ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಾಜ್ಯೋತ್ಸವ ಯಶಸ್ವಿಗೊಳಿಸಿ

Lingaraj Badiger
Updated On : 23 Oct 2013, 10:54 am

ಕನ್ನಡಪ್ರಭ ವಾರ್ತೆ, ಗದಗ, ಅ. 22
ನಗರದ ಕ್ರೀಡಾಂಗಣದಲ್ಲಿ ನ. 1ರಂದು ಸಂಭ್ರಮದ ರಾಜ್ಯೋತ್ಸವ ಆಚರಣೆಗೆ ಸರ್ವರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ತಿಳಿಸಿದರು.
ಅವರು ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಸಂಜೆ ಜರುಗಿದ ರಾಜ್ಯೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ರೀಡಾಂಗಣ ಸ್ವಚ್ಛತೆ, ಅಂದು ಪಥ ಸಂಚಲನದಲ್ಲಿ ಪಾಲ್ಗೊಳ್ಳುವ ರಕ್ಷಕ ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ತಂಡಗಳಿಂದ ಪೂರ್ವಭಾವಿಯಾಗಿ ಸಾಕಷ್ಟು ಅಭ್ಯಾಸ ನಡೆಯಬೇಕು. ಕ್ರೀಡಾಂಗಣದಲ್ಲಿ ಬೆಳಗ್ಗೆ ಹಾಗೂ ಎಪಿಎಂಸಿಯ ವಿವೇಕಾನಂದರ ಸಭಾಭವನದಲ್ಲಿ ಸಂಜೆ 5.30 ಗಂಟೆಯಿಂದ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳ ತಂಡಗಳನ್ನು ಸೂಕ್ತವಾಗಿ ಆಯ್ಕೆ ಮಾಡಿ, ಉತ್ತಮ ಕಾರ್ಯಕ್ರಮ ನೀಡುವಂತೆ ತರಬೇತಿ ನೀಡುವುದು. ಭುವನೇಶ್ವರಿಯ ಮೆರವಣಿಗೆ ನಗರಸಭೆ ಆವರಣದಿಂದ ನಡೆಯಲಿದ್ದು ಈ ಬಾರಿ ಜಿಲ್ಲೆಯ ಅಭಿವೃದ್ಧಿ ನಿರೂಪಿಸುವ ಆಕರ್ಷಕ ಸ್ತಬ್ದ ಚಿತ್ರಗಳನ್ನು ತಯಾರಿಸಬೇಕು. ಈ ಕುರಿತು ಕೃಷಿ, ತೋಟಗಾರಿಕೆ, ಆರೋಗ್ಯ, ಶಿಕ್ಷಣ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅರಣ್ಯ, ಜಲಾನಯನ ಅಭಿವೃದ್ಧಿ, ವಾಯವ್ಯ ಸಾರಿಗೆ ಹಾಗೂ ಲೋಕೋಪಯೋಗಿ ಇಲಾಖೆಗಳು ಮುತುವರ್ಜಿವಹಿಸಿ ಸ್ತಬ್ದ ಚಿತ್ರಗಳನ್ನು ತಯಾರಿಸಬೇಕು. ಮೆರವಣಿಗೆ ಕಲಾ ತಂಡಗಳು ವೈವಿಧ್ಯತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ಅಂದು ಕಾರ್ಯಕ್ರಮದಲ್ಲಿ ಮೈಸೂರು ದಸರಾದಲ್ಲಿ ಪದಕ ಪಡೆದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯ ಮಾಡಿದ ಹಾಗೂ ಪ್ರತಿಭಾವಂತರನ್ನು ಗುರುತಿಸುವ ಹಾಗೂ ಆದಷ್ಟು ಬೇಗ ಪಟ್ಟಿಯನ್ನು ಅಂತಿಮಗೊಳಿಸುವ ಕುರಿತು ಗದಗ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯನ್ನು ರಚಿಸಲಾಗಿದೆ.
ರಾಜ್ಯೋತ್ಸವ ದಿನದಂದು ನಗರದ ವಿವಿಧ ವೃತ್ತಗಳಲ್ಲಿ ದೀಪಾಲಂಕಾರ ಹಾಗೂ ಪ್ರಮುಖ ಖಾಸಗಿ, ಸರ್ಕಾರಿ ಕಚೇರಿಗಳ ಮೇಲೂ ದೀಪಾಲಂಕಾರಕ್ಕೆ ಸೂಕ್ತ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಗ್ರಾಪಂಗಳು ಸ್ಥಳೀಯ ಶಾಲೆಗಳ ಸಹಯೋಗದಲ್ಲಿ ರಾಜ್ಯೋತ್ಸವ ಆಚರಿಸುವ ಕುರಿತು ಸುತ್ತೋಲೆಯನ್ನು ತಾವು ಎಲ್ಲ ಗ್ರಾಪಂಗಳಿಗೆ ಕಳುಹಿಸುವುದಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ಸಿಇಒ ವಿ.ಜಿ. ತುರಮರಿ ತಿಳಿಸಿದರು. ನಗರದಲ್ಲಿ ಜಿಲ್ಲಾಡಳಿತ ಏರ್ಪಡಿಸುವ ಸಾರ್ವಜನಿಕ ರಾಜ್ಯೋತ್ಸವವು ಸಂಭ್ರಮದ ಸಮಾರಂಭವಾಗುವಂತೆ ಸಂಬಂಧಿತ ಎಲ್ಲ ಉಪ ಸಮಿತಿಗಳು ಹಾಗೂ ಇಲಾಖೆಗಳು ನೋಡಿಕೂಳ್ಳಬೇಕು ಎಂದರು.  
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಬನಶಂಕರಿ ಅಂಗಡಿ ಅವರು ರಾಜ್ಯೋತ್ಸವ ಅಚರಣೆ ಕುರಿತಂತೆ ಮೆರವಣಿಗೆ, ಕ್ರೀಡಾಂಗಣ, ಕಲಾತಂಡಗಳ ಆಯ್ಕೆ, ರೂಪಕಗಳ ಆಯ್ಕೆ, ಪ್ರತಿಭಾವಂತರ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳ ಹಾಗೂ ಪ್ರಚಾರ ಸೇರಿದಂತೆ ಹಲವಾರು ಉಪ ಸಮಿತಿಗಳನ್ನು ರಚಿಸಿದ್ದು ಅವುಗಳ ನಿರ್ವಹಿಸಬೇಕಾದ ಜವಾಬ್ದಾರಿಗಳ ಕುರಿತು ವಿವರಿಸಿದರು. ಸಂಬಂಧಿತ ಸಮಿತಿಗಳವರು ಕೈಗೊಂಡ ಕ್ರಮಗಳ ಕುರಿತು ಅ. 30ರ ಬೆಳಗ್ಗೆ 11 ಗಂಟೆಗೆ ಸಭೆ ಸೇರಲು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement