ಸಿಬ್ಬಂದಿ ಕೊರತೆ: ಅಭಿವೃದ್ಧಿಗೆ ಹಿನ್ನಡೆ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಅ. 25
ಶಿರಹಟ್ಟಿ ಪಪಂನಲ್ಲಿ ಅನೇಕ ವರ್ಷಗಳಿಂದ ಶಾಶ್ವತ ಹುದ್ದೆಗಳು ಭರ್ತಿಯಾಗಿಲ್ಲ. ಪಟ್ಟಣದ ಅಭಿವೃದ್ಧಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು, ಕ್ರಿಯಾಯೋಜನೆ ಸಿದ್ಧಪಡಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕಿರಿಯ ಅಭಿಯಂತರ ಹಾಗೂ ಸಿಬ್ಬಂದಿ ಕೊರತೆ ಎದ್ದುಕಾಣುತ್ತಿದೆ.
ಅಲ್ಲದೆ, ಹೆಚ್ಚಳವಾದ ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರ ನೇಮಕವಾಗದೆ ಪಟ್ಟಣದಲ್ಲಿ ಮೂಲ ಸೌಕರ್ಯಗಳ ಸಮಸ್ಯೆಗೆ ಪರಿಹಾರ ಕಾಣದಾಗಿದೆ.
ಚುನಾವಣೆ ಮುಗಿದು 6 ತಿಂಗಳ ನಂತರ ಕಾಂಗ್ರೆಸ್ ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಪ್ರಕಟಿಸಿದ್ದು, ಅಧಿಕಾರದ ಗದ್ದುಗೆ ಏರಿದ ನಂತರವೂ ಆಡಳಿತ ಮಂಡಳಿಯವರಿಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸದ್ಯ ಸಿಬ್ಬಂದಿಯ ಕೊರತೆ ಅಡ್ಡಗಾಲಾಗಿದೆ. ಸೆ. 11 ರಂದು ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿದ್ದು, ಕ್ರಿಯಾ ಯೋಜನೆ ಸಿದ್ಧಪಡಿಸಲು ಮತ್ತು ಅಭಿವೃದ್ಧಿ ಕಾರ್ಯ ಕುರಿತು ಚರ್ಚಿಸಲು ಸಾಧ್ಯವಾಗುತ್ತಿಲ್ಲ.
25ಕ್ಕೂ ಹೆಚ್ಚು ಹುದ್ದೆ ಭರ್ತಿಯಾಗಬೇಕು: ಜನಸಂಖ್ಯೆಗೆ ಅನುಗುಣವಾಗಿ ಪಟ್ಟಣ ಪಂಚಾಯಿತಿಯಲ್ಲಿ ಇರಬೇಕಾದ ಸಿಬ್ಬಂದಿ ಬಗ್ಗೆ ರಾಜ್ಯ ಸರ್ಕಾರ ನಿಯಮವೊಂದನ್ನು ರಚಿಸಿದೆ. ಇದರ ಪ್ರಕಾರ ಸ್ಯಾನಿಟರಿ ಇನ್ಸ್ಫೆಕ್ಟರ್, ಪೌರ ಕಾರ್ಮಿಕರು, ಕರ ವಸೂಲಿಗಾರು ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಹುದ್ದೆಗಳು ಭರ್ತಿಯಾಗಬೇಕಾಗಿದೆ. ಸುಮಾರು 10 ವರ್ಷಗಳಿಂದಲೂ ಈ ಎಲ್ಲ ಹುದ್ದೆ ಖಾಲಿ ಇದ್ದು, ಬರೀ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡವರ ಮೇಲೆ ಸರ್ಕಾರಿ ಕೆಲಸ ನಡೆಯುತ್ತಿದೆ. 5 ವರ್ಷದಿಂದ ಕಿರಿಯಅಭಿಯಂತರ ಹುದ್ದೆಯೂ ಖಾಲಿ ಇದೆ. ರಾಜ್ಯ ಹಣಕಾಸು ಆಯೋಗ (ಎಸ್ಎಫ್ಸಿ) ಹಾಗೂ 13ನೇ ಹಣಕಾಸು ಯೋಜನೆ ಅಡಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಕೋಟ್ಯಂತರ ಅನುದಾನ ಬಿಡುಗಡೆಯಾಗಿದೆ. ಅಲ್ಲದೆ ಪಟ್ಟಣ ಪಂಚಾಯಿತಿ ಸಂಗ್ರಹಿಸಿದ ವಿವಿಧ ಕರಗಳಲ್ಲಿನ ಹಣ ಖರ್ಚಾಗದೇ ಇರುವುದು ಅಭಿವೃದ್ಧಿ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಶೇ. 22.75ರ ಅನುದಾನ, ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಮೀಸಲಿಡುವ ಅನುದಾನಗಳು ಸಮರ್ಪಕ ಬಳಕೆಗೆ ಸಿಬ್ಬಂದಿ ಅವಶ್ಯಕವಾಗಿದೆ.
ಸಿಬ್ಬಂದಿ ಕೊರತೆಯಿಂದ ಶಿರಹಟ್ಟಿ ಪಟ್ಟಣ ಪಂಚಾಯಿತಿಯ ಪಟ್ಟಣದ ಅನೇಕ ಸಮಸ್ಯೆಗೆ ಮುಕ್ತಿ ಕಾಣದಾಗಿದೆ. ಅನೇಕ ಬಡಾವಣೆಗಳಲ್ಲಿ ರಸ್ತೆ, ಚರಂಡಿಗಳು ಅಧೋಗತಿಗೆ ತಲುಪಿವೆ. ಕುಡಿಯುವ ನೀರಿಗಾಗಿ ಪರಿತಪಿಸುವ ಪ್ರಸಂಗ ನಿಂತಿಲ್ಲ. ಜನತೆ ಒಂದಿಲ್ಲೊಂದು ಸಮಸ್ಯೆ ಹೊತ್ತು ನಿತ್ಯ ಕಾರ್ಯಾಲಯಕ್ಕೆ ಅಲೆದಾಡುತ್ತಿರುವುದು ಸಾಮಾನ್ಯವಾಗಿದೆ.
-ಮಹದೇವಪ್ಪ ಎಂ. ಸ್ವಾಮಿ