ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಬ್ಬಿಗೆ ಯೋಗ್ಯ ಬೆಲೆ ನೀಡಿ

Lingaraj Badiger
Updated On : 25 Oct 2013, 10:57 am

ಮುಂಡರಗಿ: ಕಬ್ಬಿಗೆ ನ್ಯಾಯಯುತವಾಗಿ ಉತ್ತಮ ಬೆಲೆ ನೀಡಬೇಕೆಂದು ಒತ್ತಾಯಿಸಿ ಮುಂಡರಗಿ, ಹಡಗಲಿ, ಕೊಪ್ಪಳ ಘಟಕಗಳ ರೈತರಿಂದ ಗುರುವಾರ ವಿಜಯನಗರ ಸಕ್ಕರೆ ಕಾರ್ಖಾನೆ ಎದುರು ಬೃಹತ್ ಪ್ರತಿಭಟನೆ ಜರುಗಿತು.
ಗುಜರಾತ್ ರಾಜ್ಯದ ಗಾನದೇವಿ ಸಹಕಾರಿ ಸಕ್ಕರೆ ಕಾರ್ಖಾನೆಯು 2012-13ರಲ್ಲಿ ಪ್ರತಿ ಟನ್ ಕಬ್ಬಿಗೆ ರು. 3880, ಉತ್ತರ ಪ್ರದೇಶ ಸರ್ಕಾರ ಸಕ್ಕರೆ ಇಳುವರಿಗೆ ಶೇ. 8ಕ್ಕೆ ರು. 2900 ನಿಗದಿಮಾಡಿ ಪಾವತಿಸಿದೆ. ಮುಂಡರಗಿ ತಾಲೂಕಿನಲ್ಲಿ ರೈತರು ಬೆಳೆಯುವ ಕಬ್ಬಿನ ಇಳುವರಿ ಶೇ. 11 ರಷ್ಟಿದ್ದರೂ ಇಲ್ಲಿನ ವಿಜಯನಗರ ಸಕ್ಕರೆ ಕಾರ್ಖಾನೆಯವರು ಕಬ್ಬಿಗೆ ಉತ್ತಮ ಬೆಲೆ ನೀಡುತ್ತಿಲ್ಲ. ಇಲ್ಲಿನ ರೈತರು ಬೆಳೆಯುವ ಒಂದು ಟನ್ ಕಬ್ಬಿಗೆ ರು. 3000 ನಿಗದಿಪಡಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಬೆಲೆ ನಿಗದಿಯಾಗುವವರೆಗೂ ಪ್ರತಿಭಟನೆ ಮುಂದುವರಿಯುತ್ತದೆ. ಅಲ್ಲಿಯವರೆಗೆ ಕಾರ್ಖಾನೆಯನ್ನು ಸ್ಥಗಿತಗೊಳಿಸುವಂತೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವವಹಿಸಿದ್ದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಇಂದು ರೈತರು ಸಾಕಷ್ಟು ತೊಂದರೆ ಮಧ್ಯದಲ್ಲಿಯೂ ಸಾಲಸೋಲ ಮಾಡಿ ತಮ್ಮ ಜಮೀನುಗಳಲ್ಲಿ ಕಬ್ಬನ್ನು ಬೆಳೆಯುತ್ತಿದ್ದಾರೆ. ಆದರೆ, ಕಾರ್ಖಾನೆಯವರು ಕಬ್ಬಿಗೆ ಉತ್ತಮ ಬೆಲೆ ನೀಡುತ್ತಿಲ್ಲ. ಉತ್ತಮ ಬೆಲೆ ಕೇಳಲು ಹೋಗುವ ರೈತರ ಮೇಲೆ ನಮ್ಮ ರೈತರನ್ನೇ ಎತ್ತಿಕಟ್ಟುವ ಮೂಲಕ ರೈತರ ಹೋರಾಟವನ್ನು ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಬೆಳಗಾವಿ ಸಕ್ಕರೆ ಕಾರ್ಖಾನೆಯಲ್ಲಿ 1 ಟನ್ ಕಬ್ಬಿಗೆ ರು. 2650, ಬಿಜಾಪುರ ಸಕ್ಕರೆ ಕಾರ್ಖಾನೆಯಲ್ಲಿ 1 ಟನ್ ಕಬ್ಬಿಗೆ ರು. 2625 ನೀಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಬೀಜ, ಗೊಬ್ಬರದ ಬೆಲೆ ಗಗನಕ್ಕೇರಿದ್ದರೂ ಇಲ್ಲಿನ ವಿಜಯನಗರ ಸಕ್ಕರೆ ಕಾರ್ಖಾನೆಯವರು ಮಾತ್ರ ಕೇವಲ ರು. 2500 ಮಾತ್ರ ನೀಡುತ್ತಿದ್ದು, ಅದರಲ್ಲಿ ಸಾರಿಗೆ ಹಾಗೂ ಕಟಾವು ವೆಚ್ಚಕ್ಕಾಗಿ ರು. 700 ಕಡಿತಗೊಳಿಸಿ 1 ಟನ್‌ಗೆ ಕೇವಲ ರು. 