ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅನೈತಿಕ ಚಟುವಟಿಕೆ: ಗಸ್ತು ತಿರುಗಲು ತಾಕೀತು

Lingaraj Badiger
Updated On : 26 Oct 2013, 10:51 am

ಶಿರಹಟ್ಟಿ: ಪಟ್ಟಣದ ಹೃದಯ ಭಾಗದಲ್ಲಿರುವ ಬೇಂದ್ರೆ ಭವನದಲ್ಲಿ ನಿತ್ಯ ಪುಢಾರಿಗಳು ಕುಡಿದ ಅಮಲಿನಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಕೊಟ್ಯಂತರ ಹಣ ಖರ್ಚು ಮಾಡಿ ನಿರ್ಮಿಸಿದ ಬೇಂದ್ರೆ ಭವನ ಗಬ್ಬೆದ್ದು ನಾರುತ್ತಿದೆ. ಎಲ್ಲೆಂದರಲ್ಲಿ ಗುಟ್ಕಾ, ತಂಬಾಕು ತಿಂದು ಉಗುಳಿದ್ದಾರೆ. ಪೊಲೀಸ್ ಇಲಾಖೆ ಅಧಿಕಾರಿಗಳು ಏನು ಕೆಲಸ ಮಾಡುತ್ತಿದ್ದೀರಿ ಎಂದು ಜಿಲ್ಲಾ ಲೋಕಾಯುಕ್ತ ಡಿಎಸ್ಪಿ ಕೆ.ಸಿ. ಅಸುಂಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಅವರು ಶುಕ್ರವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಆಗಮಿಸಿದ್ದ ಲೋಕಾಯುಕ್ತ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪಟ್ಟಣದ ಅನೇಕ ಕಡೆ ಅನೈತಿಕ ಚಟುವಟಿಕೆ ನಡೆದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ರಾತ್ರಿ ಸಮಯದಲ್ಲಿ ಪೊಲೀಸ್ ಇಲಾಖೆಯವರು ಗಸ್ತು ತಿರುಗಬೇಕು. ಇಂಥವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದರು. ಪಪಂನಲ್ಲಿ ಈ ಹಿಂದೆ ಕಂಪ್ಯೂಟರ್ ಖರೀದಿಸಲಾಗಿದೆ ಎಂದು ಹೇಳಿ ರು. 22 ಲಕ್ಷ ಖರ್ಚು ಹಾಕಿ ಅವ್ಯವಹಾರ ನಡೆಸಲಾಗಿದೆ. ಈ ಕುರಿತು ಲೋಕಾಯುಕ್ತರಿಗೆ ದೂರ ನೀಡಿದರೂ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಮುಂದಾಗದಿರುವುದಕ್ಕೆ ಕಾರಣವೇನು ಎಂದು ಪಪಂ ಸದಸ್ಯ ಸಿ.ಕೆ. ಮುಳಗುಂದ, ಜೆ.ಆರ್. ಕುಲಕರ್ಣಿ ಲೋಕಾಯುಕ್ತ ಅಧಿಕಾರಿಗಳನ್ನು ಪ್ರಶ್ನಿಸಿದರು. ಸಂತೆ ಕರ ವಸೂಲಿ ಮಾಡಿದ ಲಕ್ಷಾಂತರ ಹಣ ಸುಮಾರು 5 ತಿಂಗಳವರೆಗೂ ಸರ್ಕಾರಕ್ಕೆ ಭರಣಾ ಮಾಡದೇ ಸ್ವಂತಕ್ಕೆ ಬಳಸಿಕೊಂಡಿರುವುದು ದಾಖಲೆ ಸಮೇತ ದೂರು ನೀಡಿದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಪಪಂ ಮುಖ್ಯಾಧಿಕಾರಿ ಸೇರಿದಂತೆ ಯಾವುದೇ ಸಿಬ್ಬಂದಿ ಮಾಹಿತಿ ಕೇಳಿದರೆ ನೀಡುತ್ತಿಲ್ಲ. ಸಂತೆ ಕರ ವಸೂಲಿಗೆ ಟೆಂಡರ್ ಕರೆಯಬೇಕು ಎಂದು ಒತ್ತಾಯಿಸಿದಾಗ ಲೋಕಾಯುಕ್ತ ಅಧಿಕಾರಿ ನಿಮ್ಮ ಸಮಸ್ಯೆಗಳ ಕುರಿತು ಮೌಖಿಕ ಚರ್ಚೆಬೇಡ, ಲಿಖಿತವಾಗಿ ದೂರು ನೀಡಿದರೆ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು. ತಾಲೂಕು ಕುರಿ ಸಂಗೋಪನಾ ಹಾಗೂ ಉಣ್ಣೆ ಔದ್ಯೋಗಿಕ ಸಹಕಾರಿ ಉತ್ಪಾದಕರ ಸಂಘದಲ್ಲಿ ಭಾರಿ ಹಣದ ಅವ್ಯವಹಾರ ಮತ್ತು ಅಧಿಕಾರ ದುರ್ಬಳಕೆ ಆಗಿರುವ ಕುರಿತು ಕಳೆದ ವರ್ಷ ಮೇ ತಿಂಗಳಲ್ಲಿ ಕಾರ್ಯದರ್ಶಿ ವಿರುದ್ಧ ಸಹಕಾರಿ ಸಂಘಕ್ಕೆ ಬೀಗ ಜಡಿದು ಉಗ್ರ ಪ್ರತಿಭಟನೆ ನಡೆಸಲಾಗಿತ್ತು. ಮೇಲ್ನೋಟಕ್ಕೆ ಕಾರ್ಯದರ್ಶಿ ತಪ್ಪೆಸಗಿರುವುದು ತಿಳಿದುಬಂದಿದೆ ಎಂದು ಪ್ರಭಾರಿ ಸಹಕಾರಿ ಅಧಿಕಾರಿ ಬಸವರಾಜ ನಿಡಗುಂದಿ ಪ್ರತಿಭಟನಾಕಾರರಿಗೆ ತಿಳಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ಕೆ. ಮುನಿಯಪ್ಪ ಅವರು ನಿಯಮ 64ರ ಅಡಿ ತುರ್ತು ತನಿಖೆಗೆ ಆದೇಶ ನೀಡಿದ್ದರು. ಇಲ್ಲಿಯವರೆಗೂ ತನಿಖೆ ಪೂರ್ಣಗೊಳಿಸದೇ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ. ತಪ್ಪೆಸಗಿ ಲಕ್ಷಾಂತರ ಹಣ ನುಂಗಿದ ಕಾರ್ಯದರ್ಶಿ ರಾಜಾರೋಷವಾಗಿ ತಿರುಗಾಡುತ್ತಿದ್ದು, ಲೋಕಾಯುಕ್ತರು ಶೀಘ್ರ ತನಿಖೆ ನಡೆಸಿ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಸಂಘದ ಅಧ್ಯಕ್ಷ ಶಿದ್ಲಿಂಗಪ್ಪ ಖಾನಾಪುರ ಹಾಗೂ ಮಂಜುನಾಥ ಘಂಟಿ, ದೇವಪ್ಪ ಬಟ್ಟೂರ ದೂರು ನೀಡಿದರು.

ಮುಂಡರಗಿ: ಇಂದು ವಿದ್ಯುತ್ ವ್ಯತ್ಯಯ
ಮುಂಡರಗಿ: ತಾಲೂಕಿನಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಮತ್ತು ಕುಡಿವ ನೀರಿನ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಮಿತ್ತ ಡಂಬಳ 110 ಕೆವಿ ವಿದ್ಯುತ್ ಉಪಕೇಂದ್ರದಿಂದ ಮುಂಡರಗಿ ಉಪಕೇಂದ್ರದ ವರೆಗೆ ಒಂಟಿ ಮಾರ್ಗದ ಜತೆಗೆ ಇನ್ನೊಂದು ಹೆಚ್ಚುವರಿ ಮಾರ್ಗವನ್ನು ನಿರ್ಮಿಸುವ ಕಾಮಗಾರಿಯನ್ನು ತ್ವರಿತವಾಗಿ ಕೈಗೊಂಡಿದ್ದು, ಅ. 26ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಮುಂಡರಗಿ 110 ಕೆವಿ ವಿದ್ಯುತ್ ಉಪಕೇಂದ್ರದಿಂದ ಮತ್ತು ಸಿಂಗಟಾಲೂರು 33 ಕೆವಿ ವಿದ್ಯುತ್ ಉಪಕೇಂದ್ರದಿಂದ ಮತ್ತು ಕೊಪ್ಪಳ ತಾಲೂಕು ಬೆಟಗೇರಾ ವಿದ್ಯುತ್ ಉಪಕೇಂದ್ರಕ್ಕೆ ಸಂಬಂಧಪಟ್ಟ ಎಲ್ಲ ಶಹರ ಮತ್ತು ಗ್ರಾಮೀಣ ಹಾಗೂ ಕುಡಿಯುವ ನೀರಿನ ಯೋಜನೆಯ ಪ್ರದೇಶಕ್ಕೆ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಲಿದ್ದು, ಕಾರಣ ಸಾರ್ವಜನಿಕರು ಪ್ರಕಟಣೆ ಗಮನಿಸಿ ಸಹಕರಿಸುವಂತೆ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement