ಕಾಲುಬಾಯಿ ಬೇನೆಗೆ ಪರಿಹಾರ: ಸ್ವಾಗತ
ಮುಂಡರಗಿ: ರಾಜ್ಯದ ವಿವಿಧ ಭಾಗದ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸತತ ಬರಗಾಲ ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಜಾನುವಾರು ಕಾಲುಬಾಯಿ ಬೇನೆಗೆ ತುತ್ತಾಗಿ ಸಾವನ್ನಪ್ಪಿದ್ದು, ಸರ್ಕಾರ ರೈತರಿಗೆ ಉತ್ತಮವಾದ ರೀತಿಯಲ್ಲಿ ಪರಿಹಾರ ಘೋಷಣೆ ಮಾಡಿರುವುದನ್ನು ಮುಂಡರಗಿ ತಾಲೂಕು ಯುವ ಸೇವಾ ಸಂಘಟನೆ ಸ್ವಾಗತಿಸಿದ್ದು, ಸರ್ಕಾರವನ್ನು ಅಭಿನಂದಿಸಿದೆ. ಮುಂಡರಗಿ ತಾಲೂಕಿನಲ್ಲೂ ಜಾನುವಾರಗಳು ಸಾವನ್ನಪ್ಪಿದ್ದು, ರೈತರಿಗೆ ತುಂಬಲಾರದ ನಷ್ಟವಾಗಿದೆ. ತಮ್ಮ ಬದುಕಿನ ಸಂಗಾತಿಗಳಂತೆ ಸಾಕಿ ಸಲುಹಿದ ಜಾನುವಾರು ಪಾಲಕರಿಗೆ ದಿಕ್ಕು ತೋಚದಂತಾಗಿದೆ. ಜಾನುವಾರಿಗೆ ರು. 25,000 ಹಾಗೂ ಕರುಗಳಿಗೆ ರು. 15,000 ಘೋಷಣೆ ಮಾಡಿರುವ ಸರ್ಕಾರದ ನಿರ್ಧಾರ ರೈತರ ಪರವಾಗಿದ್ದು, ಇದರ ಜೊತೆಗೆ ಗೋ ಹತ್ಯೆ ನಿಷೇಧ ಮಾಡುವುದು ಸೂಕ್ತ ಎಂದು ತಾಲೂಕು ಯುವ ಸೇವಾ ಸಂಘಟನೆ ಅಧ್ಯಕ್ಷ ಪವನ್ ಚೋಪ್ರಾ ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕುಗಲ್ಲಿ ಮತ್ತು ಮುಂಡರಗಿ ತಾಲೂಕಿನಲ್ಲಿಯೂ ರೈತರಾದ ವೈ.ಎನ್. ಗೌಡರ್, ನಾಗರಾಜ ಕೋಳಿ, ಮಹಾದೇವಪ್ಪ ಗಡಾದ ಅವರ ಹಸುಗಳು ಸಾವಿಗೀಡಾಗಿವೆ. ಆದ್ದರಿಂದ ಸರ್ಕಾರ ಘೋಷಣೆ ಮಾಡಿದ ಪರಿಹಾರ ಧನವನ್ನು ತ್ವರಿತವಾಗಿ ರೈತರಿಗೆ ತಲುಪುವಂತೆ ಮಾಡಬೇಕು ಎಂದವರು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಯುವ ಸೇವಾ ಸಂಘಟನೆ ಕಾರ್ಯದರ್ಶಿ ಮಂಜುನಾಥ ಗೋಡಿ, ಸದಸ್ಯರಾದ ರಾಘವೇಂದ್ರ ಹೆಗ್ಗಡಾಳ, ಕುಮಾರ ಬನ್ನಿಕೊಪ್ಪ, ಪಣಿರಾಜ ಅಳವಂಡಿ, ಶ್ರೀಕಾಂತ ತಾವರಗೇರಿ, ಮುದುಕೇಶ ಬೀಡನಾಳ ಮತ್ತಿತರರು ಉಪಸ್ಥಿತರಿದ್ದರು.
ಇಂದಿನಿಂದ ಕಾರ್ಯಾಗಾರ
ಗದಗ: ವಿಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ ದೆಹಲಿ, ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ರಾಯಾಪುರ-ಧಾರವಾಡ, ಹುಲಕೋಟಿ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗ ಹಾಗೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ ಅ. 24 ರಿಂದ 26 ರವರೆಗೆ 3 ದಿನಗಳ ಉದ್ಯಮಶೀಲತಾ ಮಾಹಿತಿ ಕಾರ್ಯಾಗಾರವನ್ನು ತಾಲೂಕಿನ ಹುಲಕೋಟಿ ಗ್ರಾಮದ ಹುಲಕೋಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಅ. 24ರ ಬೆಳಗ್ಗೆ 10 ಗಂಟೆಗೆ ಉದ್ಘಾಟನೆ ಜರುಗಲಿದೆ. ಕಾಲೇಜಿನ ಪ್ರಾಚಾರ್ಯ ಡಾ. ವಿ.ಎಂ. ಪಾಟೀಲ ಅಧ್ಯಕ್ಷತೆ ವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ಗದಗ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಾ. ವೀರಣ್ಣ ಎಸ್.ಎಚ್, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಸಿ.ಎಚ್. ಅಂಗಡಿ, ಎಸ್.ಪಿ. ಮಾಡಳ್ಳಿ, ಡಾ. ಎಸ್.ಟಿ. ವಾಸನ್, ಪ್ರೊ. ವಿ.ಎಸ್. ಧೋತ್ರದ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.
ಲಕ್ಷ್ಮವ್ವ ಚಿಕ್ಕಣ್ಣವರ ನಿಧನ
ಲಕ್ಷ್ಮೇಶ್ವರ: ಸಮೀಪದ ಅಡರಕಟ್ಟಿ ಗ್ರಾಮದ ಲಕ್ಷ್ಮವ್ವ ಚಿಕ್ಕಣ್ಣವರ (86) ಮಂಗಳವಾರ ನಿಧನರಾಗಿದ್ದಾರೆ. ಮೃತರಿಗೆ ಐವರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗ ಇದ್ದರು.