ಜನಪದ ಸಮಸ್ತ ಕನ್ನಡಿಗರ ಆಸ್ತಿ
ಕನ್ನಡಪ್ರಭ ವಾರ್ತೆ, ಗದಗ, ಅ. 26
ಜಾನಪದ ಈ ನೆಲದ ಮೂಲ ಸಂಸ್ಕೃತಿಯನ್ನು ಹೊಂದಿದೆ. ಜನಪದ ಸಮಸ್ತ ಕನ್ನಡಿಗರ ಆಸ್ತಿಯಾಗಿದ್ದು, ಅದನ್ನು ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಅಂಬಳಿಕೆ ಹಿರಿಯಣ್ಣ ಹೇಳಿದರು.
ನಗರದ ಜ. ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಶನಿವಾರ ಜರುಗಿದ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಾನಪದ ಕಲೆಗಳು ಅಳಿವಿನಂಚಿನಲ್ಲಿದ್ದು, ಮುಂದಿನ ಪೀಳಿಗೆಗೂ ಈ ಕಲೆಯನ್ನು ಪರಿಚಯಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.
ಜಾನಪದ ಕಲೆಗಳ ರಕ್ಷಣೆಗಾಗಿ ಜಾನಪದ ವಿಶ್ವವಿದ್ಯಾಲಯ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈಗಾಗಲೇ ಜಾನಪದ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರಗಳನ್ನು ಹಾಗೂ ವಿವಿಧ ಸರ್ಟಿಫಿಕೇಟ್ ಕೋರ್ಸ್ಗಳನ್ನು ಪ್ರಾರಂಭಿಸಿದೆ. ಜಾನಪದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಜನಪದ ವಿವಿ ಅತಿ ಕಡಿಮೆ ಅವಧಿಯಲ್ಲಿ ಮಹತ್ವದ ಕಾರ್ಯಗಳನ್ನು ಹಮ್ಮಿಕೊಂಡಿದೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನಲ್ಲಿ 106 ಎಕರೆ ಪ್ರದೇಶವಿದೆ. ಇದರಲ್ಲಿ 46 ಎಕರೆ ಪ್ರದೇಶದಲ್ಲಿ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ವಿವಿ ಆಡಳಿತ ಕಚೇರಿಯೂ ಸದ್ಯ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹಂತ-ಹಂತವಾಗಿ ವಿಶ್ವ ವಿದ್ಯಾಲಯದ ಅಭಿವೃದ್ಧಿ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಪ್ರಾದೇಶಿಕ ಕೇಂದ್ರ ಪ್ರಾರಂಭ: ಜಾನಪದ ಶಿಕ್ಷಣ ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಬೀದರ, ಮಲೆಮಹಾದೇಶ್ವರದಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ತೆರೆಯಲಾಗಿದೆ. ಆಸಕ್ತ ಸ್ವಯಂ ಸೇವಾ ಸಂಘಗಳಿಗೆ ಪ್ರಾದೇಶಿಕ ಕೇಂದ್ರ ತೆರೆಯಲು ಅನುಮತಿ ನೀಡಲಾಗುವುದು. ರಾಜ್ಯದಲ್ಲಿ ಪ್ರತಿ ಗ್ರಾಮಗಳ ವಿಶೇಷತೆ ಹಾಗೂ ಅಲ್ಲಿನ ಜನರ ಜೀವನ ಕ್ರಮದ ಮಾಹಿತಿ ಒದಗಿಸುವ ಗ್ರಾಮ ಚರಿತ್ರೆ ಕೋಶವನ್ನು ತಯಾರಿಸುವ ಕಾರ್ಯವನ್ನು ಈಗಾಗಲೇ ಕೈಗೆತ್ತಿಕೊಂಡಿದ್ದು, 59 ಸಾವಿರ ಜನವಸತಿ ಪ್ರದೇಶಗಳ ಪೈಕಿ ಈಗಾಗಲೇ 705 ಗ್ರಾಮಗಳ ಚರಿತ್ರೆಯನ್ನು ಪೂರ್ಣಗೊಳಿಸಲಾಗಿದೆ. ಈ ಕಾರ್ಯಕ್ಕಾಗಿ 400 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಡಾ. ಹಿರಿಯಣ್ಣ ವಿವರಿಸಿದರು.
ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ. ಸಿದ್ಧಣ್ಣ ಜಕಬಾಳ ಹಾಗೂ ಅಧ್ಯಕ್ಷತೆ ವಹಿಸಿದ್ದ ಪರಿಷತ್ ರಾಜ್ಯಾಧ್ಯಕ್ಷ ಟಿ. ತಿಮ್ಮೇಗೌಡ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ಹಲವು ಹಿರಿಯ ಜಾನಪದ ಕಲಾವಿದರನ್ನು ಸನ್ಮಾನಿಸಲಾಯಿತು. ಜಾನಪದ ಪರಿಷತ್ ಮ್ಯಾನೇಜಿಂಗ್ ಟ್ರಸ್ಟಿ ಇಂದಿರಾ ಬಾಲಕೃಷ್ಣ, ಗೌರವ ಕಾರ್ಯದರ್ಶಿ ಎಚ್.ಆರ್. ರಾಜೇಗೌಡ, ರಾಜ್ಯ ಸಂಚಾಲಕ ಎಸ್. ಬಾಲಾಜಿ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಣ್ಣ ಕುರಿ, ಚನ್ನಪ್ಪ ಅಂಗಡಿ, ಡಾ. ಎಂ.ಎನ್.ಅಂಬಲಿಯವರ, ಡಾ. ಪ್ರಭು ಗಂಜಿಹಾಳ ಉಪಸ್ಥಿತರಿದ್ದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಶಕುಂತಲಾ ಸಿಂಧೂರ ವಂದಿಸಿದರು.
ಕೃಷಿ ವಿಜ್ಞಾನ ಕೋಶ
ನಾಡಿನ ಕೃಷಿಯನ್ನು ಜೀವಂತವಾಗಿಡುವ ನಿಟ್ಟಿನಲ್ಲಿ ವಿವಿಧ 6 ಭಾಷೆಗಳಲ್ಲಿ ಕೃಷಿ ವಿಜ್ಞಾನ ಕೋಶ ರಚಿಸುವ ಕಾರ್ಯವನ್ನು ಜಾನಪದ ವಿವಿ ಕೈಗೆತ್ತಿಕೊಂಡಿದೆ. ಕೃಷಿ ಚಟುವಟಿಕೆ ಸಂಬಂಧಿಸಿದಂತೆ ವಿವಿಧ ಭಾಷೆಗಳಿಗೂ ಈ ಕೋಶವನ್ನು ಭಾಷಾಂತರಿಸುವ ಗುರಿ ಹೊಂದಲಾಗಿದೆ. ಮುದ್ರಣಕ್ಕಾಗಿ ರು. 60 ಲಕ್ಷ ವೆಚ್ಚವನ್ನು ಸರ್ಕಾರ ಭರಿಸಿದರೆ ಶೀಘ್ರದಲ್ಲಿ ಈ ಕಾರ್ಯ ಪ್ರಾರಂಭಿಸಲಾಗುವುದು.
ಟ ಡಾ. ಅಂಬಳಿಕೆ ಹಿರಿಯಣ್ಣ
ಜಾನಪದ ವಿವಿ ಕುಲಪತಿ