ಭಕ್ತರ ಕಲ್ಯಾಣವೇ ರಂಭಾಪುರಿ ಪೀಠದ ಕಾರ್ಯ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಅ. 23
ರಂಭಾಪುರಿ ಪೀಠದ ಜ. ಲಿಂ. ವೀರಗಂಗಾಧರ ಶ್ರೀಗಳು ಈ ಭಾಗದಲ್ಲಿ ಸಾಕಷ್ಟು ಧರ್ಮ ಪ್ರಚಾರ ಕಾರ್ಯವನ್ನು ಮಾಡಿದ್ದರು. ಹೀಗಾಗಿ ಭಕ್ತರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಂಡಿದ್ದು, ಅದರಂತೆ ಭಕ್ತರ ಕಲ್ಯಾಣಕ್ಕೆ ಶ್ರಮಿಸುವುದು ರಂಭಾಪುರಿ ಪೀಠದ ಕಾರ್ಯವಾಗಿದೆ ಎಂದು ರಂಭಾಪುರಿ ಪೀಠದ ಜ. ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.
ಅವರು ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಜ. ವೀರಗಂಗಾಧರ ಸಮುದಾಯ ಭವನ ನಿರ್ಮಾಣ ಕಾರ್ಯವನ್ನು ವೀಕ್ಷಿಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ವೀರಗಂಗಾಧರ ಶ್ರೀಗಳ ಆಶಯ ಹಾಗೂ ರಂಭಾಪುರಿ ಪೀಠದ ಭಕ್ತ ಸಮೂಹದ ಆಶಯದಂತೆ ಲಕ್ಷ್ಮೇಶ್ವರ ಭಾಗದಲ್ಲಿ ದೊಡ್ಡ ಸಮುದಾಯ ಭವನ ನಿರ್ಮಾಣ ಕಾರ್ಯ ಕಳೆದ ಹಲವು ವರ್ಷಗಳಿಂದ ಪ್ರಾರಂಭವಾಗಿತ್ತು. ಈಗ ಈ ಸಮುದಾಯ ಭವನದ ಕಾರ್ಯ ಮುಕ್ತಾಯ ಹಂತಕ್ಕೆ ಬಂದಿದ್ದು, ನವೆಂಬರ್ 5ರಂದು ಹೋಮ ಹವನಗಳನ್ನು ಮಾಡಲಾಗುತ್ತದೆ. 6ರಂದು ಭವನದ ಉದ್ಘಾಟನೆಯನ್ನು ನೆರವೇರಿಸಲಾಗುತ್ತದೆ. ಈ ಭವನವು ಎಲ್ಲ ಧರ್ಮದವರಿಗೂ ಲಭ್ಯವಾಗಬೇಕು ಎನ್ನುವ ಉದ್ದೇಶದಿಂದ ಸರ್ವ ಧಾರ್ಮಿಕ ಹಾಗೂ ಸಭೆ ಸಮಾರಂಭಗಳನ್ನು ಮಾಡಲು ಅನುಕೂಲವಾಗುತ್ತದೆ.
ಜೇವರ್ಗಿಯಲ್ಲಿ ನಡೆದ ದಸರಾ ಮಹೋತ್ಸವ ತುಂಬಾ ಯಶಸ್ವಿಯಾಯಿತು. ರಂಭಾಪುರಿಯ ಪೀಠಾಭಿಮಾನಿಗಳು ಹಾಗೂ ಅಸಂಖ್ಯಾತ ಭಕ್ತರು ನಾಡಿನ ನೂರಾರು ಮಠಾಧೀಶರು ತಮಗೆ ಬೆಂಬಲ ಸೂಚಿಸಿದ್ದು ಧರ್ಮ ಕಾರ್ಯಕ್ಕೆ ಎಂದೂ ಸೋಲು ಉಂಟಾಗುವುದಿಲ್ಲ ಎಂಬುದನ್ನು ಸೂಚಿಸುತ್ತದೆ. ಕೇವಲ ಶೇ. 10ರಷ್ಟು ನಾಸ್ತಿಕ ಮನೋಭಾವದ ಜನರು ಜೇವರ್ಗಿ ಅಡ್ಡಿಪಲ್ಲಕ್ಕಿ ಮಹೋತ್ಸವಕ್ಕೆ ಅಡ್ಡಿ ಮಾಡಲು ಹೋಗಿ ಸೋಲನ್ನು ಅನುಭವಿಸಿದರು.
ತಾವು ಯಾವುದೇ ರೀತಿಯ ಪ್ರಚಾರಕ್ಕೆ ಆಸೆ ಪಟ್ಟವರಲ್ಲ. ರಂಭಾಪುರಿ ಪೀಠವು ಧಾರ್ಮಿಕ, ಶೈಕ್ಷಣಿಕ ಹಾಗೂ ಸಮಾಜದ ಏಳ್ಗೆಗೆ ದುಡಿಯುವಲ್ಲಿ ಸದಾ ಸಿದ್ಧವಾಗಿದೆ. ಸಮಾಜದಲ್ಲಿನ ಒಳ ಪಂಗಡಗಳ, ಸಮುದಾಯಗಳ ವಿಂಗಡಣೆಯು ಸಮಾಜದ ವಿಘಟನೆಗೆ ದಾರಿ ಮಾಡಿಕೊಡುತ್ತಿದ್ದು. ಇದು ವಿಷಾದದ ಸಂಗತಿಯಾಗಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ಕುಬೇರಪ್ಪ ಮಹಾಂತಶೆಟ್ಟರ, ಎಸ್.ಎಸ್. ಬಾಳಿಹಳ್ಳಿಮಠ, ಆನಂದ ಮೆಕ್ಕಿ, ಚೆನ್ನಪ್ಪ ಕೋಲಕಾರ, ಡಾ. ವೈ.ಎಫ್. ಹಂಜಿ, ಪ್ರೊ. ಎನ್.ಎಸ್. ಪಾಟೀಲ, ಅಂಗಡಿ, ಪುರಸಭೆಯ ಮಾಜಿ ಅಧ್ಯಕ್ಷ ಶಂಕ್ರಪ್ಪ ಮ್ಯಾಗೇರಿ ಮುಂತಾದವರು ಉಪಸ್ಥಿತರಿದ್ದರು.