ಮಹಿಳೆ ಸಬಲ: ಸಮಾಜಕ್ಕೆ ಬಲ
ಲಕ್ಷ್ಮೇಶ್ವರ: ಮಹಿಳೆಯರು ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಹುದಾಗಿದೆ. ಮಹಿಳೆಯರನ್ನು ಆರ್ಥಿಕ ಸಬಲರನ್ನಾಗಿ ಮಾಡಿದರೆ ಕುಟುಂಬವನ್ನಷ್ಟೆ ಅಲ್ಲ ಸಮಾಜಕ್ಕೆ ಬಲ ನೀಡಿದಂತಾಗುತ್ತದೆ ಎಂದು ಲಿಂಬಯ್ಯಸ್ವಾಮಿ ಲಿಂಬಯ್ಯಸ್ವಾಮಿಮಠ ಹೇಳಿದರು.
ಅವರು ಪಟ್ಟಣದಲ್ಲಿ ಗುರುವಾರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಸಂಸ್ಥೆಯ ಸಿರಿ ವ್ಯಾಪಾರಿ ಮಳಿಗೆಯನ್ನು ಉದ್ಘಾಟಿಸಿ ಮತನಾಡಿದರು.
ಮಹಿಳೆಯರ ಕೈಗೆ ಉದ್ಯೋಗವನ್ನು ನೀಡುವ ಮೂಲಕ ಮಹಿಳೆಯರನ್ನು ಜಾಗ್ರತಗೊಳಿಸುವ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವುದು ಶ್ಲಾಘನೀಯ. ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿ ಮಾಡಿ ಅವರಲ್ಲಿ ಸ್ಥೈರ್ಯ ತುಂಬುವುದು ನಿಜವಾದ ಸಮಾಜದ ಕಳಕಳಿ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಅಧಿಕಾರಿ ಕೆ.ವಿನ್ಸೆಂಟ್ ಮಾತನಾಡಿ, ರಾಜ್ಯದ 16 ಜಿಲ್ಲೆಗಳಲ್ಲಿ ಸಂಸ್ಥೆ ಸುಮಾರು 10 ಸಾವಿರ ಮಹಿಳೆಯರನ್ನು ಗೃಹ ಉದ್ಯಮದಲ್ಲಿ ತೊಡಗಿಸಿದೆ. ಇಲ್ಲಿ ಮಾರಾಟ ಮಾಡಿದ ನಂತರ ಬರುವ ಲಾಭವನ್ನು ನೇರವಾಗಿ ಗೃಹ ಉದ್ಯಮದಲ್ಲಿ ತೊಡಗಿಕೊಂಡಿರುವ ಮಹಿಳೆಯರಿಗೆ ಹೋಗುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಲ್ಲಿ ಉತ್ಪಾದನೆಯಾಗುವ ಹಲವಾರು ವಸ್ತುಗಳು ಗುಣ ಮಟ್ಟದಲ್ಲಿ ಉತ್ತಮವಾಗಿದ್ದು. ದೇಶ ವಿದೇಶಗಳಿಗೆ ರಫ್ತಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಪುರಸಭೆಯ ಮಾಜಿ ಅಧ್ಯಕ್ಷ ಎನ್.ಜಿ. ಹೊಂಬಳ ಹಾಗೂ ಜಯಕ್ಕ ಕಳ್ಳಿ, ಭರತ ಬರಿಗಾಲಿ, ಈಶ್ವರ ಮೆಹರವಾಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರಪಾಲ ಬರಗಾಲಿ, ಜೆ.ಎನ್. ಪೂಜಾರ, ಬಸವರಾಜ ಕುಂಬಿ, ಗುರುಪಾದಯ್ಯ ಗಡ್ಡದೇವರಮಠ. ಪುರಸಭೆಯ ಸದಸ್ಯ ನಾಗಪ್ಪ ಓಂಕಾರಿ, ಸುಭಾಷ ಓದಾನವರ ಮುಂತಾದವರು ಉಪಸ್ಥಿತರಿದ್ದರು. ನಾಗಪ್ಪ ಹಸಬಿ ನಿರೂಪಿಸಿ, ವಂದಿಸಿದರು.