ಧರ್ಮಾಧಿಕಾರಿ ಅವಹೇಳನ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ನರಗುಂದ, ಅ. 23
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಮೇಲೆ ಅವಹೇಳನ ಹಾಗೂ ಅಪ್ರಚಾರ ಕೈಗೊಳ್ಳಲಾಗುತ್ತಿದ್ದು, ಹೆಗ್ಗಡೆ ಅವರ ಮೇಲೆ ಆರೋಪ ಹೊರಿಸುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬುಧವಾರ ಪಟ್ಟಣದ ವಿವಿಧ ಸಂಘಟನೆಗಳು ಪ್ರತಿಭಟಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪತ್ರಿವನ ಮಠದ ಸಿದ್ಧವೀರ ಶ್ರೀಗಳು ಮಾತನಾಡಿ, 2012 ರ ಸೆಪ್ಟೆಂಬರ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ನಡೆದ ಸೌಜನ್ಯಾ ಕೊಲೆ ಪ್ರಕರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕೈವಾಡವಿದೆ ಎಂದು ದೂಷಿಸುತ್ತಿರುವುದು ವಿಷಾದನೀಯ. ವೀರೇಂದ್ರ ಹೆಗ್ಗಡೆ ಅವರು ರಾಜ್ಯದ ಜನತೆಗೆ ಚಿರಪರಿಚಿತರಾದ ವ್ಯಕ್ತಿಗಳಾಗಿದ್ದಾರೆ. ಅವರು ರಾಜ್ಯ ಸರ್ಕಾರವು ಕೈಗೊಳ್ಳದಂತಹ ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಶ್ರೀಸಾಮಾನ್ಯರ ಏಳ್ಗೆಗಾಗಿ ಶ್ರಮಿಸುತ್ತಿದ್ದು, ಅಂತಹ ವ್ಯಕ್ತಿಯ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುತ್ತಿರುವುದು ಖಂಡನಾರ್ಹವಾಗಿದೆ.
ಸೌಜನ್ಯಾ ಹತ್ಯೆ ಕುರಿತು ತನಿಖೆಗೆ ಹೆಗ್ಗಡೆ ಅವರು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದು, ರಾಜ್ಯ ಸರ್ಕಾರವು ಈ ಕುರಿತು ಶೀಘ್ರವಾಗಿ ಪರಿಶೀಲಿಸಿ ಸೌಜನ್ಯಾ ಹತ್ಯೆಗೈದ ನಿಜ ಆರೋಪಿಗಳನ್ನು ಬಂಧಿಸಬೇಕು. ಹಾಗೂ ಹೆಗ್ಗಡೆ ಕುಟುಂಬಕ್ಕೆ ಅಂಟಿರುವ ಈ ಕಳಂಕವನ್ನು ತೆಗೆದುಹಾಕುವಲ್ಲಿ ಶ್ರಮಿಸುವಂತೆ ಕೋರಿದರು. ಜೈನ ಸಮಾಜದ ಮುಖಂಡ ತವನಪ್ಪ ರೋಖಡೆ ಮಾತನಾಡಿ, ಸೌಜನ್ಯಾಳ ಕೊಲೆ ಪ್ರಕರಣ ಕುರಿತಾಗಿ ಸಹಾನುಭೂತಿ, ಅನುಕಂಪ ಹೊಂದಿ ನೈಜ ಅಪರಾಧಿಗಳನ್ನು ಪತ್ತೆಮಾಡಿ ಸೂಕ್ತ ಶಿಕ್ಷೆಗೆ ಗುರಿಪಡಿಸಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ರಾಜಣ್ಣ ರೋಖಡೆ, ಸುನಂದಾ ರೋಖಡೆ, ಎಂ.ಜಿ. ಭೋಗಾರ, ಎ.ಎಸ್. ತುಕೋಳ, ಪಾಯಪ್ಪ ಮುತ್ತಿನ, ಅರುಣಾ ರೋಖಡೆ, ಸಪ್ನಾ ರೋಖಡೆ, ಸುರೇಶ ವಜ್ಜರಂಗಿ, ವಿ.ಎಸ್.ಡಾಣೆ, ಅನ್ನಪ್ಪ ಗಡೇಕಾರ ಮುಂತಾದವರು ಉಪಸ್ಥಿತರಿದ್ದರು.