ಶರಣರ ಅವಹೇಳನ: ಪ್ರತಿಭಟನೆ
ಮುಂಡರಗಿ: ಸಿದ್ಧರಾಮ ಚರಿತೆ ಕೃತಿ ವಿಕೃತಿಗೊಳಿಸಿದವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ಮಂಗಳವಾರ ಸ್ಥಳೀಯ ತೋಂಟದಾರ್ಯ ಪ್ರವಚನ ಸೇವಾ ಸಮಿತಿ, ಕನ್ನಡಕ್ರಾಂತಿ ಸೇನೆ, ಕನ್ನಡ ಜನಾಭಿವೃದ್ಧಿ ವೇದಿಕೆ, ತಾಲೂಕು ಸಾರ್ವಜನಿಕ ವೇದಿಕೆ, ಮಹಿಳಾ ಸಂಘಗಳ ಕಾರ್ಯಕರ್ತರು, ಬಸವಾಭಿಮಾನಿಗಳು ಕಪ್ಪುಬಟ್ಟೆ ಧರಿಸಿ ಬೃಹತ್ ಮೌನ ಪ್ರತಿಭಟನೆ ನಡೆಸಿ, ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹೇಮಂತಗೌಡ ಪಾಟೀಲ, ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಹಮ್ಮಿಗಿ ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಮಾತನಾಡಿ, ವಿಶ್ವವೇ ಗೌರವಿಸುವ ಬಸವಣ್ಣನವರು, ಇತರ ಶರಣರ ಬಗ್ಗೆ ಹಗುರವಾಗಿ ಕೃತಿಯಲ್ಲಿ ಬರೆದು ಸಮಾಜದ ಸಮಾನತೆಯ ಹರಿಕಾರನಿಗೆ, ಬಸವಾಭಿಮಾನಿಗಳಿಗೆ ಅಪಮಾನಗೊಳಿಸಲಾಗಿದೆ. 12ನೇ ಶತಮಾನದಲ್ಲಿ ಶರಣರು ಸಾಮಾಜಿಕವಾಗಿ ಸಕಲರಿಗೂ ಲೇಸನ್ನೇ ಬಯಸಿದ್ದರು. ಅಂಥವರಿಗೆ ಅವಮಾನ ಮಾಡುವ ಕೃತ್ಯ ಖಂಡನೀಯ. ಶರಣರ ಅವಮಾನಗೊಳಿಸುವರು ಯಾರೇ ಇರಲಿ ಅವರ ಮೇಲೆ ಕಾನೂನು ಕ್ರಮ ಅವಶ್ಯ ಎಂದರು.
ಅಲ್ಲಮ ಕೀಳು ಕುಲದವ, ಬಸವಣ್ಣ ಅಜ್ಞಾನಿ ಎಂದು ಉಲ್ಲೇಖಿಸಲಾಗಿದೆ. ಇತಿಹಾಸಕ್ಕೆ ಅಪಚಾರ ಬಗೆಯುವ, ಶರಣರ ತೇಜೋವಧೆ ಇರುವ ಕೃತಿ ತಕ್ಷಣವೇ ನಿಷೇಧವಾಗಲಿ. ಈ ಕೃತಿಯನ್ನು 12ನೇ ಶತಮಾನದಲ್ಲಿ ಕವಿ ರಾಘವಾಂಕ ರಚಿಸಿದ. ಅದರಲ್ಲಿ 549 ಪದ್ಯಗಳಿವೆ. ಆದರೆ, ಸಿದ್ದರಾಮ ಚರಿತೆಯಲ್ಲಿ ಹೊಸದಾಗಿ 138 ಪದ್ಯಗಳನ್ನು ಸೇರಿಸಲಾಗಿದೆ. ಮೂಲ ಪದ್ಯಗಳನ್ನು ತಿರುಚಿ ವಿಕೃತಗೊಳಿಸಿದ್ದು, ಇದರಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದೆ. ಹೀಗಾಗಿ ಮುನ್ನುಡಿ ಬರೆದ, ಭಾಷಾಂತರ ಮಾಡಿದ ಮತ್ತು ಮಾರಾಟ ಮಾಡುತ್ತಿರುವ ವ್ಯಕ್ತಿಗಳನ್ನು ಪತ್ತೆ ಮಾಡಿ ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಪಟ್ಟಣದ ತೋಂಟದಾರ್ಯ ಮಠದಿಂದ ಪ್ರಾರಂಭವಾದ ಮೌನ ಮೆರವಣಿಗೆಗೆ ವೈ.ಎನ್. ಗೌಡರ ಚಾಲನೆ ನೀಡಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪ್ರತಿಭಟನಾ ಮೆರವಣಿಗೆಯು ಕೊಪ್ಪಳ ವೃತ್ತಕ್ಕೆ ಆಗಮಿಸಿ ಕೃತಿಕಾರನ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಈಶಪ್ಪ ಬೆಟಗೇರಿ, ಕೊಟ್ರೇಶ ಅಂಗಡಿ, ಧ್ರುವಕುಮಾರ ಹೊಸಮನಿ, ಬಿ.ವಿ. ಮುದ್ದಿ, ಡಾ. ಬಿ.ಎಸ್. ಮೇಟಿ, ಕೊಟ್ರಯ್ಯ ಅಮರಗೋಳ ಹಿರೇಮಠ, ಎಸ್.ಡಿ. ಮಕಾನದಾರ, ಎ.ಪಿ. ದಂಡಿನ, ನಾಗೇಶ ಹುಬ್ಬಳ್ಳಿ, ರಾಮು ಕಲಾಲ, ಶಿವು ಬಾರಕೇರ, ಸೊಲಬಪ್ಪ ಜೋಬಾಳಿ, ಬಸವಂತಪ್ಪ ಹೊಸಮನಿ, ಬಸವರಾಜ ರಾಮೇನಹಳ್ಳಿ, ವೀರೇಶ ಸಜ್ಜನರ, ಪವನ್ ಚೋಪ್ರಾ, ಬಸವರಾಜ ನವಲಗುಂದ, ದೇವಪ್ಪ ಇಟಗಿ, ನೀಲಕಂಠಪ್ಪ ಪತ್ತಾರ, ತಾಪಂ ಅಧ್ಯಕ್ಷೆ ಅಕ್ಕಮಹಾದೇವಿ ಹಾರೋಗೇರಿ, ಎ.ಕೆ. ಬೆಲ್ಲದ, ದ್ಯಾಮವ್ವ ಕಪ್ಪಗಲ್, ಲಲಿತವ್ವ ಪಡದಳ್ಳಿ, ಜೈನಾಬಿ ಬೆಳಗಟ್ಟಿ, ರೇಣವ್ವ ಪೂಜಾರ, ಸೀತವ್ವ, ಎ.ಕೆ. ಮುಲ್ಲಾನವರ ಮುಂತಾದವರು ಪಾಲ್ಗೊಂಡಿದ್ದರು.