1800 ಮಾತ್ರ ನೀಡುತ್ತಿದ್ದಾರೆ. ಇದರಿಂದ ಇಲ್ಲಿನ  ರೈತರಿಗೆ ಅನ್ಯಾಯವಾಗುತ್ತಿದೆ. ಕೆಲವರು ರಾಜಕಾರಣಿಗಳ ಹಾಗೂ ಮಂತ್ರಿಗಳ ಬೆಂಬಲದಿಂದ ಪ್ರತಿಭಟನೆಯನ್ನು ಹತ್ತಿಕಲು ಪ್ರಯತ್ನಿಸುತ್ತಿದ್ದು, ರೈತರು ಯಾವುದಕ್ಕೂ ಕಿವಿಗೊಡದೇ ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ಮುಂದುವರಿಸಬೇಕು ಎಂದರು. ವಿಜಯನಗರ ಸಕ್ಕರೆ ಕಾರ್ಖಾನೆ ಹಿರಿಯ ಅಧಿಕಾರಿ ಕೆ.ಎನ್. ಅಡ್ವೈಜರ್ ರಾಜಗೋಪಾಲ ಮಾತನಾಡಿ, ತಾವು ಸರ್ಕಾರದ ಆದೇಶದಂತೆ ಬೆಲೆ ನೀಡುತ್ತಿರುವುದಾಗಿ ತಿಳಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತರು ಮೊದಲು ಕಬ್ಬು ಸಾಗಿಸಲು ಸಾರಿಗೆ ವೆಚ್ಚ ಹಾಗೂ ಕಟಾವು ಮಾಡುವ ಹಣವನ್ನು ಕಾರ್ಖಾನೆಯವರೇ ನೀಡುತ್ತಿದ್ದರು. ಇದೀಗ ಅದನ್ನು ರೈತರಿಗೆ ನೀಡುವ ಬೆಂಬಲ ಬೆಲೆಯಲ್ಲಿಯೇ ಕಡಿತಗೊಳಿಸಲಾಗುತ್ತಿದೆ. ಇದನ್ನು ಬೇರೆ ಯಾವುದೇ ಕಾರ್ಖಾನೆಯಲ್ಲಿ ಮಾಡುತ್ತಿಲ್ಲ ಎಂದು ಕಾರ್ಖಾನೆ ವಿರುದ್ಧ ಘೋಷಣೆ ಹಾಕಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ನಾಗರಾಜ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಸರಿಪಡಿಸುವುದಾಗಿ ತಿಳಿಸಿದರು. ಇದಕ್ಕೆ ರೈತರು ಒಪ್ಪದಿರುವುದರಿಂದ ವಿಜಯನಗರ ಸಕ್ಕರೆ ಕಾರ್ಖಾನೆಯವರೊಂದಿಗೆ ಮಾತನಾಡಿ, ಅ. 25ರ ಬೆಳಗ್ಗೆ 11ಕ್ಕೆ ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರ ಹಾಗೂ ಕಾರ್ಖಾನೆ ಮಾಲೀಕರ ಸಭೆಯನ್ನು ನಡೆಸಿ ಅಲ್ಲಿಯೇ ತೀರ್ಮಾನಿಸುವ ಭರವಸೆ ನೀಡಿದರು. ಅಪರ ಜಿಲ್ಲಾಧಿಕಾರಿ ಭರವಸೆಯ ಮೇರೆಗೆ ರೈತರು ಪ್ರತಿಭಟನೆ ಹಿಂಪಡೆದರು. ಕಬ್ಬು ಬೆಳೆಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅತ್ತಾಹಳ್ಳಿ ದೇವರಾಜ, ವಿಠ್ಠಲ್ ಗಣಾಚಾರಿ, ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕುರಿ, ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕು ರೈತ ಸಂಘದ ಅಧ್ಯಕ್ಷ ಮುದ್ದು, ಕಪ್ಪತ್ತಪ್ಪ ಆರೇರ್, ಸುರೇಶ ಹಲವಾಗಲಿ, ಅಂಬವ್ವ ಕಟ್ಟಿಮನಿ, ನಿಂಗಪ್ಪ ಭಂಡಾರಿ, ಮರೇಗೌಡ ವೀರೇಂದ್ರ ಪಾಟೀಲ, ನಾಗಪ್ಪ ಅಂಗಡಿ, ದುರುಗಪ್ಪ ಹ್ಯಾಡ್ಲಾ, ನಾಗಪ್ಪ, ಚೆನ್ನವೀರಪ್ಪ, ಸುರೇಶ, ಮಹೇಶ ಸೇರಿದಂತೆ ಸಾವಿರಾರು ರೈತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement