ಮಳೆ: ಜನಜೀವನ ಅಸ್ತವ್ಯಸ್ತ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಅ. 23
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಕಳೆದೆರೆಡು ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡು ಜನ ಜೀವನ ಅಸ್ತವ್ಯಸ್ತವಾಗಿದೆ.
ಮೇಘರಾಜನ ದಿಢೀರ್ ಆಗಮನ ರೈತ ಸಮೂಹದಲ್ಲಿ ಸಂತಸವನ್ನುಂಟು ಮಾಡಿದೆ. ಹಿಂಗಾರಿ ಬಿತ್ತನೆ ಕಾರ್ಯಕ್ಕೆ ಸಿದ್ಧ್ದಗೊಂಡ ಬೆನ್ನಲ್ಲೆ ಮಳೆರಾಯ ಆಗಮಿಸಿರುವುದು ಹರ್ಷ ಮೂಡಿಸಿದೆ. ಇನ್ನೊಂದೆಡೆ ಮುಂಗಾರಿನ ಗೋವಿನ ಜೋಳ, ಸಜ್ಜೆ, ಸೂರ್ಯಕಾಂತಿ ಬೆಳೆಗಳು ಕಟಾವಿಗೆ ಬಂದ ಈ ಸಂದರ್ಭದಲ್ಲಿ ಮಳೆ ಆಗುತ್ತಿರುವುದು ಕೆಲ ರೈತರಿಗೆ ನೋವು ತಂದಿದೆ.
ಪ್ರಸಕ್ತ ವರ್ಷ ಪ್ರಾರಂಭದಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದು ನಂತರ ಕೈಕೊಟ್ಟ ಪರಿಣಾಮ ಅನ್ನದಾತರ ನಿರೀಕ್ಷೆಗಳೆಲ್ಲ ಹುಸಿಯಾಗುವ ಹಂತ ತಲುಪಿತ್ತು. ಅದೇ ಸಂದರ್ಭದಲ್ಲಿ ಸುರಿದ ಮಳೆಯಿಂದ ಅಲ್ಪ-ಸ್ವಲ್ಪ ಪ್ರಮಾಣದಲ್ಲಿ ಮುಂಗಾರು ಬೆಳೆಗಳು ಕೈಗೆ ಸೇರುವ ನಿರೀಕ್ಷೆ ಇತ್ತು. ಈಗ ಮತ್ತೇ ವರುಣ ದೇವ ಕರುಣೆ ತೋರಿದ್ದು, ರೈತಾಪಿ ವಲಯದಲ್ಲಿ ಲಾಭ ನಷ್ಟದ ಲೆಕ್ಕಾಚಾರ ನಡೆದಿದೆ.
ಕಳೆದೆರೆಡು ದಿನದಿಂದ ಬಿಟ್ಟೂ ಬಿಡದೆ ಸುರಿದ ಮಳೆಯಿಂದಾಗಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿನ ಚರಂಡಿಗಳು ತುಂಬಿ ಹರಿದವು. ಇನ್ನೊಂದೆಡೆ ರೈತರ ಹೊಲದಲ್ಲಿನ ಒಡ್ಡುಗಳು ಒಡೆದು ಬೆಳೆಗಳಿಗೆ ಹಾನಿ ಉಂಟಾಗಿದೆ. ಅದೃಷವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಒಟ್ಟಾರೆ ಮಳೆರಾಯನ ಆಗಮನದಿಂದ ಕುಡಿವ ನೀರಿನ ಸಮಸ್ಯೆಗೆ ಅಲ್ಪ ವಿರಾಮ ನೀಡಿದ್ದಲ್ಲದೆ ವಾತಾವರಣ ತಂಪಿನಿಂದ ಕೂಡಿದ ಪರಿಣಾಮ ಜನರ ಸಂಭ್ರಮಕ್ಕೆ ಕಾರಣವಾಗಿದೆ.