ಅನ್ನದಾತರಿಗೆ ದಕ್ಕುತ್ತಾ ಈರುಳ್ಳಿ ಲಾಭ?
ಕನ್ನಡಪ್ರಭ ವಾರ್ತೆ, ಗದಗ, ಸೆ. 24
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಈರುಳ್ಳಿ, ರಾಜ್ಯದಲ್ಲಿಯೇ ಅತಿ ಹೆಚ್ಚು ಈರುಳ್ಳಿ ಬೆಳೆಯುವುದು ಗದಗ ಜಿಲ್ಲೆಯಲ್ಲಿಯೇ, ಸದ್ಯ ಬೆಲೆ ಏರಿಕೆಯಿಂದ ಗ್ರಾಹಕರಲ್ಲಿ ಕಣ್ಣೀರು ತರುತ್ತಿರುವ ಈರುಳ್ಳಿಯ ಬೆಲೆ ಏರಿಕೆಯ ಲಾಭ ಜಿಲ್ಲೆಯ ರೈತರಿಗೆ ದೊರೆಯುವುದೇ ಎನ್ನುವ ಗೊಂದಲ ಇಲ್ಲಿನ ರೈತರಲ್ಲಿ ಒಡಮೂಡಿದೆ.
ಬಂದಿರುವ ಅಲ್ಪ ಬೆಳೆಗಾದರೂ ಈಗಿರುವ ಉತ್ತಮ ಬೆಲೆ ದೊರೆತಲ್ಲಿ ರೈತರ ನಾಲ್ಕೈದು ವರ್ಷದ ನಷ್ಟ ತುಂಬಿ ಹೋಗಲಿದೆ. ಪ್ರಸಕ್ತ ಮುಂಗಾರಿನಲ್ಲಿ ಮಳೆ ಸರಿಯಾದ ಸಮಯಕ್ಕೆ ಪ್ರವೇಶವಾಗದ ಹಿನ್ನೆಲೆಯಲ್ಲಿ ಸಮರ್ಪಕ ಈರುಳ್ಳಿ ಬಿತ್ತನೆಯಾಗಲಿಲ್ಲ. ಒಟ್ಟು 37 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದ್ದು, ಅದರಲ್ಲಿ ಅತಿ ಹೆಚ್ಚು ರೋಣ ತಾಲೂಕಿನಲ್ಲಿ 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಸರಿಯಾದ ಸಮಯಕ್ಕೆ ಮಳೆಯಾಗದೇ ಒಂದಿಷ್ಟು, ಮತ್ತೆ (ಸೆಪ್ಟೆಂಬರ್‌ನಲ್ಲಿ) ಅವಶ್ಯಕತೆಗಿಂತ ಹೆಚ್ಚಿನ ಮಳೆ ಒಂದೇ ವಾರದಲ್ಲಿ ಸುರಿದ ಪರಿಣಾಮ ಬಿತ್ತನೆಯಾಗಿದ್ದ ಈರುಳ್ಳಿಗೆ ಹಾನಿಯಾಗಿದೆ.
ನವೆಂಬರ್‌ನಲ್ಲಿ ಮಾರುಕಟ್ಟೆಗೆ
ಜಿಲ್ಲೆಯ ಈರುಳ್ಳಿಯು ಪ್ರತಿ ವರ್ಷವೂ ಅಕ್ಟೋಬರ್ 2ನೇ ವಾರದಲ್ಲಿ ಮಾರುಕಟ್ಟೆಗೆ ಬರುವುದು ವಾಡಿಕೆ. ಆದರೆ ಈ ಬಾರಿ ಮಳೆ ವಿಳಂಭವಾದ ಹಿನ್ನೆಲೆಯಲ್ಲಿ ನವೆಂಬರ್‌ನಲ್ಲಿ ಬರುವ ಸಾಧ್ಯತೆ ಹೆಚ್ಚಾಗಿದ್ದು, ಡಿಸೆಂಬರ್ ಮತ್ತು ಜನವರಿ ಮೊದಲ ವಾರದವರೆಗೂ ಜಿಲ್ಲೆಯ ಈರುಳ್ಳಿ ಮಾರುಕಟ್ಟೆಗೆ ಬರುತ್ತದೆ.
ಬಿತ್ತನೆಯಾಗಿರುವ ಕ್ಷೇತ್ರದ ಆಧಾರದಲ್ಲಿ ಗಮನಿಸಿದಲ್ಲಿ ಶೇ. 30 ರಷ್ಟು ರೈತರ ಈರುಳ್ಳಿ ಮಾತ್ರ ಸದ್ಯ ಕಟಾವಿಗೆ ಬಂದಿದ್ದು, ಇನ್ನು ಶೇ. 70ರಷ್ಟು ಈರುಳ್ಳಿ ಮಾರುಕಟ್ಟೆಗೆ ಬರುವುದು ಬಾಕಿ ಇದೆ. ಪ್ರತಿ ಬಾರಿಯೂ ಈರುಳ್ಳಿ ಬೆಲೆ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುವ ರೀತಿಯಲ್ಲಿ ಏರಿಳಿತವನ್ನು ಕಾಣುತ್ತಿದ್ದು, ಈ ಬಾರಿಯಾದರೂ ಅದು ಸ್ಥಿರವಾಗಿ ನಿಲ್ಲಲಿ. ಕೂಲಿ ಕಾರ್ಮಿಕರ ಸಮಸ್ಯೆಯಿಂದ ತತ್ತರಿಸಿರುವ ರೈತರಿಗೆ ಅನುಕೂಲವಾಗಲಿ ಎನ್ನುವುದು ರೈತರ ಆಶಯವಾಗಿದೆ.
ಗ್ರಾಹಕರಲ್ಲಿ ಕಣ್ಣೀರು: ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕೆಜಿಗೆ ರು. 100 ಈರುಳ್ಳಿ ಮಾರಾಟವಾಗುತ್ತಿದ್ದು, ಗ್ರಾಹಕರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಸಿಎಂ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ, ಈರುಳ್ಳಿ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಅಗತ್ಯ ಬಿದ್ದಲ್ಲಿ ಈರುಳ್ಳಿಯನ್ನು ಆಮದು ಮಾಡಿಕೊಳ್ಳಬೇಕು ಮತ್ತು ದೇಶದಿಂದ ಬೇರೆಡೆ ರಫ್ತಾಗುತ್ತಿರುವ ಈರುಳ್ಳಿಯನ್ನು ಸ್ಥಗಿತಗೊಳಿಸಿ, ಬೆಲೆಯಲ್ಲಿ ಆಗಿರುವ ಏರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಗಳು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ರಫ್ತು ಸ್ಥಗಿತಗೊಳಿಸಿದಲ್ಲಿ ರೈತರಿಗೆ ಸಾಕಷ್ಟು ನಷ್ಟವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ರೈತರ ಅಭಿಪ್ರಾಯ
ಸರ್ಕಾರಗಳು ಕೇವಲ ಗ್ರಾಹಕರನ್ನಷ್ಟೇ ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುತ್ತವೆ. ಈರುಳ್ಳಿ ಬಿತ್ತನೆ ಹಾಗೂ ಬೆಳೆಯುವಲ್ಲಿ ಸಾಕಷ್ಟು ಖರ್ಚು ಮಾಡುವ ರೈತರಿಗೆ ಉತ್ತಮ ಬೆಲೆ ಸಿಕ್ಕರೆ ರೈತನ ಬದುಕು ಸುಧಾರಣೆಯಾಗುತ್ತದೆ. ಅದಕ್ಕಾಗಿ ಸರ್ಕಾರ ಏಕಾಏಕಿ ರಫ್ತು ಸ್ಥಗಿತಗೊಳಿಸಿ, ಬೇರೆ ದೇಶಗಳಿಂದ ಈರುಳ್ಳಿ ಆಮದು ಮಾಡಿಕೊಂಡಲ್ಲಿ ನಮಗೆಲ್ಲಾ ತುಂಬಾ ತೊಂದರೆಯಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಮಳೆ ಕೊರತೆ, ಅತಿಯಾದ ಮಳೆ ಹೀಗೆ ಒಂದಿಲ್ಲೊಂದು ಸಮಸ್ಯೆಯಿಂದ ನಾವೆಲ್ಲಾ ಕಂಗಾಲಾಗಿದ್ದು, ಈ ಬಾರಿಯಾದರೂ ಈರುಳ್ಳಿಗೆ ಉತ್ತಮ ಬೆಲೆ ಸಿಗಬೇಕು. ಅದಕ್ಕಾಗಿ ಸರ್ಕಾರ ಕೇವಲ ಗ್ರಾಹಕರ ಹಿತವನ್ನಷ್ಟೇ ಅಲ್ಲ, ಈರುಳ್ಳಿ ಬೆಳೆದ ರೈತರ ಬಗ್ಗೆಯೂ ಚಿಂತನೆ ಮಾಡಬೇಕು.
- ಮಾರುತೆಪ್ಪ ಡೋಣಿ, ಸಂಗಪ್ಪ ತಳವಾರ, ಈರಪ್ಪ ಬಾಳಗೌಡಪ್ಪ, ನಾಗಪ್ಪ ಕುರಿ, ದೇಸಾಯಿಗೌಡ ಪಾಟೀಲಈರುಳ್ಳಿ ಬೆಳೆದ ಜಿಲ್ಲೆಯ ವಿವಿಧ ತಾಲೂಕುಗಳ ರೈತರು.
ಸ್ಥಗಿತ ಸಾಧ್ಯತೆ
ಸದ್ಯ ಕೇಂದ್ರ ಸರ್ಕಾರ ಈರುಳ್ಳಿ ರಫ್ತಿಗೆ ಅವಕಾಶ ಕಲ್ಪಿಸಿದ್ದು, ಇದಕ್ಕೆ ಯಾವುದೇ ರೀತಿಯ ಕಾಲ ಮಿತಿಯನ್ನು ನೀಡಿಲ್ಲ. ಒಂದು ಮೂಲಗಳ ಪ್ರಕಾರ ರಫ್ತನ್ನು ಜನವರಿಯವರೆಗೂ ವಿಸ್ತರಿಸಲು ಸಾಧ್ಯವಿಲ್ಲ. ಸರ್ಕಾರ ದೇಶದಲ್ಲಿನ ಬೇಡಿಕೆಯನ್ನು ಆಧರಿಸಿ, ರಫ್ತಿಗೆ ಅವಕಾಶ ನೀಡದೇ ಇದ್ದಲ್ಲಿ ಬೆಲೆ ತೀರಾ ಕೆಳಮಟ್ಟಕ್ಕೆ ಕುಸಿಯುತ್ತದೆ. ಇದು ಗ್ರಾಹಕರಿಗೆ ಅನುಕೂಲಕರವಾಗಿದ್ದರೆ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಈರುಳ್ಳಿ ಬೆಳೆದ ರೈತರ ಪಾಲಿಗೆ ಮಾತ್ರ ದೊಡ್ಡ ಆಘಾತವನ್ನೇ ತಂದೊಡ್ಡಲಿದೆ.
- ಶಿವಕುಮಾರ ಕುಷ್ಟಗಿ