ಕೋಟೆಯಲ್ಲಿ ರಾಟಿ ಚಲನಚಿತ್ರ ಚಿತ್ರೀಕರಣ
ಗಜೇಂದ್ರಗಡ: ಸ್ಥಳೀಯ ಗುಡ್ಡದ ಮೇಲಿರುವ ಐತಿಹಾಸಿಕ ಕೋಟೆಯಲ್ಲಿ ಶುಕ್ರವಾರ ರಾಟಿ ಕನ್ನಡ ಚಲನಚಿತ್ರದ ಚಿತ್ರೀಕರಣ ಭರದಿಂದ ಜರುಗಿತು. ಈಗಾಗಲೇ ಕನ್ನಡದ ಕಿಚ್ಚ ಸುದೀಪ ಅಭಿನಯದ ವೀರಮದಕರಿ, ತೆಲುಗಿನ ಜೂನಿಯರ್ ಎನ್‌ಟಿಆರ್ ನಟಿಸಿದ ಬೃಂದಾವನಂ, ಯಶ್ ಅಭಿನಯದ ಜಾನು, ದುನಿಯಾ ವಿಜಿ ಅಭಿನಯಿಸಿದ ಭೀಮಾತೀರದಲ್ಲಿ ಹಾಗೂ ಬಂಗಾಲಿ ಚಲನಚಿತ್ರ ಕೋಕಾ 420, ಅಲ್ಲದೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬೃಂದಾವನ ಚಿತ್ರಗಳು ಈ ಕೋಟೆಯಲ್ಲಿ ಚಿತ್ರೀಕರಣಗೊಂಡು ಯಶಸ್ಸು ಕಂಡ ಬೆನ್ನಲ್ಲೇ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ನಿರ್ಮಾಣದ ಹರಿಮೋನಿಯಂರೀಸ್ ಲಾಂಚ್‌ನದಲ್ಲಿ ತಯಾರಾಗುತ್ತಿರುವ ರಾಟಿ ಚಿತ್ರದ ಹಲವಾರು ದೃಶ್ಯಗಳನ್ನು ಎ.ಪಿ. ಅರ್ಜುನ್ ಚಿತ್ರೀಕರಿಸಿದರು.
ಬಳಿಕ ಚಿತ್ರದ ಪ್ರೊಡೆಕ್ಷನ್ ಮ್ಯಾನೇಜರ ವಿ. ಗಿರೀಶ ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ಪ್ರೇಮಕಥಾ ಹಂದರವುಳ್ಳ, ಸಾಹಸಮಯ ಚಿತ್ರವಾಗಿದ್ದು, ಚಿತ್ರದ ನಾಯಕನಾಗಿ ಯುವ ನಟ ಧನಂಜಯ, ನಾಯಕಿಯಾಗಿ ಲೂಸಿಯಾ ಚಿತ್ರ ಖ್ಯಾತಿಯ ಶ್ರುತಿ ಹರಿಹರ, ಖಳನಾಯಕರಾಗಿ ಉದಯ, ಹಾಸ್ಯ ಕಲಾವಿದರಾಗಿ ಬುಲೆಟ್ ಪ್ರಕಾಶ, ಸುಚಿಂದ್ರ ಪ್ರಸಾದ ಅಲ್ಲದೇ ಇತರರ ಅಭಿನಯವಿದ್ದು, ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ, ಕೆ. ರವಿವರ್ಮ ಸಾಹಸ, ದೀಪು ಎಸ್. ಕುಮಾರ ಸಂಕಲನ ಒದಗಿಸಿದ್ದು, ವಿ. ಹರಿಕೃಷ್ಣ ನಿರ್ಮಾಣ ಜತೆಗೆ ಸಂಗೀತ ನೀಡಿದ್ದಾರೆ.
ಈಗಾಗಲೇ ಶೇ. 80ರಷ್ಟು ಭಾಗ ಚಿತ್ರೀಕರಣ ಪೂರ್ಣಗೊಂಡಿದೆ. ಡಿಸೆಂಬರ್ ವೇಳೆಗೆ ಚಿತ್ರ ಬಿಡುಗಡೆಯಾಗಲಿದೆ ಎಂದರು.