಲ್ಲಿನ ಗಿಡದಲ್ಲಿರುವ ಕೋತಿಯೊಂದು ಏಕಾಏಕಿ ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿದ್ದು ಆತಂಕ ಸೃಷ್ಟಿಸಿದೆ.
ಮಕ್ಕಳು ಮತ್ತು ಮಹಿಳೆಯರು ಕಂಡರಂತೂ ವಿಪರೀತ ಕೋಪದಿಂದ ದಾಳಿ ಮಾಡುವ ಈ ಕೋತಿ ಹಾವಳಿಯಿಂದ ಗ್ರಾಮಸ್ಥರು ಕಂಗೆಟ್ಟಿದ್ದು, ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಈ ಕೋತಿಯನ್ನು ಹಿಡಿದು ಬೇರೆಡೆ ಸಾಗಿಸಲು ಕ್ರಮ ತೆಗೆದುಕೊಳ್ಳಬೇಕಿದೆ.
ಹಲವಾರು ದಿನಗಳಿಂದ ಗ್ರಾಮದಲ್ಲಿ ಅತಿಯಾದ ಹಾವಳಿ ಮಾಡುತ್ತಿರುವ ಈ ಕೋತಿಗೆ ಅದೇನಾಗಿದೆಯೋ ಗೊತ್ತಿಲ್ಲ. ಮನುಷ್ಯರನ್ನು ನೋಡುತ್ತಿದ್ದಂತೆ ಅವರ ಮೇಲೆ ಎರಗಿ ಬೀಳುತ್ತದೆ. ಕೋತಿ ಎಷ್ಟೊಂದು ಚಾಲಾಕಿಯೆಂದರೆ, ಮನುಷ್ಯನ ಮೇಲೆ ಎದುರಿನಿಂದ ದಾಳಿ ಮಾಡದೇ ಹಿಂಬದಿಯಿಂದ ಬಂದು ದಾಳಿ ಮಾಡುವುದಲ್ಲದೆ ಸಿಕ್ಕವರನ್ನು ಮನಸೋಇಚ್ಛೆ ಕಡಿಯುತ್ತದೆ. ಇದರಿಂದ ಗ್ರಾಮದಲ್ಲಿ ಭೀತಿಯ ವಾತಾವರಣವೇ ನಿರ್ಮಾಣವಾಗಿದೆ.
8 ಜನರ ಮೇಲೆ ದಾಳಿ: ಗ್ರಾಮದ 8ಕ್ಕೂ ಹೆಚ್ಚು ಜನರು ಈ ಕೋತಿಯ ದಾಳಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಕಲ್ಲಪ್ಪ ಎನ್ನುವ ವ್ಯಕ್ತಿಯು ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದೇ ಗ್ರಾಮದ ಕಲ್ಲವ್ವ, ಮಂಜುನಾಥ ಸೇರಿದಂತೆ ಹಲವಾರು ಜನರನ್ನು ಕಚ್ಚಿ ಗಾಯಗೊಳಿಸಿದೆ. ದಾಳಿಯ ವೇಳೆಯಲ್ಲಿ ಕೋತಿಯ ಉಗುರುಗಳು ಕಣ್ಣಿಗೆ ತಾಗಿದಲ್ಲಿ ಶಾಶ್ವತವಾಗಿ ಕಣ್ಣುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಗಾಯಗೊಂಡವರು ನರಗುಂದ, ರೋಣ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕೋತಿಯ ಉಪಟಳದಿಂದ ರೋಸಿ ಹೋಗಿರುವ ಗ್ರಾಮಸ್ಥರು ಕೋತಿಯನ್ನು ಹಿಡಿಯಲು ಸಾಕಷ್ಟು ಪ್ರಯತ್ನ ಮಾಡಿದ್ದರೂ ಅದು ಫಲಕಾರಿಯಾಗಿಲ್ಲ. ಬದಲಾಗಿ ಕೋತಿ ಹಿಡಿಯಲು ಹೋದ ಸಂದರ್ಭದಲ್ಲಿಯೇ ಸಾಕಷ್ಟು ಜನರ ಮೇಲೆ ಅದು ದಾಳಿ ಮಾಡಿದೆ. ಕೋತಿಯ ಹಿಡಿಯಲು ಸರಿಯಾದ ಸಲಕರಣೆಗಳಿಲ್ಲದ್ದರಿಂದ  ಗ್ರಾಮಸ್ಥರ ಪ್ರಯತ್ನ ಹಲವು ಬಾರಿ ವಿಫಲವಾಗಿದೆ. ಆದರೆ, ಗ್ರಾಮಸ್ಥರು ಮಾತ್ರ ಇದನ್ನು ನಿರ್ಲಕ್ಷ್ಯ ಮಾಡಿದಲ್ಲಿ ಇನ್ನಷ್ಟು ಹಾನಿ ಮಾಡುತ್ತದೆ ಎನ್ನುವ ಆತಂಕದಲ್ಲಿದ್ದಾರೆ.
ಸಾಕಾಗಿ ಹೋಗೈತ್ರಿ: ಗ್ರಾಮದಲ್ಲಿ ಮಂಗಗಳ ಉಪಟಳ ಹಾಗೂ ಹುಚ್ಚ ಮಂಗ್ಯಾನ ದಾಳಿ ಬಗ್ಗೆ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಮದ್ದು ಕೋಡ್ತೀವಿ ನೀವೇ ಶೂಟ್ ಮಾಡಿ ಅಂತ ಅರಣ್ಯ ಇಲಾಖೆ ಅಧಿಕಾರಿಗಳು ಹೇಳ್ತಿದ್ದಾರೆ. ನಾವು ಹೇಗೆ ಅದನ್ ಶೂಟ್ ಮಾಡಬೇಕು. ಈ ಮಂಗ್ಯಾನ ಸಲುವಾಗಿ ಅರಣ್ಯ ಇಲಾಖೆಗೆ ಅಲೆದು ಸಾಕಾಗಿ ಹೊಗೈತಿ. ತಕ್ಷಣ ಅರಣ್ಯ ಇಲಾಖೆಯವರು ಹುಚ್ಚ ಹಿಡಿದಿರುವ ಈ ಮಂಗ್ಯಾ ಮತ್ತು ಗ್ರಾಮದಾಗ ಬೀಡ ಬಿಟ್ಟಿರುವ ಇನ್ನಷ್ಟು ಮಂಗ್ಯಾಗಳನ್ನು ಬ್ಯಾರೆ ಕಡೆ ಓಡಿಸಬೇಕ್ರಿ ಎನ್ನುತ್ತಾರೆ ಗ್ರಾಮಸ್ಥರಾದ ಕಲ್ಲವ್ವ ಮದ್ದಪ್ಪ ನವಲಗುಂದ.

ಹುಚ್ಚು ಹಿಡಿದಿರುವ ಸಾಧ್ಯತೆ
ಗ್ರಾಮದ ಸುತ್ತಮುತ್ತಲ ಜಮೀನುಗಳಲ್ಲಿ ಈ ಮೊದಲು ಸಾಕಷ್ಟು ಕೋತಿಗಳಿದ್ದವು. ಆದರೆ ಅವೆಲ್ಲಾ ಈ ಕೋತಿಯ ರೀತಿಯಲ್ಲಿ ಮನುಷ್ಯರ ಮೇಲೆ ದಾಳಿ ಮಾಡುತ್ತಿರಲಿಲ್ಲ. ಆದರೆ ಈ ಕೋತಿಗೆ ಹುಚ್ಚು ಹಿಡಿದಿರುವ ಸಾಧ್ಯತೆ ಹೆಚ್ಚಾಗಿದೆ. ಅದಕ್ಕಾಗಿಯೇ ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿದೆ. ಇದನ್ನು ಹೀಗೆಯೇ ಬಿಟ್ಟರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಮೊಬೈಲ್ ನಾಟ್‌ರೀಚೆಬಲ್
ಯಾವಗಲ್ಲ ಗ್ರಾಮದಲ್ಲಿ ಉಂಟಾಗಿರುವ ಕೋತಿಗಳ ಹಾವಳಿಯ ಕುರಿತು ಇಲಾಖೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಾಕಷ್ಟು ಬಾರಿ ಸಂಪರ್ಕಿಸಿದರೂ ನಮ್ಮ ಹಿರಿಯ ಅಧಿಕಾರಿಗಳು ಹೊರಗೆ ಹೋಗಿದ್ದಾರೆ ಎನ್ನುವ ಉತ್ತರ ನೀಡುತ್ತಾರೆ. ರೋಣ ತಾಲೂಕು ವ್ಯಾಪ್ತಿಯ ಅರಣ್ಯ ಅಧಿಕಾರಿಯ ಮೊಬೈಲ್ ನಂಬರ್ ನಾಟ್‌ರೀಚೆಬಲ್ ಆಗಿದೆ. ಇದೆಲ್ಲಾ ಸಹಜವಾಗಿ ಕೋತಿಯ ಉಪಟಳದಿಂದ ರೋಸಿ ಹೋಗಿರುವ ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement